ಆನ್​ಲೈನ್​ನಲ್ಲಿ ರೈಲ್ವೆ ಟಿಕೆಟ್​ ಬುಕ್ ಮಾಡಲು ಆಧಾರ್​ ಕಾರ್ಡ್, ಪಾಸ್​ಪೋರ್ಟ್​ ಕಡ್ಡಾಯವಾಗಲಿದೆ; ಶೀಘ್ರದಲ್ಲೇ ನಿಯಮ ಜಾರಿ

Jun 26, 2021

ಕೆಲವು ಮಧ್ಯವರ್ತಿಗಳು ರೈಲ್ವೆ ಟಿಕೆಟ್​​ನ್ನು ತ್ವರಿತವಾಗಿ ಬುಕ್​​ ಮಾಡಲು ಮುಂದುವರಿದ ಸಾಫ್ಟ್​ವೇರ್​ ಬಳಸುತ್ತಾರೆ. ಇದರಿಂದಾಗಿ ಒಂದೇ ಸಲಕ್ಕೆ 10-15 ಟಿಕೆಟ್​ ಬುಕ್​ ಮಾಡಬಹುದು. ನಕಲಿ ಪ್ರಯಾಣಿಕರ ಹೆಸರಿನಲ್ಲಿ ಟಿಕೆಟ್​ ಬುಕ್​ ಮಾಡಿ, ನಂತರ ಪ್ರೀಮಿಯಂ ದರಕ್ಕೆ ಮಾರಾಟ ಮಾಡುತ್ತಾರೆ ಎಂದು ಡಿಜಿ ಮಾಹಿತಿ ನೀಡಿದ್ದಾರೆ.

ಆನ್​ಲೈನ್​ನಲ್ಲಿ ಟಿಕೆಟ್​ ಬುಕ್ಕಿಂಗ್ ಮಾಡುವ ಏಜೆಂಟ್​​ಗಳು ಮಾಡಬಹುದಾದ ಅಕ್ರಮಗಳನ್ನು ತಡೆಯಲು ಭಾರತೀಯ ರೈಲ್ವೆ ಒಂದು ಹೊಸ ಕ್ರಮವನ್ನು ಜಾರಿಗೊಳಿಸಲು ಮುಂದಾಗಿದೆ. ಆನ್​​ಲೈನ್​ನಲ್ಲಿ ರೈಲ್ವೆ ಟಿಕೆಟ್​ ಬುಕ್​ ಮಾಡುವಾಗ ಆಧಾರ್​ ಕಾರ್ಡ್ ಮತ್ತು ಪಾಸ್​ಪೋರ್ಟ್​ನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಹೇಳಿದೆ. ಇಷ್ಟು ದಿನ ಬಳಕೆದಾರರ ಹೆಸರು ಮತ್ತು ಪಾಸ್​ವರ್ಡ್​ ಹಾಕಿ ವೆಬ್​ಸೈಟ್​​ನಲ್ಲಿ ಸರಳವಾಗಿ ಲಾಗಿನ್​ ಆಗಿ, ರೈಲ್ವೆ ಟಿಕೆಟ್​ ಬುಕ್​ ಮಾಡಬಹುದಿತ್ತು. ಆದರೆ ಇನ್ನುಮುಂದೆ ಲಾಗಿನ್​ ಆಗುವವರು ತಮ್ಮ ಪಾಸ್​ಪೋರ್ಟ್ ಅಥವಾ ಆಧಾರ್​ಕಾರ್ಡ್​​ನಂತಹ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ.

ರೈಲ್ವೆ ಟಿಕೆಟ್​ ಬುಕ್ಕಿಂಗ್ ವೆಬ್​​ಸೈಟ್​ ದುರ್ಬಳಕೆ ಆಗುತ್ತಿರುವುದು ಹೆಚ್ಚಾದ ಬೆನ್ನಲ್ಲೇ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್​ಸಿಟಿಸಿ) ಈ ನಿರ್ಧಾರ ಕೈಗೊಂಡಿದೆ. ಅದೆಷ್ಟೋ ದಲ್ಲಾಳಿಗಳು ಟಿಕೆಟ್​ ಬುಕ್ಕಿಂಗ್​ ಹೆಸರಲ್ಲಿ ಪ್ರಯಾಣಿಕರಿಗೆ, ನಿಗಮಕ್ಕೆ ವಂಚನೆ ಮಾಡುತ್ತಿದ್ದಾರೆ. ಅದನ್ನು ತಡೆಯಲು, ನಮ್ಮ ವೆಬ್​ಸೈಟ್​ಗೆ ಲಾಗಿನ್ ಆಗಲು ಆಧಾರ್ ಕಾರ್ಡ್​, ಪಾಸ್​ಪೋರ್ಟ್​​​ಗಳನ್ನು ಕಡ್ಡಾಯ ಮಾಡುವ ಬಗ್ಗೆ ಕ್ರಮಕೈಗೊಳ್ಳುತ್ತಿದ್ದೇವೆ ಎಂದು ರೈಲ್ವೆ ರಕ್ಷಣಾ ದಳದ ಡಿಜಿ ಅರುಣ್​ ಕುಮಾರ್ ತಿಳಿಸಿದ್ದಾರೆ.

ಕೆಲವು ಮಧ್ಯವರ್ತಿಗಳು ರೈಲ್ವೆ ಟಿಕೆಟ್​​ನ್ನು ತ್ವರಿತವಾಗಿ ಬುಕ್​​ ಮಾಡಲು ಮುಂದುವರಿದ ಸಾಫ್ಟ್​ವೇರ್​ ಬಳಸುತ್ತಾರೆ. ಇದರಿಂದಾಗಿ ಒಂದೇ ಸಲಕ್ಕೆ 10-15 ಟಿಕೆಟ್​ ಬುಕ್​ ಮಾಡಬಹುದು. ನಕಲಿ ಪ್ರಯಾಣಿಕರ ಹೆಸರಿನಲ್ಲಿ ಟಿಕೆಟ್​ ಬುಕ್​ ಮಾಡಿ, ನಂತರ ಪ್ರೀಮಿಯಂ ದರಕ್ಕೆ ಮಾರಾಟ ಮಾಡುತ್ತಾರೆ ಎಂದು ಡಿಜಿ ಮಾಹಿತಿ ನೀಡಿದ್ದಾರೆ. ವೆಬ್​ಸೈಟ್​ಗೆ ಆಧಾರ್​ ಕಾರ್ಡ್​ ಲಿಂಕ್ ಮಾಡುವ ವ್ಯವಸ್ಥೆ ಶೀಘ್ರದಲ್ಲೇ ಆಗುತ್ತದೆ. ಆದರೆ ಪಾಸ್​ಪೋರ್ಟ್​​ ಲಿಂಕ್​ ಮಾಡುವ ಸಂಬಂಧ ಕೆಲವು ಅಧಿಕಾರಿಗಳೊಂದಿಗೆ ಮಾತುಕತೆ ನಡೆಯುತ್ತಿದ್ದು, ಅದೂ ಕೂಡ ಆದಷ್ಟು ಬೇಗನೇ ಜಾರಿಯಾಗುತ್ತದೆ. ಹೀಗೆ ಲಾಗಿನ್​ ಮಾಡುವಾಗ ಆಧಾರ್​ ಕಾರ್ಡ್ ಅಥವಾ ಪಾಸ್​ಪೋರ್ಟ್ ಕಡ್ಡಾಯವಾಗಿ ಒದಗಿಸಬೇಕು ಎಂಬ ನಿಯಮ ಜಾರಿಯಾದರೆ ಅಕ್ರಮಗಳನ್ನು ಪತ್ತೆಹಚ್ಚಬಹುದು ಎಂದೂ ಐಆರ್​ಸಿಟಿಸಿ ಹೇಳಿದೆ.

ಹೀಗೆ ಮಧ್ಯವರ್ತಿಗಳ ಹೆಸರಲ್ಲಿ ಅಕ್ರಮವಾಗಿ ರೈಲ್ವೆ ಟಿಕೆಟ್​ ಬುಕ್ ಮಾಡುವವರಿಗೆ ನೀಡಲಾಗುವ ಶಿಕ್ಷೆ ಪ್ರಮಾಣವನ್ನೂ ಭಾರತೀಯ ರೈಲ್ವೆ ಹೆಚ್ಚಿಸಿದೆ. 2018ರಿಂದ ಈ ಬಾರಿಯ ಮೇ ತಿಂಗಳವರೆಗೆ ಇಂಥ ಸುಮಾರು 14,250 ಮಂದಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದೆ.

Source: Tv9Kannada