ಕಾಶಿಯ ಮಣಿಕರ್ಣಿಕಾ, ಹರಿಶ್ಚಂದ್ರ ಘಾಟ್​ನಲ್ಲಿ ಹೆಣಗಳ ಸಾಲು: ಸಂಸ್ಕಾರ ಮಾಡಲು ಪರದಾಟ

Apr 17, 2021

ಉತ್ತರ ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾದಂತೆ ಸಾವಿನ ಪ್ರಮಾಣವೂ ತೀವ್ರಗೊಂಡಿರುವ ಕಾಶಿಗೆ ಅಂತ್ಯಸಂಸ್ಕಾರಕ್ಕೆ ಒಂದು ದಿನಕ್ಕೆ ಸರಾಸರಿ 150 ಹೆಣಗಳನ್ನು ತರಲಾಗುತ್ತಿದೆ. ಈ ಪೈಕಿ ಅರ್ಧಕ್ಕೂ ಹೆಚ್ಚು ಸಾವು ಕೊರೊನಾ ಸೋಂಕಿನಿಂದಲೇ ಸಂಭವಿಸಿದವು ಎಂಬುದು ಗಮನಾರ್ಹ ಸಂಗತಿ.

ವಾರಾಣಸಿ: ಕೋವಿಡ್-19 ಇಂದಾಗಿ ಹಿಂದೆಂದೂ ಕಂಡುಕೇಳರಿಯದ ರೀತಿಯಲ್ಲಿ ಸಾವು ಸಂಭವಿಸುತ್ತಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಹೆಣಗಳ ಅಂತ್ಯಸಂಸ್ಕಾರಕ್ಕೆ ರೂಪಿಸಿರುವ ವ್ಯವಸ್ಥೆ ಸಾಲುತ್ತಿಲ್ಲ. ಬೆಂಗಳೂರು, ದೆಹಲಿ, ಮುಂಬೈನಂಥ ನಗರಗಳಲ್ಲಿಯೂ ಸ್ಮಶಾನಗಳ ಎದುರು ಹೆಣಗಳನ್ನು ಹೊತ್ತ ವಾಹನಗಳು ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಂಗಾತೀರದಲ್ಲಿ ಅಂತ್ಯಸಂಸ್ಕಾರವಾದರೆ ಸ್ವರ್ಗಪ್ರಾಪ್ತಿ ಎಂಬ ನಂಬಿಕೆಯಿರುವ ಕಾಶಿ ಪಟ್ಟಣದಲ್ಲೂ ಪರಿಸ್ಥಿತಿ ಹದಗೆಟ್ಟಿದೆ.

ಕಾಶಿಯ ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಾಟ್​ನಲ್ಲಿ ಅಂತ್ಯಸಂಸ್ಕಾರಕ್ಕೆಂದು ಪ್ರತಿದಿನ ಬರುತ್ತಿದ್ದ ಹೆಣಗಳ ಸಂಖ್ಯೆ ಏಕಾಏಕಿ ಹೆಚ್ಚಾಗಿದೆ. ಸಾಕಷ್ಟು ಸೌದೆ ಮತ್ತು ಪೂರಕ ಹವಾಮಾನವಿದ್ದಾಗ ಒಂದು ಶವದ ಅಂತ್ಯಸಂಸ್ಕಾರ ಪೂರ್ಣಗೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಕಾಶಿ ಪಟ್ಟಣದಲ್ಲಿ ಒಂದು ದಿನಕ್ಕೆ ಸುಮಾರು 80 ಶವಗಳನ್ನು ಅಂತ್ಯಸಂಸ್ಕಾರ ಮಾಡುವಷ್ಟು ವ್ಯವಸ್ಥೆ ರೂಪುಗೊಂಡಿದೆ. ಆದರೆ ಈಗ ಸರಾಸರಿ ಒಂದು ಶವದ ಸಂಸ್ಕಾರಕ್ಕೆ 10 ಗಂಟೆ ಬೇಕಾಗುತ್ತಿದೆ. ದಿನಕ್ಕೆ 150ಕ್ಕೂ ಹೆಚ್ಚು ಶವಗಳು ಬರುತ್ತಿವೆ.

ಆದರೆ ಉತ್ತರ ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾದಂತೆ ಸಾವಿನ ಪ್ರಮಾಣವೂ ತೀವ್ರಗೊಂಡಿರುವ ಕಾಶಿಗೆ ಅಂತ್ಯಸಂಸ್ಕಾರಕ್ಕೆ ಒಂದು ದಿನಕ್ಕೆ ಸರಾಸರಿ 150 ಹೆಣಗಳನ್ನು ತರಲಾಗುತ್ತಿದೆ. ಈ ಪೈಕಿ ಅರ್ಧಕ್ಕೂ ಹೆಚ್ಚು ಸಾವು ಕೊರೊನಾ ಸೋಂಕಿನಿಂದಲೇ ಸಂಭವಿಸಿದವು ಎಂಬುದು ಗಮನಾರ್ಹ ಸಂಗತಿ. ಇಷ್ಟೆಲ್ಲಾ ಆಗಿದ್ದರೂ ವಾರಾಣಸಿ ಜಿಲ್ಲಾಡಳಿತ ಮಾತ್ರ ಪಟ್ಟಣದಲ್ಲಿ ಕೋವಿಡ್-19ರಿಂದ ಸಂಭವಿಸುತ್ತಿರುವ ಸಾವುಗಳ ಸಂಖ್ಯೆ ದಿನಕ್ಕೆ 10 ದಾಟುತ್ತಿಲ್ಲ ಎಂದು ವಾದಿಸುತ್ತಿದೆ.

‘ನಮ್ಮ ಸ್ನೇಹಿತರ ಪತ್ನಿಯ ಪಾರ್ಥಿವ ದೇಹದ ಅಂತ್ಯಸಂಸ್ಕಾರಕ್ಕೆ ಇಲ್ಲಿಗೆ ಬಂದಿದ್ದೇವೆ. ಕಾಶಿಯ ಸ್ಥಿತಿ ಹಿಂದೆಂದೂ ಇಷ್ಟು ಭಯಾನಕವಾಗಿರಲಿಲ್ಲ. ಶವಗಳ ಸಂಸ್ಕಾರಕ್ಕೆ ಕಟ್ಟಿಗೆ ಕೊರತೆ ಎದುರಾಗಿದೆ. ಒಣಗಿದ ಸೌದೆ ಸಿಗುತ್ತಿಲ್ಲ, ಹಸಿ ಸೌದೆ ಹಾಕಿದರೆ ಶವ ಬೇಗ ಸುಡುವುದಿಲ್ಲ. ಒಂದು ಶವ ಬೆಂದುರಿಯುತ್ತಿರುವ ಸ್ಥಳದಲ್ಲಿಯೇ ಪಾಳಿಯೋಪಾದಿಯಲ್ಲಿ ಇನ್ನಷ್ಟು ಶವಗಳನ್ನು ಇರಿಸಲಾಗಿದೆ’ ಎಂಬ ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥರೊಬ್ಬರ ಹೇಳಿಕೆಯನ್ನು ಸುದ್ದಿತಾಣವೊಂದು ದಾಖಲಿಸಿದೆ.

ಉತ್ತರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕೊರನಾ 2ನೇ ಅಲೆ ತೀವ್ರಗೊಳ್ಳುತ್ತಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 27,476 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಇದು ರಾಜ್ಯದಲ್ಲಿ ಈವರೆಗೆ ದಾಖಲಾಗಿರುವ ಅತಿದೊಡ್ಡ ಸಂಖ್ಯೆಯಾಗಿದೆ.

ಪ್ರವಾಸಿಗರಿಗೆ ನಿರ್ಬಂಧ
ಕೊರೊನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಶಿ ಪಟ್ಟಣಕ್ಕೆ ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಡಳಿ ಏಪ್ರಿಲ್ ಮಾಸಾಂತ್ಯದವರೆಗೆ ನಿಷೇಧಿಸಿದೆ. ಕಾಶಿಯಲ್ಲಿ ಕಳೆದ ಎರಡು ವಾರಗಳಿಂದ ಕೋವಿಡ್ ಪ್ರಕರಣಗಳು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿವೆ.

(Due to Coronavirus Spike in death at Varanasi massive strain on cremation grounds in Kashi of Uttar Pradesh)

Source:TV9Kannada