ಎರಡನೇ ಹಂತದಲ್ಲಿ.. ಪ್ರಧಾನಿ ನರೇಂದ್ರ ಮೋದಿಗೂ ಕೊರೊನಾ ಲಸಿಕೆ!

Jan 21, 2021

ಸರ್ಕಾರದ ಉನ್ನತ ಮೂಲಗಳು ತಿಳಿಸಿರುವ ಮಾಹಿತಿ ಪ್ರಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡನೇ ಹಂತದ ಕೊರೊನಾ ಲಸಿಕೆ ವಿತರಣೆ ಸಂದರ್ಭದಲ್ಲಿ ಲಸಿಕೆ ಪಡೆಯಲಿದ್ದಾರೆ.

ದೆಹಲಿ: ದೇಶದಲ್ಲಿ ಮೊದಲ ಹಂತದ ಕೊರೊನಾ ಲಸಿಕೆ ವಿತರಣೆ ನಿರ್ದಿಷ್ಟ ಸಮಯದಲ್ಲಿ ನಿರೀಕ್ಷಿತ ಗುರಿ ತಲುಪುತ್ತಿಲ್ಲ. ಹಲವೆಡೆ ಲಸಿಕೆ ಸ್ವೀಕರಿಸಲು ಹೆಸರು ನೋಂದಾಯಿಸಿಕೊಂಡಿದ್ದ ಸ್ವಯಂ ಸೇವಕರು ಲಸಿಕೆ ಪಡೆಯಲು ಮುಂದಾಗುತ್ತಿಲ್ಲ. ಏತನ್ಮಧ್ಯೆ ಬೇರೆ ದೇಶಗಳ ಮುಖಂಡರು ಮೊದಲು ತಾವೇ ಲಸಿಕೆ ಸ್ವೀಕರಿಸಿ ಜನರಿಗೆ ಧೈರ್ಯ ತುಂಬಿದ್ದಾರೆ, ಭಾರತದಲ್ಲಿ ಹೀಗೇಕೆ ಆಗುತ್ತಿಲ್ಲ? ಎಂಬ ಪ್ರಶ್ನೆಗಳೂ ಮೂಡಿದ್ದವು.

ಇದೀಗ ಸರ್ಕಾರದ ಉನ್ನತ ಮೂಲಗಳು ತಿಳಿಸಿರುವ ಮಾಹಿತಿ ಪ್ರಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡನೇ ಹಂತದ ಕೊರೊನಾ ಲಸಿಕೆ ವಿತರಣೆ ಸಂದರ್ಭದಲ್ಲಿ ಲಸಿಕೆ ಪಡೆಯಲಿದ್ದಾರೆ. ಅವರೊಂದಿಗೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಸಹ ಕೊರೊನಾ ಲಸಿಕೆ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಜನವರಿ 16ರಂದು ಮೊದಲ ಹಂತದ ಕೊರೊನಾ ಲಸಿಕೆ ವಿತರಣೆ ಆರಂಭಿಸಿದ ನಂತರ ದೇಶದ ಜನರಲ್ಲಿ ಮನವಿ ಮಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಲಸಿಕೆಯನ್ನು ಕಡೆಗಣಿಸದಂತೆ ಮನವಿ ಮಾಡಿದ್ದರು. ಸದ್ಯ ಕೇಂದ್ರಾರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಇದುವರೆಗೆ ಮೊದಲ ಹಂತದ ಕೊರೊನಾ ಲಸಿಕೆ ವಿತರಣೆಯಲ್ಲಿ ದೇಶಾದ್ಯಂತ 1,91,181 ಮಂದಿ ಕೊರೊನಾ ಲಸಿಕೆ ಸ್ವೀಕರಿಸಿದ್ದಾರೆ. ಎರಡನೇ ಹಂತದ ಲಸಿಕೆ ವಿತರಣೆ ಮುಗಿಯುವ ವೇಳೆ ದೇಶದ 30 ಕೋಟಿ ಜನರಿಗೆ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ.

Source: TV9Kannada