ಮಧ್ಯರಾತ್ರಿ 1.30ರ ಹೊತ್ತಿಗೆ ಆಸ್ಪತ್ರೆ ತಲುಪಿದ ಆಕ್ಸಿಜನ್​ ಟ್ಯಾಂಕರ್​​; ಸ್ವಲ್ಪವೇ ತಡವಾಗಿದ್ದರೂ 500 ರೋಗಿಗಳ ಜೀವ ಹೋಗುತ್ತಿತ್ತು..

Apr 21, 2021

ಬರೀ ಜಿಟಿಬಿ ಆಸ್ಪತ್ರೆಗಳಷ್ಟೇ ಅಲ್ಲದೆ, ಬುಧವಾರ ಮುಂಜಾನೆ ಹೊತ್ತಿಗೆ ದೆಹಲಿಯ ಹಲವು ಪ್ರತಿಷ್ಠಿತ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ವೈದ್ಯಕೀಯ ಆಕ್ಸಿಜನ್ ಪೂರೈಕೆ ಆಗಿದೆ.

ದೆಹಲಿ: ನಿನ್ನೆ ರಾತ್ರಿ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ದೆಹಲಿಯ ಜಿಟಿಬಿ ಆಸ್ಪತ್ರೆಯಲ್ಲಿ ವೈದ್ಯಕೀಯ ಆಕ್ಸಿಜನ್​ ತೀವ್ರ ಕೊರತೆ ಆಗಿದೆ. ಹೆಚ್ಚೆಂದರೆ ಇನ್ನು ನಾಲ್ಕು ತಾಸುಗಳಿಗಷ್ಟೇ ಆಕ್ಸಿಜನ್​ ಸಾಕು. ಇಲ್ಲಿ ಸುಮಾರು 500 ರೋಗಿಗಳಿಗೆ ಆಕ್ಸಿಜನ್​ ಅಗತ್ಯವಿದೆ. ದಯವಿಟ್ಟು ಸಹಾಯ ಮಾಡಿ ಎಂದು ನಿನ್ನೆ ರಾತ್ರಿ ಟ್ವೀಟ್ ಮಾಡಿ, ರೈಲ್ವೆ ಸಚಿವ ಪಿಯುಷ್​ ಗೋಯಲ್​ ಅವರನ್ನು ಟ್ಯಾಗ್ ಮಾಡಿದ್ದರು. ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಇದೆ ಮನವಿ ಮಾಡಿದ್ದಲ್ಲದೆ, ದೆಹಲಿಯ ಹಲವು ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ತುಂಬ ಆಗಿದೆ ಎಂದೂ ಹೇಳಿದ್ದರು.

ಅದಾದ ಕೆಲವೇ ಹೊತ್ತಲ್ಲಿ, ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆಯಾಗಿದೆ. ವೈದ್ಯಕೀಯ ಆಕ್ಸಿಜನ್ ಹೊತ್ತ ಟ್ರಕ್​ ಅಲ್ಲಿಗೆ ತೆರಳಿದೆ. ಇದರಿಂದಾಗಿ ಹಲವು ರೋಗಿಗಳ ಪ್ರಾಣ ಉಳಿದಿದೆ. ಈ ಆಸ್ಪತ್ರೆಯಲ್ಲಿ ಸುಮಾರು 500 ರೋಗಿಗಳಿದ್ದು, ಮುಂಜಾನೆ 2ಗಂಟೆವರೆಗೆ ಮಾತ್ರ ಸಾಕಾಗುಷ್ಟು ಇತ್ತು. ಒಂದೊಮ್ಮೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆ ಆಗದೆ ಇದ್ದರೆ ಇಲ್ಲಿ ಜೀವ ಹಾನಿ ಗ್ಯಾರಂಟಿಯಾಗಿತ್ತು. ಅಂಥ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಮಧ್ಯರಾತ್ರಿ 1.30ರ ಹೊತ್ತಿಗೆ ಮೆಡಿಕಲ್​ ಆಕ್ಸಿಜನ್ ಹೊತ್ತ ಟ್ರಕ್​ ಜಿಟಿಬಿ ಆಸ್ಪತ್ರೆಗೆ ತಲುಪಿದೆ.

ಬರೀ ಜಿಟಿಬಿ ಆಸ್ಪತ್ರೆಗಳಷ್ಟೇ ಅಲ್ಲದೆ, ಬುಧವಾರ ಮುಂಜಾನೆ ಹೊತ್ತಿಗೆ ದೆಹಲಿಯ ಹಲವು ಪ್ರತಿಷ್ಠಿತ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ವೈದ್ಯಕೀಯ ಆಕ್ಸಿಜನ್ ಪೂರೈಕೆ ಆಗಿದೆ. ನಮ್ಮ ಆಸ್ಪತ್ರೆಗೆ ಮುಂಜಾನೆ 3 ಗಂಟೆ ಹೊತ್ತಿಗೆ ಆಕ್ಸಿಜನ್ ಪೂರೈಕೆ ಆಗಿದ್ದಾಗಿ ಲೋಕ್​ ನಾಯಕ್​ ಜೈ ಪ್ರಕಾಶ್​ ನಾರಾಯಣ್ ಆಸ್ಪತ್ರೆಯ ನಿರ್ದೇಶಕ ಡಾ. ಸುರೇಶ್​ ಕುಮಾರ್​ ತಿಳಿಸಿದ್ದಾರೆ. ಅಂಬೇಡ್ಕರ್ ಆಸ್ಪತ್ರೆಗೆ ಮುಂಜಾನೆ 5ಗಂಟೆಗೆ ಪೂರೈಕೆಯಾಗಿದೆ. ಕಳೆದ ಕೆಲವು ದಿನಗಳಿಂದಲೂ ದೆಹಲಿಯಲ್ಲಿ ಆಕ್ಸಿಜನ್ ಕೊರತೆ ಆಗುತ್ತಿರುವ ಬಗ್ಗೆ ಸಿಎಂ ಅರವಿಂದ್ ಕ್ರೇಜಿವಾಲ್ ಕಳೆದ ನಾಲ್ಕೈದು ದಿನಗಳಿಂದಲೂ ಹೇಳುತ್ತಲೇ ಬಂದಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಅಸಮಾಧನವನ್ನೂ ವ್ಯಕ್ತಪಡಿಸಿದ್ದರು.

Source:TV9Kannada