ಫೆ.10, 11ರಂದು ಮೈಸೂರಿನಲ್ಲಿ ‘ಬೈಟ್ಸ್’ ಸಮಾವೇಶ: ಶಡಗೋಪನ್
ರಾಜ್ಯದಲ್ಲಿ ವೃತ್ತಿಪರ ಶಿಕ್ಷಣದ ಗುಣಮಟ್ಟ ಸುಧಾರಣೆ ಮತ್ತು ಐಟಿ ಉದ್ದಿಮೆಗೆ ಅಗತ್ಯವಾದ ಮಾನವ ಸಂಪನ್ಮೂಲದ ಬೆಳವಣಿಗೆಯ ಗುರಿ ಹೊಂದಿರುವ ಐಟಿ ಶಿಕ್ಷಣ ಮಾನದಂಡಗಳ ಮಂಡಳಿಯು ಫೆ.10 ಮತ್ತು 11ರಂದು ಮೈಸೂರಿನಲ್ಲಿ ‘ಬೈಟ್ಸ್’ ಸಮಾವೇಶ ಹಮ್ಮಿಕೊಂಡಿದೆ.
ರಾಜ್ಯದಲ್ಲಿ ವೃತ್ತಿಪರ ಶಿಕ್ಷಣದ ಗುಣಮಟ್ಟ ಸುಧಾರಣೆ ಮತ್ತು ಐಟಿ ಉದ್ದಿಮೆಗೆ ಅಗತ್ಯವಾದ ಮಾನವ ಸಂಪನ್ಮೂಲದ ಬೆಳವಣಿಗೆಯ ಗುರಿ ಹೊಂದಿರುವ ಐಟಿ ಶಿಕ್ಷಣ ಮಾನದಂಡಗಳ ಮಂಡಳಿಯು ಫೆ.10 ಮತ್ತು 11ರಂದು ಮೈಸೂರಿನ ಇನ್ಫೋಸಿಸ್ ಲರ್ನಿಂಗ್ ಕ್ಯಾಂಪಸ್‌ನಲ್ಲಿ ತನ್ನ 4ನೇ ಸಮಾವೇಶವನ್ನು ಹಮ್ಮಿಕೊಂಡಿದೆ ಎಂದು ಸಂಘಟನೆಯ ಮುಖ್ಯಸ್ಥ ಪ್ರೊ.ಶಡಗೋಪನ್ ತಿಳಿಸಿದ್ದಾರೆ.
ಈ ಬಗ್ಗೆ ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು ‘ಕೈಗಾರಿಕಾ ಕ್ರಾಂತಿ 4.0 ಅವಕಾಶಗಳು ಮತ್ತು ಸವಾಲುಗಳು’ ಎಂಬ ವಿಚಾರ ಕುರಿತು ನಡೆಯಲಿರುವ ಸಮಾವೇಶದಲ್ಲಿ ಉನ್ನತ ಶಿಕ್ಷಣ ಹಾಗೂ ಐಟಿ ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಮುಂದಿನ ಮೂರು ವರ್ಷಗಳಲ್ಲಿ ಸಾಧಿಸಬೇಕಾದ ಹಲವು ಮಹತ್ವದ ಗುರಿಗಳನ್ನು ಇಟ್ಟುಕೊಂಡಿರುವ ‘ಬೈಟ್ಸ್ ಉನ್ನತಿ’ ಕಾರ್ಯಕ್ರಮಕ್ಕೂ ಚಾಲನೆ ನೀಡಲಿದ್ದಾರೆ ಎಂದಿದ್ದಾರೆ.
‘ಬೈಟ್ಸ್ ಉನ್ನತಿ’ಯಡಿಯಲ್ಲಿ ರಾಜ್ಯದ ಗ್ರಾಮೀಣ ಭಾಗಗಳ 10 ಸಾವಿರ ವಿದ್ಯಾರ್ಥಿಗಳಿಗೆ, ಉದ್ಯಮಕ್ಕೆ ಅಗತ್ಯವಾದ ತರಬೇತಿ ನೀಡಲಾಗುವುದು. ಸುಮಾರು ಒಂದು ಸಾವಿರ ಕಂಪನಿಗಳು ಕೃತಕ ಬುದ್ಧಿಮತ್ತೆಯ ವ್ಯವಸ್ಥೆಯ ಮೂಲಕ ಈ ವಿದ್ಯಾರ್ಥಿಗಳ ಮೌಲ್ಯಮಾಪನ ಮತ್ತು ಆಯ್ಕೆ ಮಾಡಿಕೊಳ್ಳಲಿವೆ.ಇದರೊಂದಿಗೆ, ಒಂದು ಸಾವಿರ ವಿದ್ಯಾರ್ಥಿನಿಯರಿಗೆ ಕಾರ್ಪೊರೇಟ್ ಸ್ಕಾಲರ್‍ಶಿಪ್ ಕೊಡಲಾಗುವುದು ಮತ್ತು ಭವಿಷ್ಯದ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಒಂದು ಸಾವಿರ ಬೋಧಕರಿಗೆ ಪ್ರಮಾಣಪತ್ರ ಸಹಿತ ತರಬೇತಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಸಮಾವೇಶದಲ್ಲಿ ಉದ್ಯಮಗಳ ಪರಿಣಿತರು ವಿವಿಧ ಗೋಷ್ಠಿಗಳಲ್ಲಿ ಮಾತನಾಡಲಿದ್ದು, ಒಟ್ಟು 10 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ‘ಬೈಟ್ಸ್ ಉನ್ನತಿ’ ಉಪಕ್ರಮದಿಂದ 16 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳ ಸಹಿತ ಒಟ್ಟು 100 ಎಂಜಿನಿಯರಿಂಗ್ ಕಾಲೇಜುಗಳಿಗೆ ಲಾಭವಾಗಲಿದೆ. ಇದಕ್ಕೆ ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಪರ್ಸಿಸ್ಟೆಂಟ್, ನೌಕರಿ ಮುಂತಾದ ಉದ್ದಿಮೆಗಳು ಕೈಜೋಡಿಸಿವೆ ಎಂದು ಶಡಗೋಪನ್ ವಿವರಿಸಿದ್ದಾರೆ.