ಇಂದು 13ನೇ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆ ವಹಿಸಲಿರುವ ಪ್ರಧಾನಿ ಮೋದಿ; ಅಫ್ಘಾನ್​ ಸ್ಥಿತಿ ಮುಖ್ಯ ಚರ್ಚಾ ವಿಷಯ

Sep 9, 2021

ಪ್ರಧಾನಿ ನರೇಂದ್ರ ಮೋದಿ (PM Narendra Modi)ಯವರು ಇಂದು 13ನೇ ಬ್ರಿಕ್ಸ್​ ಶೃಂಗಸಭೆ (BRICS Summit)ಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಶೃಂಗ ಸಭೆ ವರ್ಚ್ಯುವಲ್​ ವಿಧಾನದಲ್ಲಿ ನಡೆಯಲಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಹಾಗೇ, ಸಭೆಯಲ್ಲಿ ಬ್ರೆಜಿಲ್​ ಅಧ್ಯಕ್ಷ ಜೇರ್​ ಬೊಲ್ಸೊನಾರೊ, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಾಫೋಸಾ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಪಾಲ್ಗೊಳ್ಳಲಿದ್ದಾರೆ.

‘ಬ್ರಿಕ್ಸ್​@15: ನಿರಂತರತೆ, ಬಲವರ್ಧನೆ ಮತ್ತು ಸಾಮರಸ್ಯಕ್ಕಾಗಿ ಆಂತರಿಕ-ಬ್ರಿಕ್ಸ್ ಸಹಕಾರ (BRICS@15: Intra-BRICS cooperation for continuity, consolidation and consensus)’ ಎಂಬುದು ಪ್ರಸಕ್ತ ಬಾರಿಯ ಬ್ರಿಕ್ಸ್​ ಶೃಂಗಸಭೆಯ ಥೀಮ್​ ಆಗಿದೆ. ಈ ಥೀಮ್​ಗೆ ಅನುಗುಣವಾಗಿ ಇಂದಿನ ಬ್ರಿಕ್ಸ್​ ಶೃಂಗಸಭೆಯಲ್ಲಿ, ಕಾಬೂಲ್​ನ್ನು ತಾಲಿಬಾನ್​ ವಶಪಡಿಸಿಕೊಂಡ ನಂತರ ಉಂಟಾಗಿರುವ ಪರಿಸ್ಥಿತಿ ಮತ್ತು ಮುಂದಿನ ದಿನಗಳಲ್ಲಿ ಅಲ್ಲಿಂದ ಎದುರಾಗಬಹುದಾದ ಭಯೋತ್ಪಾದನೆ ಅಪಾಯದ ಬಗ್ಗೆಯೂ ಚರ್ಚಿಸಲಾಗುವುದು ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.

ಹಾಗೇ, ಇಂದಿನ ಸಭೆಯಲ್ಲಿ ಅಫ್ಘಾನಿಸ್ತಾನದ ಸದ್ಯದ ಸ್ಥಿತಿ ಸೇರಿ ಇನ್ನೂ ಹಲವು ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯೆಗಳನ್ನು ನಾಯಕರು ಚರ್ಚಿಸಲಿದ್ದಾರೆ. ಅದರಲ್ಲೂ ಉಗ್ರವಾದದ ವಿರುದ್ಧ ಹೋರಾಟವನ್ನು ಆದ್ಯತೆಯಾಗಿ ಪರಿಗಣಿಸುವ ಸಂಬಂಧ ಮಾತುಕತೆಗಳು ನಡೆಯಲಿವೆ. ಇದೀಗ ತಾಲಿಬಾನ್​ ಅಫ್ಘಾನಿಸ್ತಾನದಲ್ಲಿ ಆಡಳಿತ ಶುರು ಮಾಡಿದೆ..ಹಾಗಂತ ಆ ನೆಲ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆಯಾಗದಂತೆ ತಡೆಗಟ್ಟುವ ಸಂಬಂಧ ವಿಷಯಗಳು ಶೃಂಗಸಭೆಯಲ್ಲಿ ಚರ್ಚೆಯಾಗಲಿವೆ ಎಂದು ಮೂಲಗಳಿಂದ ತಿಳಿದುಬಂದಿದ್ದಾಗಿ ಎಎನ್​ಐ ತಿಳಿಸಿದೆ.

ಬ್ರೆಜಿಲ್​, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನೊಳಗೊಂಡ ಬ್ರಿಕ್ಸ್​ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇದು ಎರಡನೇ ಬಾರಿಗೆ ಅಧ್ಯಕ್ಷತೆ ವಹಿಸುತ್ತಿದ್ದಾರೆ. ಈ ಮೊದಲು 2016ರಲ್ಲಿ ಅಧ್ಯಕ್ಷತೆ ವಹಿಸಿದ್ದರು. ಬ್ರಿಕ್ಸ್​ನ 15ನೇ ವರ್ಷದ ವಾರ್ಷಿಕೋತ್ಸವ ಈ ಬಾರಿಯಾಗಿದ್ದು, ಅದೇ ಸಮಯದಲ್ಲಿ ಭಾರತ ಅಧ್ಯಕ್ಷತೆ ವಹಿಸಿರುವುದು ನಿಜಕ್ಕೂ ವಿಶೇಷವಾಗಿದೆ.

Source:tv9kannada