ಮಾತೃಭಾಷಾ ವೈದ್ಯ, ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆಗೆ ಮೋದಿ ಕರೆ

Feb 8, 2021

ಧೆಕಿಯಾಜುಲಿ(ಫೆ.08): ಎಲ್ಲಾ ರಾಜ್ಯಗಳಲ್ಲಿ ಕನಿಷ್ಠ ಒಂದಾದರೂ ಮಾತೃ ಭಾಷೆಯಲ್ಲಿ ಕಲಿಸುವ ಮೆಡಿಕಲ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳ ಸ್ಥಾಪನೆ ಆಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಅಸ್ಸಾಂ ಮಾಲಾ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ‘ಗ್ರಾಮಗಳು ಮತ್ತು ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಪ್ರತಿಯೊಂದು ರಾಜ್ಯದಲ್ಲಿ ಕನಿಷ್ಠ ಒಂದಾದರೂ ಸ್ಥಳೀಯ ಭಾಷೆಯಲ್ಲೇ ಕಲಿಸುವ ಮೆಡಿಕಲ್‌ ಕಾಲೇಜು ಮತ್ತು ಎಂಜಿನಿಯರಿಂಗ್‌ ಕಾಲೇಜುಗಳ ಸ್ಥಾಪನೆ ಆಗಬೇಕು ಎಂಬುದು ನನ್ನ ದೊಡ್ಡ ಕನಸಾಗಿದೆ. ಇದರಿಂದ ಗ್ರಾಮೀಣ ಭಾಗಗಳಲ್ಲಿ ವೈದ್ಯಕೀಯ ಸೇವೆ ಸುಧಾರಿಸಲಿದೆ. ಮಾತೃ ಭಾಷೆಯಲ್ಲೇ ವ್ಯವಹರಿಸುವ ಮತ್ತು ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ವೈದ್ಯರು ಲಭ್ಯವಾಗಲಿದ್ದಾರೆ’ ಎಂದು ಹೇಳಿದರು.

ಇದೇ ವೇಳೆ ಮಾತೃ ಭಾಷೆಯಲ್ಲೇ ಕಲಿಸುವ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳನ್ನು ಅಸ್ಸಾಂನಲ್ಲೂ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.

Source:Suvarna News