ಕೃಷಿ ಕುಟುಂಬದ ಹಿನ್ನೆಲೆಯ ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲ್​ ಮುನೇನಕೊಪ್ಪಗೆ ಸಚಿವ ಸ್ಥಾನ

Aug 4, 2021

Shankar Patil Munenakoppa: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿರುವ ಶಂಕರ ಪಾಟೀಲ್ ಮುನೇನಕೊಪ್ಪ, ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತಾರೆ. ಯಾರೇ ಬಂದು ಕೇಳಿದರೂ ಸಹಾಯ ಮಾಡುತ್ತಾರೆ. ಗ್ರಾಮೀಣ ಪ್ರದೇಶದ ಜನರ ಪಾಲಿಗೆ ಇವರು ದೇವರ ಹಾಗೆ ಎಂಬ ಮಾತು ಕ್ಷೇತ್ರದಲ್ಲಿ ಇರುವುದಂತೂ ಖರೆ.

ಇಂದು ಬಸವರಾಜ ಬೊಮ್ಮಾಯಿ‌ ನೇತೃತ್ವದ ಹೊಸ ಸರ್ಕಾರದಲ್ಲಿ ((CM Basavaraj Bommai Cabinet) ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ (Shanakar Patil Munenakoppa) ಸಚಿವರಾಗಿದ್ದಾರೆ. ಸಹಜವಾಗಿ ಅವರ ಕ್ಷೇತ್ರದ, ಸ್ವಗ್ರಾಮದ ಜನರು ಹರ್ಷಿತರಾಗಿದ್ದಾರೆ. 52 ವರ್ಶದ ಶಂಕರ ಪಾಟೀಲ್ ಅವರ ತಂದೆ ಬಸನಗೌಡ ಮುನೇನಕೊಪ್ಪ, ತಾಯಿ ಗಂಗಮ್ಮ. ಪತ್ನಿ ಪ್ರಭಾವತಿ. ಇಬ್ಬರು ಗಂಡು ಮಕ್ಕಳು. ಜೂನ್ 6 ರಂದು ಇವರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಲಿಂಗಾಯತ – ಪಂಚಮಸಾಲಿ ಸಮುದಾಯದ‌ ನಾಯಕನಾಗಿಯೂ ಶಂಕರ್ ಪಾಟೀಲ್ ಗುರುತಿಸಿಕೊಂಡಿದ್ದಾರೆ. ಇದು ಸಹ ಅವರು ಮಂತ್ರಿ ಪದವಿಗೇರಲು ಬಹುಮುಖ್ಯ ಕಾರಣ.

ರಾಜಕೀಯ ನಡೆ
ಮೂಲತಃ ಕೃಷಿ ಕುಟುಂಬದ ಹಿನ್ನೆಲೆಯಿಂದ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದರೂ ಶಂಕರ ಪಾಟೀಲ್ ಗೆ ರಾಜಕೀಯ ಹೊಸದಲ್ಲ. ಅಜ್ಜಂದಿರ ಕಾಲದಿಂದಲೂ ರಾಜಕಾರಣ ಶಂಕರ್ ಪಾಟೀಲ್ ಕುಟುಂಬದ ರಕ್ತದಲ್ಲಿದೆ. ಶಂಕರ್ ಪಾಟೀಲ್ ತಂದೆ ರಾಜಕೀಯದಿಂದ ದೂರವೇ ಉಳಿದು ಕೃಷಿಯತ್ತ ಗಮನಹರಿಸಿದ್ದರು. ಆದರೆ ಶಂಕರ ಪಾಟೀಲ್ ಮಾತ್ರ ಮತ್ತೆ ತಮ್ಮ ಅಜ್ಜಂದಿರಂತೆ ರಾಜಕೀಯದತ್ತ ಒಲವು ತೋರಿದರು. ವಿದ್ಯಾರ್ಥಿ ದೆಸೆಯಿಂದಲೂ ಶಂಕರ ಪಾಟೀಲ್ ಮುನೇನಕೊಪ್ಪ ನಾಯಕತ್ವ ಗುಣಗಳನ್ನು ಪ್ರದರ್ಶಿಸಿದ್ದರು. ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಪಾಟೀಲ್ ಉತ್ತಮ ಕಬಡ್ಡಿ ಕ್ರೀಡಾಪಟುವೂ ಹೌದು. 1989 ರಲ್ಲಿ ಅಧಿಕೃತವಾಗಿ ರಾಜಕೀಯಕ್ಕೆ ಬಂದ ಶಂಕರ ಪಾಟೀಲ್, ಅಂದಿನ. ಜನತಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 2008 ರವರೆಗೂ ಜನತಾದಳದಲ್ಲಿಯೇ ಸಕ್ರಿಯವಾಗಿದ್ದ ಪಕ್ಷದಲ್ಲಿದ್ದ ಶಂಕರ ಪಾಟೀಲ್ ಅನೇಕ ಸ್ತರಗಳಲ್ಲಿ ಕೆಲಸ ಮಾಡಿದ್ದಾರೆ.

Source: Tv9 kannada