VTUನಲ್ಲಿ ಕೋಟ್ಯಾಂತರ ರೂ ಹಗರಣ, ಲೋಕಾಯುಕ್ತರಿಗೆ ದೂರು ನೀಡಲು ನಿರ್ಧಾರ

Feb 5, 2021

VTU Fund Scam: ಗುಣಮಟ್ಟ ಶಿಕ್ಷಣಕ್ಕೆ ಸರ್ಕಾರ ನೀಡಿದ ಕೋಟ್ಯಾಂತರ ಹಣ ಅಕ್ರಮವಾಗಿದೆ. ಬರೋಬ್ಬರಿ 172.2 ಕೋಟಿ ರೂಪಾಯಿ ಹಣ ದುರುಪಯೋಗವಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ಸುರೇಂದ್ರ ಉಗಾರೆ ಆರೋಪ ಮಾಡಿದ್ದಾರೆ.

ಬೆಳಗಾವಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (VTU) ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹಗರಣಗಳ ಹೊಳೆಯಲ್ಲಿ VTU ತೇಲುತ್ತಿದೆ. ಗುಣಮಟ್ಟ ಶಿಕ್ಷಣಕ್ಕೆ ಸರ್ಕಾರ ನೀಡಿದ ಕೋಟ್ಯಾಂತರ ಹಣ ಅಕ್ರಮವಾಗಿದೆ. ಬರೋಬ್ಬರಿ 172.2 ಕೋಟಿ ರೂಪಾಯಿ ಹಣ ದುರುಪಯೋಗವಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ಸುರೇಂದ್ರ ಉಗಾರೆ ಆರೋಪ ಮಾಡಿದ್ದಾರೆ. 2017-18 ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ಈ ಅಕ್ರಮ ಬಯಲಾಗಿದೆ.

ಬೆಳಗಾವಿಯ ವಕೀಲ ಸುರೇಂದ್ರ ಉಗಾರೆ ಆರ್‌ಟಿಐ ಅಡಿ ಸಲ್ಲಿಸಿದ್ದ ಅರ್ಜಿಯಲ್ಲಿ ಮಾಹಿತಿ ಬಹಿರಂಗಗೊಂಡಿದೆ. ವಿಟಿಯು ಖಾತೆಯಲ್ಲಿನ ಹಣ ಡ್ರಾ ಮಾಡಿಕೊಂಡು ಮತ್ತೆ ಅದೇ ಅಕೌಂಟ್​ಗೆ ಜಮೆ ಮಾಡಲಾಗಿದೆ. ನಿಗದಿತ ಉದ್ದೇಶವಿಲ್ಲದೇ ಹಣ ಡ್ರಾ ಮಾಡಿ ಮತ್ತೆ ಜಮೆ ಮಾಡಲಾಗಿದೆ. ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೇ ಮೌಲ್ಯಮಾಪನ ಕುಲಸಚಿವರಿಗೆ ₹109.60 ಕೋಟಿ ರೂಪಾಯಿ ಮುಂಗಡ ಹಣ ಪಾವತಿ ಮಾಡಲಾಗಿದೆ.

ನಿಯಮ ಬಾಹಿರವಾಗಿ ಗುತ್ತಿಗೆ ಸಿಬ್ಬಂದಿ ನೇಮಕ ಮಾಡಿ 28,44,517 ರೂಪಾಯಿ ಸಂದಾಯ ಮಾಡಲಾಗಿದೆ. 2017-18ನೇ ಸಾಲಿನ ಮೌಲ್ಯಮಾಪನ ಮುಂಗಡ ಲೆಡ್ಜರ್ ಪರಿಶೀಲಿಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ತಾತ್ಕಾಲಿಕ ಹಣದ ದುರುಪಯೋಗ ಪ್ರಕರಣ ಎಂದು ಪರಿಗಣಿಸಿದ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೆ ಮೌಲ್ಯಮಾಪನ ಕುಲಸಚಿವರ ಹೆಸರಿನಲ್ಲಿ ಯಾವುದೇ ಬ್ಯಾಂಕ್ ಖಾತೆ ಇಲ್ಲ. ಬ್ಯಾಂಕ್ ಖಾತೆ ಇಲ್ಲದಿದ್ರೂ ಕೋಟ್ಯಾಂತರ ರೂ. ವಹಿವಾಟು ನಡೆದಿದೆ. ಅಕ್ರಮದ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲು ನಿರ್ಧಾರ ಮಾಡಲಾಗಿದೆ ಎಂದು ಟಿವಿ9ಗೆ ಆರ್‌ಟಿಐ ಕಾರ್ಯಕರ್ತ ಸುರೇಂದ್ರ ಉಗಾರೆ ತಿಳಿಸಿದ್ದಾರೆ.

Source:TV9Kannada