ಲಾಕ್​​ಡೌನ್​, ಸೀಲ್​ಡೌನ್​​ಗೆ ಪರ್ಯಾಯ ಮಾರ್ಗ; ರಾಜ್ಯ ಸರ್ಕಾರ ತೆಗೆದುಕೊಳ್ಳಬಹುದಾದ ಕಠಿಣ ನಿಯಮಗಳಿವು

Mar 17, 2021

ಒಂದು ವೇಳೆ ಕೊರೊನಾ ನಿಯಂತ್ರಣಕ್ಕೆ ಮತ್ತೆ ಲಾಕ್​ಡೌನ್​ ಆದರೆ ಏನೇನು ಸಮಸ್ಯೆಗಳಾಗಬಹುದು? ಯಾವೆಲ್ಲಾ ರೀತಿಯ ತೊಂದರೆಳಿಗೆ ಅದು ದಾರಿಯಾಗಬಹುದು? ಎಂದು ಅವಲೋಕಿಸಿದರೆ, ಮೊದಲು ಎದುರಾಗುವುದೇ ಆರ್ಥಿಕ ಸಂಕಷ್ಟ. ಕೊರೊನಾದಿಂದಾಗಿ ಅದಾಗಲೇ ಆರ್ಥಿಕ ಹೊಡೆತ ಅನುಭವಿಸುತ್ತಿರುವ ದೇಶ ಈಗಷ್ಟೇ ಆರ್ಥಿಕ ಚೇತರಿಕೆ ಕಾಣುತ್ತಿದೆ. ಅಪ್ಪಿತಪ್ಪಿ ಮತ್ತೆ ಲಾಕ್​ಡೌನ್​ ಹೇರಿದರೆ ತಡೆದುಕೊಳ್ಳಲಾಗದಂತಹ ಆರ್ಥಿಕ ಹೊರೆ ಎದುರಾಗುವುದು ನಿಶ್ಚಿತ.

ಬೆಂಗಳೂರು: ದೇಶಾದ್ಯಂತ ಕೊರೊನಾ ಸೋಂಕು ಮತ್ತೆ ಆತಂಕ ಹುಟ್ಟುಹಾಕುತ್ತಿದೆ. ಸರಿಯಾಗಿ ಒಂದು ವರ್ಷದ ಹಿಂದೆ ತನ್ನ ರೌದ್ರರೂಪ ಪ್ರದರ್ಶಿಸಿ ಲಾಕ್​ಡೌನ್​, ಸೀಲ್​ಡೌನ್​ ಪರಿಕಲ್ಪನೆಗಳೇ ಗೊತ್ತಿರದ ಜನಸಾಮಾನ್ಯರನ್ನು ತಿಂಗಳುಗಟ್ಟಲೆ ಮನೆಯಲ್ಲಿ ಕೂರುವಂತೆ ಮಾಡಿದ್ದ ಕೊವಿಡ್​ 19 ಸೋಂಕು ಇದೀಗ ಮತ್ತೆ ಅಟ್ಟಹಾಸ ಮೆರೆಯಲಿದೆಯಾ ಎಂಬ ಭಯ ಕಾಡುತ್ತಿದೆ. ಆದರೆ, ಈಗಾಗಲೇ ಲಾಕ್​ಡೌನ್​ನಿಂದಾಗಿ ಭಾರೀ ಆರ್ಥಿಕ ಹೊಡೆತ ಎದುರಿಸಿರುವ ದೇಶದ ಜನರಿಗೆ ಇನ್ನೊಮ್ಮೆ ಅಂತಹ ಕಠಿಣ ನಿರ್ಣಯವನ್ನು ಪಾಲಿಸುವುದು ಕಷ್ಟಸಾಧ್ಯ. ಒಪ್ಪತ್ತಿನ ಊಟವನ್ನು ದುಡಿದು ತಿನ್ನುವ ವರ್ಗಕ್ಕೆ ಲಾಕ್​ಡೌನ್​ ಶಾಪದಂತಾಗಿದೆ. ಹೀಗಾಗಿ ಸರ್ಕಾರಗಳು ಸಹ ಈ ತೆರನಾದ ಕಟು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಡಿಮೆ ಇದೆ ಎನ್ನುವುದು ಎಲ್ಲರ ಅಂದಾಜು.

ಒಂದು ವೇಳೆ ಕೊರೊನಾ ನಿಯಂತ್ರಣಕ್ಕೆ ಮತ್ತೆ ಲಾಕ್​ಡೌನ್​ ಆದರೆ ಏನೇನು ಸಮಸ್ಯೆಗಳಾಗಬಹುದು? ಯಾವೆಲ್ಲಾ ರೀತಿಯ ತೊಂದರೆಳಿಗೆ ಅದು ದಾರಿಯಾಗಬಹುದು? ಎಂದು ಅವಲೋಕಿಸಿದರೆ, ಮೊದಲು ಎದುರಾಗುವುದೇ ಆರ್ಥಿಕ ಸಂಕಷ್ಟ. ಕೊರೊನಾದಿಂದಾಗಿ ಅದಾಗಲೇ ಆರ್ಥಿಕ ಹೊಡೆತ ಅನುಭವಿಸುತ್ತಿರುವ ದೇಶ ಈಗಷ್ಟೇ ಆರ್ಥಿಕ ಚೇತರಿಕೆ ಕಾಣುತ್ತಿದೆ. ಅಪ್ಪಿತಪ್ಪಿ ಮತ್ತೆ ಲಾಕ್​ಡೌನ್​ ಹೇರಿದರೆ ತಡೆದುಕೊಳ್ಳಲಾಗದಂತಹ ಆರ್ಥಿಕ ಹೊರೆ ಎದುರಾಗುವುದು ನಿಶ್ಚಿತ. ನಿರೋದ್ಯೋಗ ಸಮಸ್ಯೆ ಹೆಚ್ಚಾಗುವುದು, ಆರ್ಥಿಕ ಮೌಲ್ಯ ಕುಸಿಯುವುದು ಸೇರಿದಂತೆ ಹತ್ತಾರು ಸಮಸ್ಯೆಗಳು ತಲೆದೋರಲಿದ್ದು ಸಣ್ಣ ಕೈಗಾರಿಕೆಗಳು, ಸಣ್ಣ ಪುಟ್ಟ ವ್ಯಾಪರಸ್ಥರು, ಬಡವರು ಹಾಗೂ ಮಧ್ಯಮ ವರ್ಗದವರು ಬೀದಿಗೆ ಬೀಳುವ ದುಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಕೊರೊನಾ ಅಪಾಯವನ್ನು ತಪ್ಪಿಸಿಕೊಳ್ಳಲಿಕ್ಕಾಗಿ ಮತ್ತೊಂದು ಅಪಾಯವನ್ನು ಆಹ್ವಾನಿಸುವುದು ಸುಲಭವಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿ ಹೆಜ್ಜೆ ಇಡಬೇಕಾಗುತ್ತದೆ.

ಈ ಸಮಸ್ಯೆಗಳ ಕಾರಣಕ್ಕಾಗಿಯೇ ಕರ್ನಾಟಕ ರಾಜ್ಯ ಸರ್ಕಾರ ಲಾಕ್​ಡೌನ್​ ತೆಗೆದುಕೊಳ್ಳುವ ವಿಚಾರದಲ್ಲಿ ಹಿಂದೇಟು ಹಾಕುತ್ತಿದೆ. ತಜ್ಞರು ಕೂಡ ಸದ್ಯಕ್ಕೆ ಅಂತಹ ನಿರ್ಣಯ ಬೇಡ ಎಂದು ಸಲಹೆ ನೀಡಿರುವ ಕಾರಣ ಸರ್ಕಾರ ಲಾಕ್​ಡೌನ್​ ಹೊರತುಪಡಿಸಿ ಇನ್ನಿತರ ಕಠಿಣ ನಿಯಮಗಳ ಮೂಲಕ ಕೊರೊನಾ ನಿಯಂತ್ರಣ ಮಾಡುವ ಸಾಧ್ಯತೆ ಇದೆ. ಜೊತೆಗೆ, ನೈಟ್​ ಕರ್ಫ್ಯೂ ಬಗ್ಗೆಯೂ ಕರ್ನಾಟಕದಲ್ಲಿ ಪ್ರಸ್ತುತ ಯಾವುದೇ ಚಿಂತನೆಗಳು ನಡೆಯುತ್ತಿಲ್ಲವಾಗಿ, ನೈಟ್ ಕರ್ಫ್ಯೂ ಬದಲಿಗೆ ಮತ್ತೆ ಕೋವಿಡ್ ಕೇರ್ ಸೆಂಟರ್​ಗಳನ್ನು ತೆರೆಯಲು ಚಿಂತಿಸಲಾಗಿದೆ.

ಜನಸಾಮಾನ್ಯರ ದೈನಂದಿನ ಚಟುವಟಿಕೆಗಳಿಗೆ, ವ್ಯಾಪಾರ ವಹಿವಾಟುಗಳಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ವಿಶೇಷ ಚಟುವಟಿಕೆಗಳಿಗೆ, ಸಭೆ, ಸಮಾರಂಭಗಳಿಗೆ ಕೆಲವು ನಿಯಮಗಳನ್ನು ಹೇರುವ ಮೂಲಕ ಹೆಚ್ಚು ಜನರು ಒಂದೆಡೆ ಸೇರುವುದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಬಹುಮುಖ್ಯವಾಗಿ ಜನಸಾಮಾನ್ಯರಿಗೆ ಮಾಸ್ಕ್​ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲಿಸುವುದನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಲು ಸರ್ಕಾರ ಸೂಚನೆ ನೀಡುತ್ತಿದೆ. ಈ ಬಗ್ಗೆ ನಿಗಾವಹಿಸಲು ಮಾರ್ಷಲ್​ಗಳನ್ನು ನೇಮಿಸಿ ಹದ್ದಿನ ಕಣ್ಣಿಡುವ ಸಾಧ್ಯತೆ ಇದೆ. ಜೊತೆಗೆ, ಆಸ್ಪತ್ರೆಗಳಲ್ಲಿ ಐಸಿಯು ಹಾಗೂ ಬೆಡ್​ಗಳ ಸಂಖ್ಯೆ ಹೆಚ್ಚಳ ಮಾಡುವ ಮೂಲಕ ಚಿಕಿತ್ಸೆ ಬಗ್ಗೆ ಹೆಚ್ಚು ಒತ್ತು ನೀಡಲು ಚಿಂತನೆ ನಡೆಸಿರುವ ರಾಜ್ಯ ಸರ್ಕಾರ ಲಸಿಕೆ ವಿತರಣೆಗೂ ವೇಗ ನೀಡಲು ನಿರ್ಧರಿಸಿದೆ.

ತಜ್ಞರು ನೀಡಿರುವ ಸಲಹೆ ಪ್ರಕಾರ, ಹೊರರಾಜ್ಯಗಳಿಂದ ಆಗಮಿಸುವವರು ಗಡಿ ಭಾಗದಲ್ಲಿ ಕಡ್ಡಾಯವಾಗಿ ಕೊವಿಡ್ ಟೆಸ್ಟ್ ಮಾಡಿಸಿದ ಬಳಿಕವೇ ಒಳಪ್ರವೇಶಿಸಬೇಕು, ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಮಂದಿಯನ್ನ ಕರೆದೊಯ್ಯಬಾರದು, ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚುವ ಕೆಲಸವನ್ನು ಮೊದಲಿನಂತೆಯೇ ಕಟ್ಟುನಿಟ್ಟಾಗಿ ಮಾಡುವುದು, ಟೆಸ್ಟಿಂಗ್ ಸಂಖ್ಯೆ ಹೆಚ್ಚಳ ಮಾಡುವುದು, ಕೊವಿಡ್ ಕೇರ್ ಆಸ್ಪತ್ರೆಗಳಿಗೆ ಹೆಚ್ಚು ಒತ್ತು ನೀಡುವುದು ಅನಿವಾರ್ಯ ಎನ್ನಲಾಗಿದೆ.

ಅಲ್ಲದೇ ಅಗತ್ಯಬಿದ್ದರೆ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡಬೇಕೆಂದು ಸೂಚನೆ ನೀಡಲಾಗಿದ್ದು, ಹೆಚ್ಚು ಜನರು ಒಂದೆಡೆ ಸೇರುವ ಸಭೆ ಸಮಾರಂಭಗಳನ್ನ ರದ್ದುಗೊಳಿಸಬೇಕು, 200 ಜನರನ್ನು ಮೀರುವ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು, ಮದುವೆ ಸಮಾರಂಭಗಳಲ್ಲಿ ಅಂತರ ಕಾಯ್ದುಕೊಳ್ಳಲೇಬೇಕು, ಸಿನಿಮಾ ಹಾಲ್​ಗಳಲ್ಲಿ ಒಂದು ಆಸನದ ಬಳಿಕ ಮತ್ತೊಂದು ಆಸನ ಖಾಲಿ ಬಿಡಬೇಕು ಎಂಬಿತ್ಯಾದಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ ಎಂದು ತಿಳಿದುಬಂದಿದೆ. ರಾಜ್ಯ ಸರ್ಕಾರ ಈ ಎಲ್ಲಾ ವಿಚಾರಗಳ ಬಗ್ಗೆ ಸಮಗ್ರವಾಗಿ ಚಿಂತಿಸಿ ಇನ್ನು ಒಂದು ವಾರದೊಳಗೆ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆ ದಟ್ಟವಾಗಿದೆ.

ಒಟ್ಟಾರೆಯಾಗಿ ರಾಜ್ಯ ಸರ್ಕಾರ ಲಾಕ್​ಡೌನ್​, ಸೀಲ್​ಡೌನ್​ನಂತಹ ನಿರ್ಣಯಕ್ಕೆ ಪರ್ಯಾಯವಾಗಿ ಕೆಲ ಕಠಿಣ ನಿಯಮಗಳನ್ನು ಜಾರಿಗೊಳಿಸಲಿದ್ದು, ಕೊರೊನಾ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಲಿದೆ. ಯಾವುದೇ ಕಾರಣಕ್ಕೂ ಎರಡನೇ ಅಲೆಯನ್ನು ಹಬ್ಬಲು ಬಿಡಬಾರದು ಎಂದು ನಿಶ್ಚಯಿಸಿರುವ ಸರ್ಕಾರ ನಿಯಮ ಉಲ್ಲಂಘನೆ ಮಾಡುವವರಿಗೆ ಭಾರೀ ದಂಡ ವಿಧಿಸುವ ಮೂಲಕ ಕ್ರಮ ಕೈಗೊಳ್ಳುವ ಬಗ್ಗೆಯೂ ಚಿಂತಿಸಿದೆ.

Source:TV9kannada