‘ಶ್ರೀರಾಮನಿಲ್ಲದ ಅಯೋಧ್ಯೆ..ಅಯೋಧ್ಯೆಯೇ ಅಲ್ಲ’-ರಾಷ್ಟ್ರಪತಿ ರಾಮನಾಥ ಕೋವಿಂದ್

Aug 30, 2021

ರಾಷ್ಟ್ರಪತಿ ರಾಮನಾಥ ಕೋವಿಂದ್ (President Ram Nath Kovind)​ ನಿನ್ನೆ (ಭಾನುವಾರ) ಅಯೋಧ್ಯೆಯ ರಾಮಲಲ್ಲಾ (Ram Lalla)ಗೆ ಪೂಜೆ ಸಮರ್ಪಿಸಿದ್ದಾರೆ. ಆಗಸ್ಟ್​ 29ರಂದು ಅಯೋಧ್ಯೆ ಶ್ರೀರಾಮ ಮಂದಿರ (Ayodhya Ram Temple) ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ರಾಮನಾಥ ಕೋವಿಂದ್​, ಸದ್ಯ ಅಲ್ಲೇ ಪಕ್ಕದ ಗುಡಿಯಲ್ಲಿರುವ ರಾಮ ಲಲ್ಲಾನ ದರ್ಶನ ಪಡೆದರು. ಹಾಗೇ, ಶ್ರೀರಾಮ ಎಲ್ಲರಿಗೂ ಸೇರಿದವನು..ಅವನು ಪ್ರತಿಯೊಬ್ಬರಲ್ಲೂ ಇದ್ದಾನೆ ಎಂದು ಹೇಳಿದರು.

ರಾಮ ಕಥಾ ಪಾರ್ಕ್​​ನಲ್ಲಿ ರಾಮಾಯಣ ಸಮಾವೇಶ ಉದ್ಘಾಟನೆ ಮಾಡಿದ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಜತೆಗೆ ಉತ್ತರಪ್ರದೇಶ ರಾಜ್ಯಪಾಲ ಆನಂದಿಬೆನ್​ ಪಾಟೀಲ್​ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಕೂಡ ಇದ್ದರು. ನಂತರ ಮಾತನಾಡಿದ ಅವರು, ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಸತತ ಪ್ರಯತ್ನದಿಂದಾಗಿ ಅಯೋಧ್ಯೆ ಮಾನವ ಕಲ್ಯಾಣದ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಸಾಮಾಜಿಕ ಸಾಮರಸ್ಯಕ್ಕೆ ಈ ನಗರ ಉದಾಹರಣೆಯಾಗಲಿ ಎಂದೂ ಹೇಳಿದರು.

ಅಯೋಧ್ಯೆ, ಭಗವಾನ್​ ಶ್ರೀರಾಮನ ಹುಟ್ಟಿದ ಸ್ಥಳ ಮತ್ತು ಅವನ ಲೀಲೆಗಳಿಗೆ ಸಾಕ್ಷಿಯಾದ ಭೂಮಿ. ರಾಮನಿಲ್ಲದ ಅಯೋಧ್ಯೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಸಂಸ್ಕೃತ ಕವಿ ಭಾಸನ ಪ್ರತಿಮಾ ನಾಟಕದಲ್ಲಿ ಶ್ರೀರಾಮ ಮತ್ತು ಅಯೋಧ್ಯೆಯ ನಡುವಿನ ಸಂಬಂಧವನ್ನು ತುಂಬ ಸುಂದರವಾಗಿ ವರ್ಣಿಸಲಾಗಿದೆ. ರಾಮನಿಲ್ಲದ ಅಯೋಧ್ಯೆ, ಅಯೋಧ್ಯೆಯೇ ಅಲ್ಲ ಎಂದು ಆ ಕವಿ ಹೇಳಿದ್ದಾರೆ ಎಂದು ರಾಮನಾಥ ಕೋವಿಂದ್​ ಹೇಳಿದರು. ಹಾಗೇ, ರಾಮಾಯಣ ಸಮಾವೇಶವನ್ನು ಆಯೋಜಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಮತ್ತು ಅವರ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಜೀವನ ಮೌಲ್ಯಗಳನ್ನು ಸಾರುವ ರಾಮಾಯಣ ಹೆಚ್ಚೆಚ್ಚು ಜನರಿಗೆ ತಿಳಿಯಬೇಕು ಎಂದೂ ಅಭಿಪ್ರಾಯಪಟ್ಟರು.

Source:Tv9kannada