ಆ್ಯಂಡ್ರಾಯ್ಡ್ 12 ಬಿಡುಗಡೆಗೆ ಸಿದ್ಧವಾಗುತ್ತಿದೆಯಾ ಗೂಗಲ್?

Feb 8, 2021

ಗೂಗಲ್ ತನ್ನ ಮೊಬೈಲ್ ಆಪರೇಟಿಂಗ್ ಸಾಫ್ಟ್‌ವೇರ್ ಆಂಡ್ರಾಯ್ಡ್ 12 ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆಯಾ?

ಇಂಥದೊಂದು ಅನುಮಾನ ಮೂಡಲು ಕಾರಣವಿದೆ. ಈ ಬಗ್ಗೆ ಪ್ಲೇ ಸ್ಟೋರ್‌ನಲ್ಲಿ ಆಂಡ್ರಾಯ್ಡ್ ಬೀಟಾ ಫೀಡ್‌ಬ್ಯಾಕ್ ಆಪ್ ಕಾಣಿಸಿಕೊಂಡಿದೆ. ಆಯ್ದ ಕೆಲವೇ ಬಳಕೆದಾರರಿಗೆ ಆಂಡ್ರಾಯ್ಡ್ 11 ಬಿಡುಗಡೆ ಮಾಡಿದ್ದ ಗೂಗಲ್ ಇದೀಗ ಆಂಡ್ರಾಯ್ಡ್ 12 ಬಿಡುಗಡೆಗೂ ಮುಂದಾಗುತ್ತಿದೆಯಾ ಎಂಬ ಸಂಶಯ ಮೂಡಲು ಇದು ಕಾರಣವಾಗಿದೆ. ಈ ಬಗ್ಗೆ ಗೂಗಲ್ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನೇನೂ ನೀಡಿಲ್ಲ. ಆದರೆ, ಇಂಥ ಆಪ್‌ಗಳನ್ನು ಫೀಡ್‌ಬ್ಯಾಕ್ ಪಡೆಯುವ ಸಂಬಂಧ ಬಳಸಲಾಗುತ್ತದೆ ಎಂಬುದನ್ನು ಬಳಕೆದಾರರು ಗಮನಿಸಬೇಕಾದ ಸಂಗತಿಯಾಗಿದೆ.

ಈ ಬಗ್ಗೆ ಹಲವು ಸುದ್ದಿ ವೆಬ್‌ತಾಣಗಳು ವರದಿ ಮಾಡಿವೆ. ಜೊತೆಗೆ ಗೂಗಲ್ ಕೂಡ ಬೀಟಾ ಟೆಸ್ಟರ್‌ಗಳಿಗೆ ಈ ಆಂಡ್ರಾಯ್ಡ್ 12 ಬಗ್ಗೆ ಫೀಡ್‌ಬ್ಯಾಕ್ ನೀಡುವಂತೆಯೇನೂ ಕೇಳಿಕೊಂಡಿಲ್ಲ. ಆದರೆ, ಆಂಡ್ರಾಯ್ಡ್ ಬೀಟಾ ಫೀಡ್‌ಬ್ಯಾಕ್ ಆಪ್ ಮಾತ್ರ ಬೇರಯದ್ದೇ ಸುಳಿವು ನೀಡುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಹಲವು ವೆಬ್‌ತಾಣಗಳು ಮಾಡಿರುವ ವರದಿಗಳ ಪ್ರಕಾರ, ಬಳಕೆಯಾಗದ ಅಪ್ಲಿಕೇಶನ್ ಮತ್ತು ಆಂಡ್ರಾಯ್ಡ್ 12 ಡೆವಲಪರ್ ಪೂರ್ವವೀಕ್ಷಣೆ ಅಥವಾ ಬೀಟಾ ವರ್ಷನ್‌ನಲ್ಲಿ ಬಹಿರಂಗಪಡಿಸುವುದಿಲ್ಲ ಅಥವಾ ಸುಳಿವು ನೀಡುವುದಿಲ್ಲ ಎಂಬ ಸಂಗತಿಯನ್ನು ಇದು ಸೂಚಿಸುತ್ತಿದೆ.

ಹೀಗಿದ್ದಾಗ್ಯೂ ಆಂಡ್ರಾಯ್ಡ್ 12 ಡೆವಲಪರ್ ಪ್ರಿವ್ಯೂ ಸದ್ಯದಲ್ಲೇ ಬಿಡುಗಡೆಯಾಗುವ ಮುನ್ಸೂಚನೆಯನ್ನಂತೂ ಇದು ನೀಡುತ್ತಿದೆ. ಈ ಹಿಂದಿನ ಒಎಸ್ ಬಗ್ಗೆ ಹೇಳುವುದಾದರೆ, ಆಂಡ್ರಾಯ್ಡ್ 11 ಡೆವಲಪರ್ ಪ್ರಿವ್ಯೂ ಅನ್ನು ಮಾರ್ಚ್ ಬದಲಿಗೆ ಫೆಬ್ರವರಿಯಲ್ಲೇ ಬಿಡುಗಡೆಯಾಗಿದ್ದನ್ನು ಗಮನಿಸಬಹುದು. ಅದೇ ರೀತಿಯ ಸಂಭಾವ್ಯತೆಯನ್ನು ಆಂಡ್ರಾಯ್ಡ್ 12ಕ್ಕೆ ಸಂಬಂಧಿಸಿದಂತೆಯೂ ನಿರೀಕ್ಷಿಸಬಹುದಾಗಿದೆ.

ಈ ವರ್ಷಾಂತ್ಯಕ್ಕೆ ಆಂಡ್ರಾಯ್ಡ್ 12 ಬಿಡುಗಡೆಯಾಗಬಹುದು ಎನ್ನುತ್ತದೆ ಮತ್ತೊಂದು ವರದಿಯು. ಸಾಮಾನ್ಯವಾಗಿ ಗೂಗಲ್ ಯಾವುದೇ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದಾಗ ಅದು ಮೊದಲಿಗೆ ತನ್ನ ಸ್ಮಾರ್ಟ್‌ಫೋನ್‌ಗಳಿಗೆ ಪರಿಚಯಿಸುತ್ತದೆ. ಈ ಬಾರಿಯೂ ಹಾಗೆ ಗೂಗಲ್ ತನ್ನ ಫಿಕ್ಸೆಲ್ ಫೋನ್‌ಗಳಿಗೆ ಮೊದಲಿಗೆ ಈ ಹೊಸ ಆವೃತ್ತಿಯ ಆಂಡ್ರಾಯ್ಡ್ ಬಳಕೆಯಾಗಬಹುದು. ಈ ಹೊಸ ಆಂಡ್ರಾಯ್ಡ್ 12 ವರ್ಷನ್ ಅಪ್‌ಡೇಟ್‌ನೊಂದಿಗೆ, ಆಯ್ದ ಕೆಲವು ಕ್ರಿಯೆಗಳಿಗಾಗಿ ಫೋನ್‌ ಹಿಂಬದಿಯಲ್ಲಿ ಗೂಗಲ್ ಪಿಕ್ಸೆಲ್ ಫೋನ್‌ಗಳು ಡಬಲ್ ಟ್ಯಾಪ್ ಗೆಸ್ಚರ್ ಪಡೆದುಕೊಳ್ಳಬಹುದು. ಇದು ಐಫೋನ್‌ಗಳಲ್ಲಿ ಈಗಾಗಲೇ ಇರುವ ಬ್ಯಾಕ್ ಟ್ಯಾಪ್ ಫೀಚರ್‌ ರೀತಿಯದ್ದೇ ಆಗಿರುವ ಸಾಧ್ಯತೆ ಇದೆ. ಈ ಫೀಚರ್ ಅನ್ನು ಐಫೋನ್ ತನ್ನ ಐಒಎಸ್ 14 ವರ್ಷನ್‌ನಲ್ಲಿ ಪರಿಚಯಿಸಿತ್ತು. ಕೆಲವು ನಿಶ್ಚಿತ ಕ್ರಿಯೆಗಳಿಗೆ ಬಳಕೆದಾರರು ಫೋನಿನ ಹಿಂಬದಿಯಲ್ಲಿ ಡಬಲ್ ಟ್ಯಾಪ್ ಮಾಡಬೇಕಾಗುತ್ತದೆ. ಹಾಗೆಯೇ ಈ ಬ್ಯಾಕ್ ಟ್ಯಾಪ್ ಅನ್ನು ಬಳಕೆದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಕಸ್ಟಮೈಸ್ ಕೂಡ ಮಾಡಿಕೊಳ್ಳಬಹುದು.

ಆಂಡ್ರಾಯ್ಡ್ 12 ವರ್ಷನ್‌ನಲ್ಲಿ ಒಂದಿಷ್ಟು ಹೊಸ ಹೊಸ ಫೀಚರ್‌ಗಳನ್ನು ಗೂಗಲ್ ಸೇರಿಸುವ ಸಾಧ್ಯತೆಯೂ ಇದೆ. ಹೊಸ ಥೀಮ್‌ಗಳು ಇರಬಹುದು, ಹೊಸ ನೋಟಿಫಿಕೇಷನ್‌ ಇಂಟರ್ಫೇಸ್‌ಗಳಲ್ಲೂ ಹೊಸತನ ತರುವ ಸಾಧ್ಯತೆ ಇದೆ. ಗೂಗಲ್ ಆಂಡ್ರಾಯ್ಡ್ 11 ಮೂಲಕ ಈಗಾಗಲೇ ಕೆಲವು ಆಸಕ್ತಿಕರ ಫೀಚರ್‌ಗಳನ್ನು ಜಾರಿಗೆ ತಂದಿದೆ. ಚಾಟ್ ಬಬಲ್ಸ್, ನ್ಯೂ ಕನ್ವರ್ಸಷನ್, ಡಾರ್ಕ್ ಮೋಡ್ ಷೆಡ್ಯೂಲಿಂಗ್, ಪ್ರೈವೇಸಿ ಮತ್ತು ಪರ್ಮಿಷನ್ಸ್, ಏರೋಪ್ಲೇನ್ ಮೋಡ್ ವಿಧೌಟ್ ಬ್ಲೂಟೂತ್, 5ಜಿ ತಂತ್ರಜ್ಞಾನಕ್ಕೆ ಬೆಂಬಲ, ಫೋಲ್ಡೇಬಲ್ ಆಯ್ಕೆಗಳು ಸೇರಿದಂತೆ ಹೊಸ ನಾವೀನ್ಯದ ಫೀಚರ್‌ಗಳನ್ನು ಅದು ಅಡಕಗೊಳಿಸಿದೆ. ಈಗಾಗಲೇ ಈ ಆಂಡ್ರಾಯ್ಡ್ 11 ಪಿಕ್ಸೆಲ್ ಫೋನುಗಳಾದ, 2, 2ಎಕ್ಸ್ಎಲ್, 3 ಮತ್ತು 3 ಎಕ್ಸ್ ಎಲ್, ಪಿಕ್ಸೆಲ್ 3, ಎಕ್ಸ್ಎಲ್ 3ಎ, ಪಿಕ್ಸೆಲ್ 4, ಎಕ್ಸಎಲ್ 4, ಪಿಕ್ಸೆಲ್ 4ಎಗಳಲ್ಲಿ ಚಾಲ್ತಿಯಲ್ಲಿದೆ. ಇಷ್ಟು ಮಾತ್ರವಲ್ಲದೇ ಕೆಲವು ಬೇರೆ ಕಂಪನಿಯ ಫೋನುಗಳಲ್ಲೂ ಆಂಡ್ರಾಯ್ಡ್ 11 ಬಳಸಲಾಗುತ್ತಿದೆ ಎನ್ನುತ್ತಿವೆ ವರದಿಗಳು.

Source:Suvarna News