ಮೇ 1 ರಿಂದ ಕೊವಿಡ್ ಲಸಿಕೆ 250 ರೂ.ಗೆ ಸಿಗುವುದಿಲ್ಲ; ದರ ದುಪ್ಪಟ್ಟು ಆಗಲಿದೆ!

Apr 21, 2021

Covid 19 Vaccine price| 1 ಡೋಸ್ ಕೊವಿಡ್ ಲಸಿಕೆ 500ರಿಂದ 1 ಸಾವಿರ ರೂ.ಗೆ ಮಾರಾಟವಾಗುವ ಸಾಧ್ಯತೆಯಿದೆ. ಇದೇ ವೇಳೆ, ಖಾಸಗಿ ಆಸ್ಪತ್ರೆಗಳು ದುಪ್ಪಟ್ಟು ದರಕ್ಕೆ ಲಸಿಕೆ ಮಾರಲು ಅನುಮತಿ ಕೋರಿವೆ.

ನವದೆಹಲಿ: ಮೇ 1ರಿಂದ ಕೊವಿಡ್ ಲಸಿಕೆ 250 ರೂ.ಗೆ ಸಿಗುವುದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ದರ ಹೆಚ್ಚಾಗುವ ಸಾಧ್ಯತೆ. ಏಕೆಂದರೆ ಖಾಸಗಿ ಆಸ್ಪತ್ರೆಗಳು ಲಸಿಕೆ ಉತ್ಪಾದಕ ಕಂಪನಿಗಳಿಂದ ನೇರವಾಗಿ ಲಸಿಕೆ ಖರೀದಿಸಬೇಕು. 1 ಡೋಸ್ ಕೊವಿಡ್ ಲಸಿಕೆ 500ರಿಂದ 1 ಸಾವಿರ ರೂ.ಗೆ ಮಾರಾಟವಾಗುವ ಸಾಧ್ಯತೆಯಿದೆ. ಇದೇ ವೇಳೆ, ಖಾಸಗಿ ಆಸ್ಪತ್ರೆಗಳು ದುಪ್ಪಟ್ಟು ದರಕ್ಕೆ ಲಸಿಕೆ ಮಾರಲು ಅನುಮತಿ ಕೋರಿವೆ ಎಂದು ತಿಳಿದುಬಂದಿದೆ.

ಕೊವಿಡ್ ಲಸಿಕೆ ತಯಾರಿಕಾ ಕಂಪನಿಗಳು ಈ ಹಿಂದೆಯೇ ಹೇಳಿದಂತೆ ಕೊವಿಡ್ ಲಸಿಕೆ 1 ಸಾವಿರದಿಂದ 2 ಸಾವಿರ ರೂ.ಗೆ ಮಾರಾಟವಾಗುವ ಸಾಧ್ಯತೆಯಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ದರ 1 ಸಾವಿರ ರೂ. ಆಗಬಹುದು ಎಂದು ವಿಶ್ವದ ಅತಿ ದೊಡ್ಡ ಲಸಿಕೆ ತಯಾರಿಕಾ ಕಂಪನಿಯಾದ ಸೀರಮ್​ ಇನ್ಸ್​ಟಿಟ್ಯೂಟ್​ ಸಿಇಒ ಆಧರ್ ಪೂನಾವಾಲಾ ಅವರೇ ಹೇಳಿದ್ದರು. ಇನ್ನು ಭಾರತ್​ ಬಯೋಟೆಕ್​ ಕಂಪನಿಯ ಕೃಷ್ಣಾ ಎಲ್ಲಾ ಪ್ರಕಾರ ಆರಂಭದಲ್ಲಿ ಬೆಲೆಗಳು ಇನ್ನೂ ಹೆಚ್ಚಾಗಿಯೇ ಇರಲಿವೆ. ಕೇಂದ್ರದೊಂದಿಗೆ ಆಗಿರುವ ಒಪ್ಪಂದದ ಪ್ರಕಾರ ಪ್ರಸ್ತುತ, ಸೀರಂ ಕಂಪನಿ 150 ರೂ.ಗೆ ಮತ್ತು ಭಾರತ್​ ಬಯೋಟೆಕ್​ 206 ರೂಪಾಯಿಗೆ (ತೆರಿಗೆಗಳು ಪ್ರತ್ಯೇಕ) ಸರಬರಾಜು ಮಾಡುತ್ತಿವೆ.

Source:TV9Kannada