ಅಪ್ಪು ಸಿನಿಮಾ ಪಯಣಕ್ಕೆ 45ರ ಸಂಭ್ರಮ; ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ ಚಿತ್ರರಂಗ!

Mar 1, 2021

ಅಪ್ಪು ಅವರ 45 ವರ್ಷಗಳ ಸಿನಿ ಪಯಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಟ, ನಟಿಯರು, ನಿರ್ದೇಶಕರು, ಅಭಿಮಾನಿಗಳು ಹಾಗೂ ಪ್ರೇಕ್ಷಕರು ಶುಭ ಕೋರಿದ್ದಾರೆ. ನಟ ಸುದೀಪ್‌, ಸಂತೋಷ್‌ ಆನಂದ್‌ ರಾಮ್‌, ರಿಷಬ್‌ ಶೆಟ್ಟಿ, ಪವನ್‌ ಒಡೆಯರ್‌, ಚೇತನ್‌ ಕುಮಾರ್‌, ರಕ್ಷಿತಾ ಪ್ರೇಮ್‌, ಹರಿಪ್ರಿಯಾ, ಸೃಜನ್‌ ಲೋಕೇಶ್‌, ಹೇಮಂತ್‌ ರಾವ್‌, ಸಂಗೀತ ನಿರ್ದೇಶಕ ತಮನ್‌ ಎಸ್‌ ಹೀಗೆ ಹಲವರು ಪುನೀತ್‌ ಅವರ ಸಿನಿ ಜರ್ನಿಗೆ ಟ್ವೀಟ್‌ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

ಚಿತ್ರರಂಗದ ಪ್ರೇಮದ ಕಾಣಿಕೆ

ಬಾಲ ನಟರಾಗಿಯೇ ಚಿತ್ರರಂಗಕ್ಕೆ ಪ್ರವೇಶ ಕೊಟ್ಟವರು ಪುನೀತ್‌ರಾಜ್‌ಕುಮಾರ್‌. ಅವರ ಮೊದಲ ಚಿತ್ರಕ್ಕೆ ಬಣ್ಣ ಹಚ್ಚಿದ್ದಾಗ ಆರು ತಿಂಗಳ ಮಗು. ಹೀಗಾಗಿ ಅಪ್ಪು, ಸ್ಯಾಂಡಲ್‌ವುಡ್‌ಗೆ ಸಿಕ್ಕ ಪ್ರೇಮದ ಕಾಣಿಕೆ. ಅರ್ಥಾತ್‌ 1976ರಲ್ಲಿ ತೆರೆಕಂಡ ಡಾ ರಾಜ್‌ಕುಮಾರ್‌ ಹಾಗೂ ನಟಿ ಆರತಿ ಅವರ ಕಾಂಬಿನೇಷನ್‌ನ ‘ಪ್ರೇಮದ ಕಾಣಿಕೆ’ ಚಿತ್ರದಲ್ಲಿ ಪುಟ್ಟಕಂದನ ಪಾತ್ರದಲ್ಲಿ ಕಾಣಿಸಿಕೊಂಡವರು. ಆಪ್ತವಾಗಿರುವ ಹೆಸರಿನ ಚಿತ್ರದ ಮೂಲಕ ಕ್ಯಾಮೆರಾ ಮುಂದೆ ಬಂದವರು ಅಪ್ಪು. ಹೀಗಾಗಿ ಅವರು ಕನ್ನಡ ಚಿತ್ರರಂಗದ ಪ್ರೇಮದ ಕಾಣಿಕೆ ಎನ್ನಬಹುದು.

ಈ ದಿನವನ್ನು ವಿಶೇಷಗೊಳಿಸಿದ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು. 45 ವರ್ಷದ ಈ ಪಯಣದಲ್ಲಿ ನನ್ನನ್ನು ಪ್ರೋತ್ಸಾಹಿಸಿ, ಪ್ರೀತಿಸಿದ ಅಭಿಮಾನಿಗಳಿಗೆ, ಸಹಉದ್ಯೋಗಿಗಳಿಗೆ, ಬಂಧುಮಿತ್ರರಿಗೆ ನನ್ನ ಹೃದಯಪೂರ್ವಕ ನಮನಗಳು.- ಪುನೀತ್‌ರಾಜ್‌ಕುಮಾರ್‌, ನಟ

ಹೀಗೆ ಬೆಳ್ಳಿತೆರೆಯಲ್ಲಿ ಬಾಲ ಪ್ರತಿಭೆಯಾಗಿ ಬೆಳಗಿದ ದಾರಿಯಲ್ಲಿ ಮುಂದೆ ‘ಸನಾದಿ ಅಪ್ಪಣ್ಣ’, ‘ವಸಂತಗೀತಾ’, ‘ಬೆಟ್ಟದ ಹೂವು’, ‘ಭಾಗ್ಯವಂತ’, ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’, ‘ಭಕ್ತ ಪ್ರಹ್ಲಾದ’ ‘ಎರಡು ಕನಸು’, ‘ಹೊಸ ಬೆಳಕು’, ‘ಶಿವ ಮೆಚ್ಚಿದ ಕಣ್ಣಪ್ಪ’, ‘ತಾಯಿಗೆ ತಕ್ಕ ಮಗ’, ‘ಯಾರಿವನು’ ಹೀಗೆ ಹಲವು ಚಿತ್ರಗಳಲ್ಲಿ ಬಾಲ ನಟರಾಗಿ ಮಿಂಚಿದ್ದಾರೆ ಪುನೀತ್‌ರಾಜ್‌ಕುಮಾರ್‌. 1985ರಲ್ಲಿ ತೆರೆಕಂಡ ‘ಬೆಟ್ಟದ ಹೂವು’ ಚಿತ್ರಕ್ಕಾಗಿ ಅತ್ಯುತ್ತಮ ಬಾಲ ನಟ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡ ಪ್ರತಿಭೆ, ಅಪ್ಪು. ಹಾಗೆ ‘ಚಲಿಸುವ ಮೋಡಗಳು’ ಹಾಗೂ ‘ಎರಡು ಕನಸು’ ಚಿತ್ರಗಳಿಗಾಗಿ ಅತ್ಯುತ್ತ ಬಾಲ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.

ನಾಯಕನಾಗಿ ಆಕಾಶಕ್ಕೇರಿದ ಅಪ್ಪು

ಬಾಲ್ಯದಲ್ಲೇ ನಟನಾ ಜಗತ್ತಿಗೆ ಕಾಲಿಟ್ಟು ಪುನೀತ್‌ರಾಜ್‌ಕುಮಾರ್‌, 2002ರಲ್ಲಿ ತೆರೆಗೆ ಬಂದ ‘ಅಪ್ಪು’ ಚಿತ್ರದ ಮೂಲಕ ಪೂರ್ಣ ಪ್ರಮಾಣದಲ್ಲಿ ಹೀರೋ ಆದವರು. ‘ಅಭಿ’, ‘ವೀರ ಕನ್ನಡಿಗ’, ‘ಆಕಾಶ್‌’, ‘ಅರಸು’, ‘ಅಜಯ್‌’ ಚಿತ್ರಗಳಿಂದ ಶುರುವಾಗಿ ಈಗ ‘ರಾಜಕುಮಾರ’ ಹಾಗೂ ‘ಯುವರತ್ನ’ ಚಿತ್ರಗಳ ವರೆಗೂ ಸಾಗಿ ಬಂದಿದೆ. ನಾಯಕ ನಟರಾಗಿಯೂ ಕೂಡ ಆಕಾಶಕ್ಕೇರಿದ ‘ಅಪ್ಪು’ ಚಿತ್ರರಂಗದ ಪಾಲಿನ ‘ಅರಸು’.

ಮಕ್ಕಳ ಅಚ್ಚು ಮೆಚ್ಚಿನ ನಟ

ಕ್ಲಾಸ್‌ ಹಾಗೂ ಮಾಸ್‌ ಜಾನರ್‌ ಚಿತ್ರಗಳಲ್ಲಿ ಎಷ್ಟೇ ಮಿಂಚಿದರೂ ವಿಶೇಷವಾಗಿ ಮಕ್ಕಳ ಅಭಿಮಾನಿಗಳನ್ನು ಹೊಂದಿರುವ ಅಪರೂಪದ ಹೀರೋ ಪುನೀತ್‌ರಾಜ್‌ಕುಮಾರ್‌. ಬಹುಶಃ ಪುನೀತ್‌ರಾಜ್‌ಕುಮಾರ್‌ ಅವರನ್ನು ಇಷ್ಟಪಡುವ ಅಭಿಮಾನಿಗಳಲ್ಲಿ ಮೊದಲ ಸಾಲಿನಲ್ಲಿ ಈ ಮಕ್ಕಳೇ ನಿಲ್ಲುತ್ತಾರೆ. ‘ಕಾಣದಂತೆ ಮಾಯವಾದನೋ ನಮ್ಮ ಶಿವ ಕೈಲಾಸ ಸೇರಿಕೊಂಡನೋ’ ಹಾಡು ಬಂದರೆ ಮಕ್ಕಳ ಮೈ ಮೇಲೆ ಪುನೀತ್‌ ರಾಜ್‌ಕುಮಾರ್‌ ಅವರೇ ಕುಣಿಯುತ್ತಾರೆ. ಆ ಮಟ್ಟಿಗೆ ಮುಗ್ಧ ಮನಸ್ಸುಗಳನ್ನು ಕದ್ದು, ಕನ್ನಡ ಚಿತ್ರರಂಗದ ರಾಜರತ್ನ ಎಂದರೆ ಅದು ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಅವರ ಕ್ರೇಜ್‌.

ಅಭಿಮಾನಿಗಳ ಸಂಭ್ರಮ

ತಮ್ಮ ನೆಚ್ಚಿನ ನಟನ 45 ವರ್ಷಗಳ ಸಿನಿಮಾ ಪಯಣದ ಸಂಭ್ರಮವನ್ನು ಅಭಿಮಾನಿಗಳು ಕೂಡ ದೊಡ್ಡ ಮಟ್ಟದಲ್ಲಿ ಆಚರಿಸುತ್ತಿದ್ದಾರೆ. ವಿಶೇಷವಾಗಿ ರೂಪಿಸಿರುವ ಕಾಮನ್‌ ಡೀಪಿ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಹಲವರು ಈ ಪೋಸ್ಟರ್‌ ಹಂಚಿಕೊಳ್ಳುವ ಮೂಲಕ ನಟ ಪುನೀತ್‌ ರಾಜ್‌ಕುಮಾರ್‌ ಅವರ 45 ವರ್ಷಗಳ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ.

Source: Suvarna news