ಐಎಎಸ್ ರೋಹಿಣಿ ವಿರುದ್ಧ ಮುಂದುವರೆದ ಸಂಸದ ಪ್ರತಾಪ್ ವಾಕ್ ಸಮರ; ಐಎಎಸ್ ಅಧಿಕಾರಿಗಳ ಫ್ಯಾನ್ಸ್ ಪೇಜ್ ನಿಷೇಧಕ್ಕೆ ಒತ್ತಾಯ

Aug 20, 2021

ಮೈಸೂರು: ಸ್ಥಳೀಯ ಸಂಸದ ಪ್ರತಾಪ್ ಸಿಂಹ ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧದ ವಾಕ್ ಸಮರವನ್ನು ಮತ್ತೊಂದು ಮಜಲಿಗೆ ತೆಗೆದುಕೊಂಡು ಹೋಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಐಎಎಸ್-ಐಪಿಎಸ್ ಅಧಿಕಾರಿಗಳ ಫ್ಯಾನ್ಸ್ ಪೇಜ್ ನಿಷೇಧಕ್ಕೆ ಸಂಸದ ಪ್ರತಾಪ್​ ಒತ್ತಾಯಿಸಿದ್ದಾರೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಕ್ ಸಮರ ಮುಂದುವರಿಸಿದ್ದು, ಐಎಎಸ್ ಅಧಿಕಾರಿಗಳ ಫ್ಯಾನ್ಸ್ ಪೇಜ್ ನಿಷೇಧಕ್ಕೆ ಒತ್ತಾಯ ಮಾಡಿದ್ದಾರೆ. ಈ ಸಂಬಂಧ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿಗೆ ಪ್ರತಾಪ್ ಸಿಂಹ ಮನವಿ ಮಾಡಿಕೊಂಡಿದ್ದು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಏನೂ ಕೆಲಸ ಮಾಡದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಬೇಕಿದ್ದರೆ ಅಧಿಕಾರಿಗಳು ಮಾಡಿದ ಕೆಲಸಗಳನ್ನ ಜಿಲ್ಲೆಯ ಖಾತೆಯಿಂದ ಒಂದು ಅಕೌಂಟ್ ತೆರೆದು ಅದರಲ್ಲಿ ಮಾಹಿತಿ ಹಾಕಲಿ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಪರ ಸಾಮಾಜಿಕ ಜಾಲತಾಣದ ಫ್ಯಾನ್ಸ್ ಫೇಜ್ ಗಳಿಂದ (fan page on social media) ಹೊಗಳಿಕೆಗಳು ಸೃಷ್ಟಿಯಾಗುತ್ತಿವೆ. ಯಾರೋ ಒಬ್ಬ ಲಾಠಿ ಹಿಡಿದು ಓಡಾಡಿದ್ರೆ ಹಾಗೆ-ಹೀಗೆ ಅಂತೆಲ್ಲಾ ಬಿಂಬಿಸಲಾಗ್ತಿದೆ. ಐಎಎಸ್, ಐಪಿಎಸ್ ಅಧಿಕಾರಿಗಳು ಉತ್ತಮ ಕೆಲಸಗಳನ್ನ ಮಾಡಬೇಕು ಎಂದು ಸಂಸದ ಪ್ರತಾಪ್​ ಹೇಳಿದ್ದಾರೆ.

ಹಾಸನದಲ್ಲಿ ಕೇಂದ್ರ ಸರ್ಕಾರದಿಂದ ರಸ್ತೆ ನಿರ್ಮಾಣ ಮಾಡಬೇಕಾದರೆ ಅಂದಿನ ಜಿಲ್ಲಾಧಿಕಾರಿ ಸಹಕಾರ ನೀಡಲೇ ಇಲ್ಲ ಎಂದು ಹೆಸರು ಹೇರಳದೆಯೇ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು. ಮೈಸೂರಿನ ಹೊರ ವಲಯದಲ್ಲಿ ನಡೆಯುತ್ತಿರುವ ಕೈಗಾರಿಕೋದ್ಯಮಿಗಳ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದರು. ಕಾರ್ಯಕ್ರಮದಲ್ಲಿ ಸಚಿವ ಅಶ್ಚಥ್ ನಾರಾಯಣ್, ಮೈಸೂರು ಡಿಸಿ ಬಗಾದಿ ಗೌತಮ್, ರಾಜವಂಶಸ್ಥ ಯದುವೀರ ಒಡೆಯರ್​ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

Source: tv9 Kannada