ಮಾ.11ರಂದೇ ಟಾಲಿವುಡ್‌ನಲ್ಲಿಯೂ ರಾಬರ್ಟ್‌ ರಿಲೀಸ್‌

Feb 3, 2021

ಟಾಲಿವುಡ್‌ ದರ್ಶನ್‌ ನಟನೆಯ ‘ರಾಬರ್ಟ್‌’ ಚಿತ್ರದ ಸ್ವಾಗತಕ್ಕೆ ಸಜ್ಜಾಗಿದೆ. ಈ ಚಿತ್ರದ ತೆಲುಗು ರಿಲೀಸ್‌ಗಿದ್ದ ತೊಡಕು ನಿವಾರಣೆಯಾಗಿದೆ. ಮಾ.11ರಂದು ಕನ್ನಡದ ಜೊತೆಗೆ ತೆಲುಗಿನಲ್ಲೂ ರಾಬರ್ಟ್‌ ರಿಲೀಸ್‌ ಆಗೋದು ಪಕ್ಕಾ ಆಗಿದೆ.

ರಾಬರ್ಟ್‌ ಚಿತ್ರಕ್ಕೆ ಥಿಯೇಟರ್‌ ಸಿಗದಿರುವ ಚರ್ಚೆ ಜೋರಾಗಿ ನಡೆದ ಕಾರಣ ಹೈದರಾಬಾದ್‌ನಲ್ಲಿ ನಿರ್ಮಾಪಕರ ತಂಡ ಸಭೆ ನಡೆಸಿದೆ. ಅದಕ್ಕೆ ರಾಬರ್ಟ್‌ ನಿರ್ಮಾಪಕ ಉಮಾಪತಿ ಅವರನ್ನೂ ಆಹ್ವಾನಿಸಿದ್ದಾರೆ. ಈ ವೇಳೆ ರಾಬರ್ಟ್‌ ತೆಲುಗು ರಿಲೀಸ್‌ಗೆ ಯಾವ ಅಡ್ಡಿಯೂ ಆಗೋದಿಲ್ಲ ಎಂಬುದನ್ನು ತೆಲುಗು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ರಾಬರ್ಟ್‌ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ, ‘ಭಾನುವಾರ ಹೈದರಾಬಾದ್‌ನಲ್ಲಿ ಟಾಲಿವುಡ್‌ ನಿರ್ಮಾಪಕರ ಸಭೆಯಲ್ಲಿ ಭಾಗವಹಿಸಿದ್ದೆ. ಈ ವೇಳೆ ಸಿನಿಮಾ ರಿಲೀಸ್‌ಗಿದ್ದ ಸಮಸ್ಯೆಯ ಬಗ್ಗೆ ಚರ್ಚಿಸಲಾಯ್ತು. ಅವರೆಲ್ಲ ಖುಷಿಯಿಂದಲೇ ರಾಬರ್ಟ್‌ ಚಿತ್ರವನ್ನು ಸ್ವಾಗತಿಸಲು ಸಿದ್ಧವಾಗಿದ್ದಾರೆ’ ಎಂದಿದ್ದಾರೆ.

‘ಸಮಸ್ಯೆ ಬಗೆಹರಿಸುವಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪಾತ್ರ ದೊಡ್ಡದು. ಹೈದರಾಬಾದ್‌ನ ಫಿಲಂ ಪ್ರೊಡ್ಯೂಸರ್ಸ್‌ ಕೌನ್ಸಿಲ್‌ ಸಹಕಾರವೂ ಸಿಕ್ಕಿದೆ. ಸದ್ಯಕ್ಕೀಗ ರಾಬರ್ಟ್‌ ಬಿಡುಗಡೆಗೆ ಯಾವ ತೊಡಕೂ ಇಲ್ಲ. ಹಾಗೆ ನೋಡಿದರೆ ಇಂಡಸ್ಟ್ರಿ ಇಂಡಸ್ಟ್ರಿ ಮಧ್ಯೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಯಾರೋ ಒಂದಿಬ್ಬರು ತಂದಿಟ್ಟಸಮಸ್ಯೆಯಿದು. ಇನ್ನು ಮುಂದೆ ಕನ್ನಡ ಹಾಗೂ ತೆಲುಗು ಸಿನಿಮಾ ರಿಲೀಸ್‌ ವೇಳೆ ಇಂಥಾ ಅಡ್ಡಿ ಆತಂಕಗಳು ಬರೋದಿಲ್ಲ ಅನ್ನೋದನ್ನು ಫಿಲಂ ಚೇಂಬರ್‌ ಸ್ಪಷ್ಟವಾಗಿ ಹೇಳಿದೆ’ ಎಂದೂ ಉಮಾಪತಿ ಹೇಳಿದ್ದಾರೆ.

‘ರಾಬರ್ಟ್‌ನ ತೆಲುಗು ವಿತರಣೆಯ ಹಕ್ಕನ್ನು ಸದ್ಯಕ್ಕೆ ಯಾರಿಗೂ ನೀಡಿಲ್ಲ. ಎರಡು ಮೂರು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟಚಿತ್ರಣ ನೀಡುತ್ತೇನೆ’ ಎಂದೂ ಅವರು ತಿಳಿಸಿದ್ದಾರೆ. ರಾಬರ್ಟ್‌ ಚಿತ್ರದ ಕನ್ನಡ ಹಾಗೂ ತೆಲುಗು ವರ್ಶನ್‌ ಮಾ.11 ರಂದು ಬಿಡುಗಡೆಯಾಗಲಿದೆ. ತರುಣ್‌ ಸುಧೀರ್‌ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್‌ ಜೊತೆಗೆ ಆಶಾ ಭಟ್‌ ನಾಯಕಿಯಾಗಿ ನಟಿಸಿದ್ದಾರೆ.

ಇಂದು ರಾಬರ್ಟ್‌ ತೆಲುಗು ಟೀಸರ್‌ ರಿಲೀಸ್‌

ಇಂದು (ಫೆ.3) ರಾಬರ್ಟ್‌ ತೆಲುಗು ವರ್ಶನ್‌ನ ಫಸ್ಟ್‌ಲುಕ್‌ ಹಾಗೂ ಟೀಸರ್‌ ಬಿಡುಗಡೆಯಾಗಲಿದೆ. ಸಂಜೆ 4 ಗಂಟೆಗೆ ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಟೀಸರ್‌ ಅನಾವರಣಗೊಳ್ಳಲಿದೆ. ತೆಲುಗು ವರ್ಶನ್‌ಗೆ ದರ್ಶನ್‌ ಅವರೇ ಧ್ವನಿ ನೀಡಿರೋದು ವಿಶೇಷ.

Source: Suvarna News