ಮತ್ತೆ ಸುದ್ದಿಯಲ್ಲಿದ್ದಾರೆ ಕೊಹ್ಲಿ ಮಗಳು ವಮಿಕಾ: ಹೋಟೆಲ್ ಸಿಬ್ಬಂದಿಯ ವಿನೂತನ ಪ್ರಯತ್ನಕ್ಕೆ ಕೊಹ್ಲಿ- ಅನುಷ್ಕಾ ಫುಲ್ ಫಿದಾ!
ಈ ಫಲಕದ ಮೇಲೆ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಗಳು ವಮಿಕಾ ಹೆಸರನ್ನು ಸಹ ಬರೆಯಲಾಗಿದೆ. ಜೊತೆಗೆ ಸ್ವಿಟ್ ಹೋಮ್ ಎಂಬ ಹೆಡ್ಡಿಂಗ್ ಸಹ ನೀಡಲಾಗಿದೆ.
ಅಹಮದಾಬಾದ್: ಕೊರೊನಾ ಸೋಂಕಿನಿಂದ ಟೀಂ ಇಂಡಿಯಾ ಆಟಗಾರರನ್ನು ರಕ್ಷಿಸುವ ಸಲುವಾಗಿ ಬಿಸಿಸಿಐ ತನ್ನ ನಿಯಾಮಾವಳಿಗಳಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಆ ನಿಯಮಗಳ ಫಲವೇ ಬಯೋ ಬಬಲ್. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾ ಕ್ರಿಕೆಟಿಗರು ಎರಡು ತಿಂಗಳಿಗೂ ಹೆಚ್ಚು ಕಾಲ ಬಯೋ ಬಬಲ್ ನಿಯಮಕ್ಕೆ ಒಳಗಾಗಿದ್ದಾರೆ. ಚೆನ್ನೈನಲ್ಲಿ ನಡೆದ ನಾಲ್ಕು ಟೆಸ್ಟ್ ಸರಣಿಯ ಮುನ್ನ ಕೊಹ್ಲಿ ಅಂಡ್ ಟೀಂ ಚೆನ್ನೈನಲ್ಲಿ ಬಯೋ-ಬಬಲ್ ನಿಯಮಕ್ಕೆ ಒಳಗಾಗಿತು. ಅಂದಿನಿಂದ ಇಲ್ಲಿಯವರೆಗೆ ಟೀಂ ಇಂಡಿಯಾ ಆಟಗಾರರು ಬಯೋ ಬಬಲ್ ನಿಯಮದಡಿ ಕ್ರಿಕೆಟ್ ಆಡುತ್ತಿದ್ದಾರೆ. ಇದಕ್ಕೂ ಮೊದಲು ಟೀಂ ಇಂಡಿಯಾ ಆಸಿಸ್ ಪ್ರವಾಸದ ವೇಳೆ ಬಯೋ ಬಬಲ್ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಿತ್ತು.
ಬಯೋ ಬಬಲ್ ಎಂದರೇನು?
ಆಟಗಾರರಿಗೆ ಕೊರೊನಾ ಸೋಂಕು ಹರಡದ್ದಂತೆ ತಡೆಯಲು ಈ ಬಯೋ ಬಬಲ್ ನಿಯಮ ಸೃಷ್ಟಿಸಲಾಗಿದೆ. ಈ ಬಯೋ ಬಬಲ್ ನಿಯಮದಡಿ ಬರುವ ಕ್ರಿಕೆಟಿಗರ ಚಲನವಲನಗಳು ಕಡಿಮೆ ಇರುತ್ತದೆ. ಆಟಗಾರರಿಗೆ ಹೆಚ್ಚು ಓಡಾಡಲು ಅವಕಾಶವಿರುವುದಿಲ್ಲ. ಕ್ರಿಕೆಟಿಗರು ಪಂದ್ಯ ನಡೆಯುವ ಜಾಗಕ್ಕೆ ಹೋದಂತೆ ಸೆಲ್ಫ್ಕ್ವಾರಂಟೈನ್ ಆಗಲಿದ್ದಾರೆ. ಅದರ ಜೊತೆಗೆ ಆಟಗಾರರಿಗೆ ನೀಡಲಾಗುವ ಹೋಟೆಲ್ ಅಥವಾ ರೂಂನಲ್ಲಿ ಸೆಲ್ಫ್ ಕ್ವಾರಟೈಂನ್ ಆಗಬೇಕು. ಫ್ಯಾಮಿಲಿ, ಪ್ರೆಂಡ್ಸನ್ನು ಕೂಡ ಕ್ರಿಕೆಟಿಗರು ಭೇಟಿ ಮಾಡುವುದನ್ನು ನಿರ್ಬಂಧಿಸಲಾಗಿರುತ್ತದೆ.
ಹೊರಗಿನಿಂದ ಬರುವ ಯಾರೊಬ್ಬರು ಆಟಗಾರರನ್ನು ಭೇಟಿ ಮಾಡುವಂತಿಲ್ಲ. ಇದರಿಂದ ಆಟಗಾರರಿಗೆ ಕೊರೊನಾ ಸೋಂಕು ಹರಡುವುದು ತಪ್ಪುತ್ತದೆ ಎಂಬುದೆ ಈ ನಿಯಮದ ಉದ್ದೇಶ. ಹೀಗಾಗಿ ಈ ನಿಯಮದಡಿ ಬರುವ ಆಟಗಾರರು, ಸಾಮಾನ್ಯ ಜನರಂತೆ ತಾವು ಬಯಸಿದ ಕಡೆಗಳೆಲ್ಲಾ ಓಡಾಡುವಂತಿಲ್ಲ. ಹೀಗಾಗಿ ಆಟಗಾರರು ತಾವು ಕ್ರಿಕೆಟ್ ಆಡುವ ಸ್ಥಳಗಳಿಗೆಲ್ಲಾ ತಮ್ಮ ಕುಟುಂಬಸ್ಥರನ್ನು ಕರೆದುಕೊಂಡು ಹೋಗುತ್ತಿದ್ದಾರೆ.
ತಮ್ಮ ಕುಟುಂಬಸ್ಥರೊಂದಿಗೆ ವಾಸ್ತವ್ಯ ಹೂಡಿದ್ದಾರೆ..
ಇದರ ಫಲವಾಗಿ ಟೀಂ ಇಂಡಿಯಾದ ಕೆಲವು ಆಟಗಾರರು ಮತ್ತು ಇಂಗ್ಲೆಂಡ್ ತಂಡದ ಆಟಗಾರರು ಅಹಮದಾಬಾದ್‌ನ ಹಯಾಟ್ ರೀಜೆನ್ಸಿ ಹೋಟೆಲ್‌ನಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ವಾಸ್ತವ್ಯ ಹೂಡಿದ್ದಾರೆ. ಟೀಂ ಇಂಡಿಯಾ ನಾಯಕ ಕೊಹ್ಲಿ, ಅವರ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾ ಕೂಡ ಹಯಾಟ್ ರೀಜೆನ್ಸಿ ಹೋಟೆಲ್‌ನಲ್ಲಿ ನೆಲೆಯೂರಿದ್ದಾರೆ.
ಆಟಗಾರರು ಬಹಳ ದಿನಗಳಿಂದ ತಮ್ಮ ಹೋಟೆಲ್‌ನಲ್ಲಿ ಉಳಿದುಕೊಂಡಿರುವುದನ್ನು ಮನಗಂಡ ಹೋಟೆಲ್ ಸಿಬ್ಬಂಧಿಗಳು ವಿನೂತನ ಕ್ರಮಕ್ಕೆ ಮುಂದಾಗಿ ಆಟಗಾರರಿಂದ ಮೆಚ್ಚುಗೆಗೆ ಒಳಗಾಗಿದ್ದಾರೆ. ಬಹಳ ದಿನಗಳಿಂದ ತಮ್ಮ ಮನೆಗಳಿಂದ ದೂರ ಉಳಿದಿರುವ ಆಟಗಾರರಿಗೆ ತಾವು ತಮ್ಮ ಮನೆಯ ವಾತಾವರಣವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂಬ ಭಾವನೆ ಬರದಿರುವ ಹಾಗೇ ಮಾಡಲು ಹೋಟೆಲ್ ಸಿಬ್ಬಂದಿಗಳು ಪ್ರಯತ್ನಿಸಿದ್ದಾರೆ. ಆಟಗಾರರು ಉಳಿದುಕೊಂಡಿರುವ ರೂಂಗಳನ್ನು ಮನೆಗಳಂತೆ ಸಿದ್ದಗೊಳಿಸಿರುವ ಸಿಬ್ಬಂದಿಗಳು, ಪ್ರತಿಯೊಬ್ಬ ಆಟಗಾರನ ಕುಟುಂಬ ಉಳಿದುಕೊಂಡಿರುವ ರೂಂಗಳ ಬಾಗಿಲಿನ ಮೇಲೆ ಕ್ರಿಕೆಟಿಗರ ಕುಟುಂಬಸ್ಥರ ನಾಮಪಲಕಗಳನ್ನು ಹಾಕಿದ್ದಾರೆ.
ಮಗಳು ವಮಿಕಾ ಹೆಸರನ್ನು ಸಹ ಬರೆಯಲಾಗಿದೆ..
ಹೀಗಾಗಿ ನಾಯಕ ವಿರಾಟ್ ಕೊಹ್ಲಿ ಉಳಿದುಕೊಂಡಿರುವ ಕೋಣೆಯ ಬಾಗಿಲಿನ ಮೇಲೆ ನಾಮ ಫಲಕವನ್ನು ಹಾಕಲಾಗಿದ್ದು, ಈ ಫಲಕದ ಮೇಲೆ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಗಳು ವಮಿಕಾ ಹೆಸರನ್ನು ಸಹ ಬರೆಯಲಾಗಿದೆ. ಜೊತೆಗೆ ಸ್ವಿಟ್ ಹೋಮ್ ಎಂಬ ಹೆಡ್ಡಿಂಗ್ ಸಹ ನೀಡಲಾಗಿದೆ. ಇದರಿಂದ ಆಟಗಾರರಿಗೆ ಹೋಟೆಲ್ನ ರೂಂಗಳು ತಮ್ಮ ಮನೆಗಳಂತೆಯೇ ಭಾಸವಾಗುತ್ತದೆ ಎಂಬುದು ಹೋಟೆಲ್ ಸಿಬ್ಬಂದಿಗಳ ವಿವರಣೆಯಾಗಿದೆ.
ಇದಲ್ಲದೆ, ಭಾರತೀಯ ಕ್ರಿಕೆಟ್ ತಂಡದ ಆಟಗಾರರ ಪ್ರತಿಯೊಂದು ಕೋಣೆಯಲ್ಲೂ ವೈಯಕ್ತಿಕ ಹೆಸರಿನ ತಲೆದಿಂಬುಗಳಿವೆ. ಅದರೊಂದಿಗೆ ಗುಜರಾತ್‌ನ ಆತಿಥ್ಯದ ಅಂಶಗಳು ಮತ್ತು ಗಿರ್ ಏಷಿಯಾಟಿಕ್ ಸಿಂಹಗಳು ಮತ್ತು ಮಹಾತ್ಮ ಗಾಂಧಿಯಿಂದ ಹಿಡಿದು ರಾಜ್ಯದ ಜವಳಿಗಳವರೆಗಿನ ಅಂಶಗಳ ಆಧಾರದ ಮೇಲೆ ವಿಶೇಷ ಕೀ ಕಾರ್ಡ್‌ಗಳನ್ನು ನೀಡಲಾಗಿದೆ.
ಹಾರ್ದಿಕ್ ಪಾಂಡ್ಯ ಕೂಡ ಕುಟುಂಬದೊಂದಿಗೆ ನೆಲೆ
ಹಲವಾರು ಆಟಗಾರರು ತಮ್ಮ ಕುಟುಂಬಗಳೊಂದಿಗೆ ಅಹಮದಾಬಾದ್ ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಪತ್ನಿ ನಟಾಸಾ ಸ್ಟಾಂಕೋವಿಕ್ ಮತ್ತು ಅವರ ಪುತ್ರ ಅಗಸ್ತ್ಯ ಕೂಡ ಹೋಟೆಲ್‌ನಲ್ಲಿ ಇದ್ದಾರೆ. ನಟಾಸಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರೂ ಸಹ ಸಾಮಾಜಿಕ ಜಾಲತಾಣದಲ್ಲಿ ತಾವು ವಾಸ್ತವ್ಯ ಹೂಡಿರುವ ಹೋಟೆಲ್ನ ಚಿತ್ರವನ್ನು ಹಂಚಿಕೊಂಡಿದ್ದಾರೆ.
Source:TV9Kannada