ಟ್ವೀಟರ್ ಮೇಲೆ ಕೇಂದ್ರದ ‘ಕೂ’ ವಾರ್!
ನವದೆಹಲಿ(ಫೆ.17): ದೆಹಲಿ ರೈತ ಪ್ರತಿಭಟನೆ ವೇಳೆ ರವಾನಿಸಲಾದ ಪ್ರಚೋದನಾಕಾರಿ ಟ್ವೀಟ್ ಅಳಿಸಿಹಾಕುವಂತೆ ಸೂಚಿಸಿದ ತನ್ನ ಆದೇಶ ಪಾಲಿಸದ ಅಮೆರಿಕ ಮೂಲದ ಟ್ವೀಟರ್ ಬೆಂಗಳೂರು ಮೂಲಕ ‘ಕೂ’ ಗೆ ಸಡ್ಡು ಹೊಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ.
ಮುಂದಿನ ದಿನಗಳಲ್ಲಿ ಸರ್ಕಾರದ ನಿರ್ಧಾರ, ಆದೇಶ ಅಥವಾ ಇನ್ಯಾವುದೇ ವಿಷಯಗಳನ್ನು ಟ್ವೀಟರ್‌ಗಿಂತ ಮೊದಲು ‘ಕೂ’ ಆ್ಯಪ್‌ನಲ್ಲಿ ಹಂಚಿಕೊಳ್ಳಲು ನಿರ್ಧರಿಸಿದೆ. ಅಂದರೆ ಟ್ವೀಟರ್‌ಗಿಂತ ಕನಿಷ್ಠ 1-3 ಗಂಟೆ ಮೊದಲು ಇಂಥ ಮಾಹಿತಿಯನ್ನು ‘ಕೂ’ನಲ್ಲಿ ಪ್ರಕಟಿಸಲಾಗುವುದು. ಸಹಜವಾಗಿಯೇ ಹೆಚ್ಚಿನ ಜನರು ಟ್ವೀಟರ್‌ಗಿಂತ ಹೆಚ್ಚಾಗಿ ‘ಕೂ’ ಅನ್ನು ಫಾಲೋ ಮಾಡಲಿದ್ದಾರೆ. ಇದು ಕೇಂದ್ರದ ಕಾರ್ಯತಂತ್ರ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಶೀಘ್ರವೇ ಈ ನೀತಿ ಕಾರ್ಯರೂಪಕ್ಕೆ ಬರಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಇದಕ್ಕೆ ಪೂರಕವಾಗಿ ಈಗಾಗಲೇ ಕೇಂದ್ರದ ಬಹುತೇಕ ಸಚಿವಾಲಯ, ಇಲಾಖೆ, ಸಚಿವರು ‘ಕೂ’ನಲ್ಲಿ ತಮ್ಮ ಖಾತೆ ತೆರೆದಿದ್ದಾರೆ. ಜೊತೆಗೆ ಹಲವು ರಾಜ್ಯಗಳಲ್ಲಿಯೂ ಬಿಜೆಪಿ ನಾಯಕರು ಇದೇ ಹಾದಿ ತುಳಿದಿದ್ದಾರೆ.
‘ಕೂ’ ಎನ್ನುವುದು ಟ್ವೀಟರ್ ರೀತಿಯಲ್ಲೇ ಸೇವೆ ನೀಡುವ ಚುಟುಕು ಜಾಲತಾಣ. ಅದರೆ ಇದರಲ್ಲಿ 400 ಪದಗಳವರೆಗೆ ಬರೆಯಬಹುದು. ಜೊತೆಗೆ ಲಿಪ್ಯಂತರ ಸೇವೆ ಲಭ್ಯವಿದೆ. ಟ್ವೀಟರ್‌ಗೆ ಪರ್ಯಾಯವಾಗಿ ಇದನ್ನು ಬೆಂಗಳೂರಿನ ಇಬ್ಬರು ಸ್ಥಾಪಿಸಿದ್ದಾರೆ.
ಕೂ ಆಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
ಕ್ಯೂ ಆಪ್ ಉಚಿತವಾಗಿದ್ದು, ಯಾರೂ ಬೇಕಾದರೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಂಡ್ರಾಯ್ಡ್ ಮತ್ತು ಐಒಎಸ್‌ಗಳಲ್ಲಿ ಈ ಆಪ್ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕೂ ಅಂತಾ ಶೋಧ ಮಾಡಿದರೆ ಕೂ ಆಪ್ ದೊರೆಯುತ್ತದೆ ಮತ್ತು ಅದನ್ನು ಡೌನ್‌ಲೋಡ್ ಮಾಡಿಕೊಂಡು ಇನ್ಸ್‌ಟಾಲ್ ಮಾಡಿಕೊಳ್ಳಬಹುದು.
ಟ್ವಿಟರ್ ರೀತಿಯಲ್ಲಿ ಕೂ ಆಪ್ ಹಲವು ಫೀಚರ್‌ಗಳನ್ನು ಹೊಂದಿದೆ. ಫೀಡ್ ಅನ್ನು ಬಳಕೆದಾರರು ಬ್ರೌಸ್ ಮಾಡಲು ಇದು ಅವಕಾಶ ನೀಡುತ್ತದೆ. ಬಳಕೆದಾರರು ತಮ್ಮ ಸಂದೇಶಗಳನ್ನು, ಅನಿಸಿಕೆಗಳನ್ನು, ಅಭಿಪ್ರಾಯಗಳನ್ನು ಷೇರ್ ಮಾಡಿಕೊಳ್ಳಬಹುದು. ಆಡಿಯೋ, ವಿಡಿಯೋ ಫೈಲ್‌ಗಳನ್ನು ಪೋಸ್ಟ್ ಮಾಡಬಹುದು ಇಲ್ಲವೇ ಷೇರ್ ಮಾಡಬಹುದು.
ಕನ್ನಡ, ತೆಲುಗು, ತಮಿಳು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬಳೆಕೆದಾರರು ಕೂ ಬಳಸಬಹುದು. ಶೀಘ್ರವೇ ಇನ್ನಿತರ ಭಾರತೀಯ ಭಾಷೆಗಳಲ್ಲೂ ಕೂ ತನ್ನ ಸೇವೆ ನೀಡಲಿದೆ. ಸ್ಥಳೀಯ ಭಾಷೆಗಳಲ್ಲಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇದು ಅವಕಾಶವನ್ನು ಕಲ್ಪಿಸುತ್ತದೆ. ಬಳಕೆದಾರರು 400 ಅಕ್ಷರಗಳಲ್ಲಿ ತಮ್ಮ ಸಂದೇಶಗಳನ್ನು ಬರೆಯಬಹುದು.
Source:Suvarna News