ಬಾಲಿವುಡ್ ಹಿರಿಯ ನಟಿ ಶಶಿಕಲಾ ಇನ್ನಿಲ್ಲ!

Apr 5, 2021

50-80ರ ದಶಕದಲ್ಲಿ ಬಾಲಿವುಡ್‌ ಚಿತ್ರರಂಗವನ್ನು ಆಳುತ್ತಿದ್ದ ಶಶಿಕಲಾ ಓಂ ಪ್ರಕಾಶ್ ಸೈಗಲ್‌ ಕೆಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಭಾನುವಾರ (ಏಪ್ರಿಲ್ 4) ಮುಂಬೈನ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. ಶಶಿಕಲಾ ಇನ್ನಿಲ್ಲ ಎಂಬ ವಿಚಾರವನ್ನು ಎಎನ್‌ಐ ವರದಿ ಮಾಡಿದೆ.
ಸೋಷಿಯಲ್ ಮೀಡಿಯಾದ ಮೂಲಕ ಚಿತ್ರರಂಗದ ಗಣ್ಯರು ಹಿರಿಯ ನಟಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.  ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನೀವೊಬ್ಬ ಅದ್ಭುತ ಕಲಾವಿದೆ ಎಂದು ಬರೆದುಕೊಂಡಿದ್ದಾರೆ.  ಮೂಲತಃ ಸೋಲಾಪುರ್‌ನಲ್ಲಿ ಜನಿಸಿದ್ದ ಶಶಿಕಲಾ,  ಬಾಲ್ಯದಿಂದಲೂ ನೃತ್ಯ ಹಾಗೂ ಸಂಗೀತದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಹೀಗಾಗಿ ಅತಿ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು.
ಸಿನಿ ಜರ್ನಿ ಆರಂಭದಿಂದಲೂ ಶಶಿಕಲಾ ಹೆಚ್ಚಾಗಿ ಖಳನಾಯಕಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸುಜಾತ್, ಅನುಪಮಾ, ವಖ್ತ್‌, ಖುಬ್ಸೂರತ್, ಸರ್ಕಾರ್, ಸರ್ಗಮ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ ‘ಕಭಿ ಖುಷಿ ಕಭಿ ಗಮ್‌’ ಚಿತ್ರದ ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಪಾರ ಜನ ಮನ್ನಣೆ ಗಳಿಸಿತ್ತು. ತಮ್ಮ ಕಡೇ ದಿನಗಳಲ್ಲಿ ಹೆಚ್ಚಾಗಿ ಪೋಷಕ ಪಾತ್ರವನ್ನೇ ಈ ನಟಿ ಮಾಡುತ್ತಿದ್ದರು. 2007ರಲ್ಲಿ ಭಾರತ ಸರಕಾರ ಶಶಿಕಲಾ ಅವರಿಗೆ ಪದ್ಮಶ್ರಿ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.

Source: Suvarnanews