ವಿಜಯಪುರದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ; ಸ್ವತಃ ಗೋದಿ ಕಟಾವು ಮಾಡಿ ಯಂತ್ರ ಚಲಾಯಿಸಿದ ಸಚಿವ ಬಿ.ಸಿ ಪಾಟೀಲ್

Feb 23, 2021

ವಿಜಯಪುರ: ಜಿಲ್ಲೆಯಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೃಷಿ ಸಚಿವ ಬಿ.ಸಿ ಪಾಟೀಲ್ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿದೆ. ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಸ್ಥಳೀಯ ಶಾಸಕ ನಡಹಳ್ಳಿ ಸಾಥ್ ನೀಡಿದ್ದಾರೆ. ಜೊತೆಗೆ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಗ್ರಾಮದ ರೈತರೊಂದಿಗೆ ಸಭೆ ನಡೆಸಲಾಗಿದೆ. ಸಚಿವ ಬಿಸಿ ಪಾಟೀಲ್​ ಕೃಷಿಗೆ ಸಂಬಂಧಿಸಿದ ಯಂತ್ರಗಳನ್ನು ವೀಕ್ಷಿಸಿದ್ದು, ಸ್ವತಃ ಗೋಧಿ ಕಟಾವು ಮಾಡಿ ಯಂತ್ರ ಚಲಾಯಿಸಿದ್ದಾರೆ.

ನಂತರ ಪ್ರಗತಿಪರ ರೈತ ಪವಾಡೆಪ್ಪ ವಡ್ಡರ್ ಜಮೀನಿಗೆ ಬಿ.ಸಿ ಪಾಟೀಲ್​ ಭೇಟಿ ನೀಡಿದ್ದಾರೆ. ಜೊತೆಗೆ ಜಮೀನಿನಲ್ಲಿರುವ ದೇಸಿ ಕುರಿ-ಕೋಳಿ, ಎಮ್ಮೆ ಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿ, ರೈತ ಪವಾಡೆಪ್ಪ ಸ್ವಾವಲಂಬಿಯಾಗಿ ಜೀವನ ನಡೆಸುತ್ತಿದ್ದಾರೆ ಎಂದು ಹೊಗಳಿದ್ದಾರೆ. ಹಾಗೂ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕುರಿತಂತೆ ಮಾತನಾಡಿದ ಸಚಿವ ಬಿಸಿ ಪಾಟೀಲ್​, ಕೃಷಿಕರು ಸ್ವಾವಲಂಬಿಯಾಗಬೇಕು ಎಂದು ಸಲಹೆ ನೀಡಿದ್ದಾರೆ.

ಕಳೆದ ಜನವರಿ ತಿಂಗಳಿನಲ್ಲಿ ಕೋಲಾರದಲ್ಲಿ ನಡೆದ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಕೃಷಿ ಸಚಿವರು ದಿನ ಕಳೆದಿದ್ದರು. ಸಾವಯವ ಕೃಷಿ ಮಾಡುತ್ತಿರುವ ರೈತ ಮಹಿಳೆ ಅಶ್ವತ್ಥಮ್ಮ ತೋಟಕ್ಕೆ ಭೇಟಿ ನೀಡಿದ ಸಚಿವ ಬಿ.ಸಿ.ಪಾಟೀಲ್ ರೈತ ಮಹಿಳೆಯ ಕೃಷಿ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಅಲ್ಲಿನ ಜನರು, ಸಾವಯವ‌ ಹಾಗೂ ಸಮಗ್ರ ಕೃಷಿ ಪದ್ಧತಿಯಲ್ಲಿ ಬೇಸಾಯ ಮಾಡುತ್ತಿರುವ ಅಶ್ವತ್ಥಮ್ಮ ರಾಗಿ, ಭತ್ತ, ವಿವಿಧ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆದಿದ್ದಾರೆ. ಹೈನುಗಾರಿಕೆ ಹಾಗೂ ಕುರಿ ಸಾಕಾಣಿಕೆಯನ್ನು ಮಾಡುತ್ತಿರುವ ಅವರು ಮಾದರಿ ರೈತ ಮಹಿಳೆ ಅನಿಸಿಕೊಂಡಿದ್ದಾರೆ.

Source: Tv9Kannada