ನನಗಾಗಿ ಕತೆ ಬರೆಯೋವರೆಗೂ ಬಣ್ಣ ಹಚ್ಚುವೆ!

Mar 16, 2021

ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ-3 ಚಿತ್ರತಂಡ ಆಯೋಜಿಸಿದ್ದ ಕಿಚ್ಚ ಸುದೀಪ್‌ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದೀಪ್‌ ಮಾತನಾಡಿದರು. ಸಾವಿರಾರು ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಕರೆಯುತ್ತಿರುವಾಗ ವೇದಿಕೆಗೆ ಬಂದ ಸುದೀಪ್‌, ‘ಎಷ್ಟೋ ವೇದಿಕೆಗೆ ಹೋಗಿದ್ದೇನೆ. ಬಹಳ ಸಮಯದ ನಂತರ ಮೊದಲ ಬಾರಿಗೆ ನರ್ವಸ್‌ ಆದೆ. ಎಲ್ಲರ ಎಲ್ಲರ ಕಣ್ಣು ನಮ್ಮ ಮೇಲೆ ಇರಬೇಕಾದರೆ ಟೆನ್ಶನ್‌ ಆಗುತ್ತದೆ’ ಎಂದರು. ಆಗ ಇಡೀ ಸಭಾಂಗಣ ಮೌನಕ್ಕೆ ಶರಣಾಯಿತು.

‘ಚಿತ್ರರಂಗದ ಕುಟುಂಬದಲ್ಲಿ ನನಗೆ ಸ್ಥಾನ ಸಿಕ್ಕಿದೆ. ಚಿತ್ರರಂಗದ ಪುಟದಲ್ಲಿ ನಂಗೆ ಸ್ಥಾನ ಸಿಕ್ಕಿದೆ. ಚಿತ್ರರಂಗದ ಕುರಿತು ಎಷ್ಟೇ ದೊಡ್ಡ ಪುಸ್ತಕ ಬರೆದರೂ ಅದರಲ್ಲಿ ನಂಗೆ ಒಂದು ಪುಟ ಇದೆ ಅಂತ ಖುಷಿ ಆಗುತ್ತದೆ. ಪಯಣ ಶುರುವಾದಾಗ ಯಾರಿಗೂ ನಾವು ಎಲ್ಲಿಯವರೆಗೆ ಹೋಗುತ್ತೇವೆ ಅನ್ನುವುದು ಗೊತ್ತಿರುವುದಿಲ್ಲ. ಮುಂದೆ ಹೋಗ್ತಾ ಹೋಗ್ತಾ ಒಂದು ಕಡೆ ಹಿಂತಿರುಗಿ ನೋಡಿದಾಗ ಇಷ್ಟುದೂರ ಬಂದೆವೋ ಅನ್ನಿಸುತ್ತದೆ. ಇಲ್ಲಿ ನಾವು ಎಷ್ಟುಸಿನೆಮಾ ಮಾಡಿದೆವು, ಎಷ್ಟುಹಿಟ್‌ ಕೊಟ್ಟೆವು ಅನ್ನೋ ಲೆಕ್ಕ ಇರುತ್ತದೆ. ಆದರೆ ಇಷ್ಟುದಿನಗಳ ನೆನಪು ಮತ್ತು ನೀವೆಲ್ಲರೂ ಕೊಟ್ಟಿರುವ ಪ್ರೀತಿ ಮುಂದೆ ಯಾವ ಲೆಕ್ಕಾನೂ ಇಲ್ಲ. ಎಲ್ಲರೂ ನನ್ನ ಪ್ಲಸ್‌ ನೋಡಿದರೇ ಹೊರತು ಮೈನಸ್‌ ಅಲ್ಲ. ಈ ಚಿತ್ರರಂಗದ 25 ವರ್ಷದ ಪಯಣದಲ್ಲಿ ನಾನೊಬ್ಬನೇ ಬಂದಿದ್ದಲ್ಲ, ನನ್ನೊಟ್ಟಿಗೆ ತುಂಬಾ ಜನ ತಂತ್ರಜ್ಞರು ಗೆಳೆಯರು ಬಂದಿದ್ದಾರೆ ಅವರಿಗೆ ಎಲ್ಲರಿಗೂ ಧನ್ಯವಾದ’ ಎಂದು ಸುದೀಪ್‌ ಹೇಳಿದರು.

ಕಾರ್ಯಕ್ರಮಕ್ಕೆ ಬಂದ ಮುಖ್ಯಮಂತ್ರಿಗಳನ್ನು ನೆನೆಸಿಕೊಂಡು ಮಾತನಾಡಿದ ಅವರು, ‘ಚಿತ್ರರಂಗ ಒದ್ದಾಡುತ್ತಿದ್ದ ಸಂದರ್ಭದಲ್ಲಿ ಶೇ.100 ಚಿತ್ರಮಂದಿರ ಭರ್ತಿಗೆ ಅವಕಾಶ ಕೊಟ್ಟು ಚಿತ್ರರಂಗಕ್ಕೆ ಉಸಿರಾಡುವುದಕ್ಕೆ ಅವಕಾಶ ಕೊಟ್ಟು, ವಿಶ್ವಾಸದಿಂದ ನಡೆಯಲು ಪ್ರೋತ್ಸಾಹ ಕೊಟ್ಟಮುಖ್ಯಮಂತ್ರಿಗಳಿಗೆ ನನ್ನ ಪರವಾಗಿ ಮತ್ತು ಚಿತ್ರರಂಗದ ಪರವಾಗಿಯೂ ಧನ್ಯವಾದ. ಸಮಯ ಮಾಡಿಕೊಂಡು ಕಾರ್ಯಕ್ರಮಕ್ಕೆ ಬಂದು ನನಗೋಸ್ಕರ ನಾಲ್ಕು ಮಾತನಾಡಿರುವುದಕ್ಕೆ ಕೃತಜ್ಞತೆ’ ಎಂದರು.

Source:Suvarna News