ವಿದೇಶಗಳಿಂದ ಬಂದವರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಅಗತ್ಯವಿಲ್ಲ
ಬೆಂಗಳೂರು: ವಿದೇಶಗಳಿಂದ ನಗರಕ್ಕೆ ಬರುವವರಿಗೆ ಇನ್ನು ಮುಂದೆ ಕೊವಿಡ್ ಪರೀಕ್ಷೆ (ಆರ್ಟಿಪಿಸಿಅರ್) ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಯಾಣಿಕರ ಆರ್ಟಿಪಿಸಿಆರ್ ಪರೀಕ್ಷಾ ವರದಿಗಳನ್ನು ಪರಿಶೀಲಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ವಿಮಾನವು ಲ್ಯಾಂಡ್ ಆದ ನಂತರ ನಿಲ್ದಾಣದಿಂದ ಹೊರಬರುವ ಮೊದಲು ಪರೀಕ್ಷಾ ವರದಿಗಳನ್ನು ಪ್ರಯಾಣಿಕರು ತೋರಿಸಬೇಕಿಲ್ಲ. ಆದರೆ ಪ್ರಯಾಣಿಕರು ಏರ್ ಸುವಿಧಾ ಪೋರ್ಟಲ್ನಲ್ಲಿ ವರದಿಯ ಪ್ರತಿಯನ್ನು ಅಪ್ಲೋಡ್ ಮಾಡಬೇಕು. ಪ್ರಯಾಣಿಕರು ವಿಮಾನ ಹತ್ತುವ ಮೊದಲು ವಿಮಾನಯಾನ ಕಂಪನಿಗಳು ಈ ವರದಿಗಳನ್ನು ಪರೀಕ್ಷಿಸಬೇಕು ಎಂದು ಸರ್ಕಾರ ಸೂಚಿಸಿದೆ.
ಕರ್ನಾಟಕದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊವಿಡ್ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ. ಮಾರ್ಚ್ 2020ರ ನಂತರ ಇದೇ ಮೊದಲ ಬಾರಿಗೆ ಈಜುಕೊಳಗಳನ್ನು ಬಳಕೆಗೆ ಮುಕ್ತಗೊಳಿಸಲಾಗಿದೆ. ಅಥ್ಲೆಟಿಕ್ ಕ್ರೀಡಾಪಟುಗಳಿಗೆ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಎರಡು ಡೋಸ್ ಲಸಿಕೆ ಪಡೆದುಕೊಂಡವರು ಮಾತ್ರ ಈಜುಕೊಳಗಳಿಗೆ ಹೋಗಬಹುದು ಎಂದು ಸೂಚಿಸಲಾಗಿದೆ.
ಅಕ್ಟೋಬರ್ 25ರಿಂದ 1 ರಿಂದ 5ನೇ ತರಗತಿ ಶಾಲೆ ಆರಂಭ
ಅಕ್ಟೋಬರ್ 25ರಿಂದ 1 ರಿಂದ 5ನೇ ತರಗತಿ ಶಾಲೆ ಆರಂಭ ಆಗಲಿದೆ. ಶಾಲೆ ಆರಂಭಿಸುವುದಕ್ಕೆ ಶಿಕ್ಷಣ ಇಲಾಖೆಯಿಂದ ತೀರ್ಮಾನ ಮಾಡಲಾಗಿದೆ. ಶಾಲೆ ಆರಂಭಕ್ಕೆ ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 1 ರಿಂದ 5ನೇ ತರಗತಿವರೆಗೆ ಶಾಲೆ ಆರಂಭಕ್ಕೆ ತಜ್ಞರ ಸಮ್ಮತಿ ಒಪ್ಪಿಗೆ ನೀಡಿದೆ. ಮಕ್ಕಳನ್ನ ಶಾಲೆಗೆ ಕಳಿಸಲು ಪೋಷಕರ ಅನುಮತಿ ಕಡ್ಡಾಯ ಎಂದು ತಿಳಿಸಲಾಗಿದೆ. ಶಿಕ್ಷಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು ಎಂದೂ ಹೇಳಲಾಗಿದೆ. ತರಗತಿಯಲ್ಲಿ ಶೇಕಡಾ 50ರಷ್ಟು ಮಕ್ಕಳಿಗೆ ಮಾತ್ರ ಅವಕಾಶ ನೀಡಿ ಸದ್ಯ ಶಾಲೆ ತೆರೆಯಲಾಗುವುದು. ತರಗತಿಯಲ್ಲಿ ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚನೆ ನೀಡಲಾಗಿದೆ.
ಈ ಬಗ್ಗೆ ಟಿವಿ9ಗೆ ಶಿಕ್ಷಣ ಇಲಾಖೆ ಸಚಿವ ಬಿ.ಸಿ. ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ದಸರಾ ಬಳಿಕ ಶಾಲೆ ಆರಂಭಿಸುವುದಾಗಿ ನಾವು ಹೇಳಿದ್ದೆವು. ಅದರಂತೆ ಶಾಲೆ ಆರಂಭ ಆಗಲಿದೆ. ಆದರೆ, ಮಕ್ಕಳಿಗೆ ಹಾಜರಾತಿ ಕಡ್ಡಾಯ ಇರುವುದಿಲ್ಲ. ಶಾಲೆಗೆ ಹಾಜರಾಗಲು ಮಕ್ಕಳಿಗೆ ಒತ್ತಾಯ ಇರುವುದಿಲ್ಲ. ಮಕ್ಕಳನ್ನ ಶಾಲೆಗೆ ಕಳಿಸಲು ಪೋಷಕರ ಒಪ್ಪಿಗೆ ಬೇಕು. ಜಾಗದ ಕೊರತೆ ಇರುವಲ್ಲಿ ಶೇ.50ರಷ್ಟು ಮಕ್ಕಳು ಮಾತ್ರ ಹಾಜರಾಗಬೇಕು ಎಂದು ನಾಗೇಶ್ ತಿಳಿಸಿದ್ದಾರೆ.
ಸದ್ಯಕ್ಕೆ LKG, UKG ಬಗ್ಗೆ ಇಲಾಖೆ ನಿರ್ಧಾರ ಮಾಡಿಲ್ಲ. ಅಕ್ಟೋಬರ್ 21 ಅಥವಾ 25ರಂದು ಶಾಲೆ ಆರಂಭಿಸಲು ನಿರ್ಧಾರ ಮಾಡಲಾಗಿದೆ. ಫೀಸ್ ಬಗ್ಗೆ ಕೋರ್ಟ್ನಿಂದ ಆದೇಶ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಟಿವಿ9ಗೆ ಶಿಕ್ಷಣ ಇಲಾಖೆ ಸಚಿವ ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
Source:tv9kannada