ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ಮರುಸ್ಥಾಪನೆ ಆಗುವವರೆಗೂ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ: ಮೆಹಬೂಬಾ ಮುಫ್ತಿ
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್ 5ರಂದು ರದ್ದುಗೊಳಿಸಲಾಗಿದೆ. ಅಂದಿನಿಂದಲೂ ಮೆಹಬೂಬ ಮುಫ್ತಿ ಪಕ್ಷ ಸೇರಿ ಅಲ್ಲಿನ ಬಹುತೇಕ ರಾಜಕೀಯ ಪಕ್ಷಗಳು ಕೇಂದ್ರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿವೆ.
ದೆಹಲಿ: ಜಮ್ಮು-ಕಾಶ್ಮೀರದಲ್ಲಿ ತೆಗೆಯಲಾದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪನೆ ಮಾಡುವವರೆಗೂ ನಾವು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಜೂ.24ರಂದು ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ಜಮ್ಮು-ಕಾಶ್ಮೀರದ ಜನರೊಂದಿಗೆ ಕೇಂದ್ರ ಸರ್ಕಾರ ಅಂತರ ಕಾಯ್ದುಕೊಳ್ಳುವುದನ್ನು ನಿಲ್ಲಿಸಬೇಕು ಎಂದೂ ಹೇಳಿದರು.
ಜಮ್ಮು-ಕಾಶ್ಮಿರ ಕೇಂದ್ರಾಡಳಿತ ಪ್ರದೇಶವಾಗಿದ್ದು ಯಾವುದೇ ಚುನಾವಣೆ ನಡೆದರೂ ನಾನು ಅದರಲ್ಲಿ ಸ್ಪರ್ಧಿಸುವುದಿಲ್ಲ. ಈ ವಿಚಾರವನ್ನು ನಾನು ಮೊದಲೂ ಕೂಡ ಸ್ಪಷ್ಟಪಡಿಸಿದ್ದೇನೆ. ಹಾಗಂತ ನಾವು ಮತ್ಯಾವುದೇ ಪಕ್ಷಕ್ಕೂ ಇಲ್ಲಿ ರಾಜಕೀಯ ಅವಕಾಶವನ್ನೂ ನೀಡುವುದಿಲ್ಲ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಹಾಗೇ, ಜಮ್ಮು-ಕಾಶ್ಮೀರದ ವಿಧಾನಸಭಾ ಚುನಾವಣೆ ಘೋಷಣೆಯಾದರೆ ನಮ್ಮ ಪಕ್ಷ ಮೊದಲು ಆಂತರಿಕ ಸಭೆ ನಡೆಸಿ, ಈ ಬಗ್ಗೆ ವ್ಯಾಪಕ ಚರ್ಚೆ ನಡೆಸಲಾಗುವುದು ಎಂದು ಮುಫ್ತಿ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್ 5ರಂದು ರದ್ದುಗೊಳಿಸಲಾಗಿದೆ. ಅಂದಿನಿಂದಲೂ ಮೆಹಬೂಬ ಮುಫ್ತಿ ಪಕ್ಷ ಸೇರಿ ಅಲ್ಲಿನ ಬಹುತೇಕ ರಾಜಕೀಯ ಪಕ್ಷಗಳು ಕೇಂದ್ರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿವೆ. ತೆಗೆದುಹಾಕಲಾಗಿರುವ ಆರ್ಟಿಕಲ್ 370 ಮತ್ತು 35 ಎಯನ್ನು ಮರುಸ್ಥಾಪನೆ ಮಾಡಬೇಕು ಎಂದು ಆಗ್ರಹಿಸುತ್ತಿವೆ. ಇದಕ್ಕಾಗಿ ಗುಪ್ಕಾರ್ ಮೈತ್ರಿಕೂಟವನ್ನೂ ರಚಿಸಿಕೊಂಡಿವೆ. ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆ ಮರುಸ್ಥಾಪನೆಗೆ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲು ಮತ್ತು ಇಲ್ಲಿ ವಿಧಾನಸಭಾ ಚುನಾವಣೆಯನ್ನು ನಡೆಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಆದರೆ ಇಲ್ಲಿನ ಪಕ್ಷಗಳು ಆದಷ್ಟು ಬೇಗ ಇಲ್ಲಿ ವಿಶೇಷ ಸ್ಥಾನಮಾನ ಮರುಸ್ಥಾಪಿಸಿ ಎಂದು ಬೇಡಿಕೆ ಇಟ್ಟಿವೆ.
Source: Tv9Kannada