Mysuru Dasara 2021: ದಸರಾ ಮೆರಗು ಹೆಚ್ಚಿಸೋ ಗಜಪಡೆ ಹಾಗೂ ಮಾವುತರಿಗೆ ವಿಮಾ ಸುರಕ್ಷತೆ

Sep 15, 2021

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಮೆರಗನ್ನು ಹೆಚ್ಚಿಸುವ ಗಜಪಡೆ ಹಾಗೂ ಮಾವುತರಿಗೆ ವಿಮಾ ಸುರಕ್ಷತೆ ನೀಡಲಾಗುತ್ತಿದೆ. ಅರಣ್ಯ ಇಲಾಖೆ ಥರ್ಡ್ ಪಾರ್ಟಿಯಿಂದ ವಿಮೆ ಮಾಡಿಸಿದೆ. ಸಾರ್ವಜನಿಕ ಆಸ್ತಿ ನಷ್ಟವಾದರೂ ಅದಕ್ಕೂ ವಿಮಾ ಸುರಕ್ಷತೆಯನ್ನು ಮಾಡಿಸಲಾಗಿದೆ.

ಜಂಬೂಸವಾರಿಯ ಕ್ಯಾಪ್ಟನ್ ಅಭಿಮನ್ಯು ಸೇರಿ ಗಂಡು ಆನೆಗಳಿಗೆ ತಲಾ ₹3.5 ಲಕ್ಷ ವಿಮೆ ಮಾಡಿಸಲಾಗಿದೆ. ಹೆಣ್ಣಾನೆಗಳಿಗೆ ₹2.5 ಲಕ್ಷ ವಿಮೆ, 16 ಮಾವುತರಿಗೆ ತಲಾ 1 ಲಕ್ಷ ರೂಪಾಯಿ ವಿಮೆ, ಸಾರ್ವಜನಿಕ ಆಸ್ತಿಗೆ ನಷ್ಟವಾದರೆ 30 ಲಕ್ಷ ರೂ. ವಿಮೆಯನ್ನು ಮಾಡಿಸಲಾಗಿದ್ದು ಎಲ್ಲಾ ವಿಮೆ ಅಕ್ಟೋಬರ್ 24ರವರೆಗೂ ಚಾಲ್ತಿಯಲ್ಲಿರಲಿದೆ ಎಂದು ಟಿವಿ9ಗೆ ಡಿಸಿಎಫ್ ಡಾ ವಿ ಕರಿಕಾಳನ್ ಮಾಹಿತಿ ನೀಡಿದ್ದಾರೆ.

ಈ ಸಾಲಿನ ದಸರಾದಲ್ಲಿ ಮತ್ತಿಗೋಡು ಶಿಬಿರದಿಂದ ಅಂಬಾರಿ ಆನೆ ಅಭಿಮನ್ಯು, ಗೋಪಾಲಸ್ವಾಮಿ ಬರಲಿವೆ. ಆನೆಕಾಡು ಶಿಬಿರದ ವಿಕ್ರಮ, ದುಬಾರೆ ಶಿಬಿರದ ಕಾವೇರಿ, ಧನಂಜಯ, ನಾಗರಹೊಳೆಯ ದೊಡ್ಡ ಹರವೆ ಶಿಬಿರದ ಅಶ್ವತ್ಥಾಮ, ಬಂಡೀಪುರ ರಾಂಪುರ ಶಿಬಿರದ ಚೈತ್ರಾ ಹಾಗೂ ಲಕ್ಷ್ಮಿ ಜತೆಯಾಗಿ ಸಾಥ್ ನೀಡಲಿವೆ. ಇದೇ ಪ್ರಥಮವಾಗಿ 34 ವರ್ಷದ ಅಶ್ವತ್ಥಾಮ ದಸರಾಗೆ ಪ್ರವೇಶ ಪಡೆದಿದ್ದಾನೆ. ಕಿರಿಯ ಆನೆಯಾಗಿ ಲಕ್ಷ್ಮೀ ಎರಡನೇ ಬಾರಿಗೆ ದಸರಾದಲ್ಲಿ ಭಾಗಿಯಾಗಲಿದ್ದಾಳೆ.

Source:tv9kannada