Virat Kohli: ಬಿಸಿಸಿಐಯಿಂದ ಸದ್ಯದಲ್ಲೇ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಅತಿ ದೊಡ್ಡ ಘೋಷಣೆ: ಏನದು ಗೊತ್ತೇ?

Sep 13, 2021

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸದ್ಯದದಲ್ಲೇ ಅತಿ ದೊಡ್ಡ ಪ್ರಕಟಣೆ ಹೊರಡಿಸಲಿದೆ. ಅದುವೇ ಕೊಹ್ಲಿ ನಾಯಕತ್ವದ (Virat Kohli Captaincy) ಬಗ್ಗೆ. ಹೌದು, ವಿರಾಟ್ ಕೊಹ್ಲಿ ಸದ್ಯದಲ್ಲೇ ಟೀಮ್ ಇಂಡಿಯಾದ ಏಕದಿನ ಮತ್ತು ಟಿ-20 ಕ್ರಿಕೆಟ್​ನ ನಾಯಕತ್ವ ತ್ಯಜಿಸುವುದು ಖಚಿತವಾಗಿದೆ. ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ (ICC T20 World Cup) ಮುಗಿದ ಬೆನ್ನಲೇ ಕೊಹ್ಲಿ ವೈಟ್ ಬಾಲ್ ಕ್ರಿಕೆಟ್ ನಾಯಕತ್ವದಿಂದ ಕೆರಳಗಿಳಿಯಲಿದ್ದಾರಂತೆ. ನೂತನ ನಾಯಕನಾಗಿ ಏಕದಿನ ಮತ್ತು ಟಿ-20 ಕ್ರಿಕೆಟ್​ಗೆ ರೋಹಿತ್ ಶರ್ಮಾ (Rohit Sharma) ಅವರನ್ನು ಬಿಸಿಸಿಐ ಆಯ್ಕೆ ಮಾಡಲಿದೆ. ವಿರಾಟ್ ಕೊಹ್ಲಿ ಅವರ ನಾಯಕತ್ವದ ಕುರಿತು ಬಿಸಿಸಿಐ ಈಗಾಗಲೇ ವಿಶೇಷ ಸಭೆ ನಡೆಸಿ ತೀರ್ಮಾನ ಮಾಡಿಕೊಂಡಿದೆ. ಕಳೆದ ಜುಲೈನಲ್ಲಿ ಬಿಸಿಸಿಐ ಅಧಿಕಾರಿಗಳು ವಿಶೇಷ ಸಭೆ ನಡೆಸಿದ್ದಾರೆ. ಇದರಲ್ಲಿ ಸೀಮಿತ ಓವರ್ ಕ್ರಿಕೆಟ್​ಗೆ ಮತ್ತು ಟೆಸ್ಟ್ ಕ್ರಿಕೆಟ್​ಗೆ ಬೇರೆ ಬೇರೆ ನಾಯಕರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆಯಂತೆ.

ವಿರಾಟ್ ಕೊಹ್ಲಿ ಸದ್ಯ ಭಾರತ ತಂಡವನ್ನು ಮೂರೂ ಮಾದರಿಯಲ್ಲಿ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಸದ್ಯ ಕೊಹ್ಲಿ ತನ್ನ ನಾಯಕತ್ವದ ಜವಾಬ್ದಾರಿಯನ್ನು ಹಂಚಿಕೊಳ್ಳುವ ಸಂದರ್ಭ ಬಂದಿದೆ ಎಂದು ಬಿಸಿಸಿಐ ಮೂಲಗಳು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿವೆ.

ಇದಕ್ಕೆ ಕಾರಣ ಏನು ಎಂಬೂದು ಕೂಡ ಬಹಿರಂಗವಾಗಿದೆ. ಕಳೆದ ಕೆಲವು ವರ್ಷಗಳಿಂದ ಕೊಹ್ಲಿ ಬ್ಯಾಟ್ ಸದ್ದು ಮಾಡುತ್ತಿಲ್ಲ. ಇವರು ಸೆಂಚುರಿ ಬಾರಿಸಿ ಎರಡು ವರ್ಷಗಳಾಗುತ್ತಿವೆ. ಹೀಗಾಗಿ ಕೊಹ್ಲಿ ತನ್ನ ಬ್ಯಾಟಿಂಗ್ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯಂತೆ. ಮೂರು ಮಾದರಿಯಲ್ಲಿ ನಾಯಕನ ಜವಾಬ್ದಾರಿ ಹೊತ್ತು ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ಕೂಡ ನೀಡುವುದು ಸುಲಭದ ಕೆಲಸವಲ್ಲ. ಇದರ ಬಗ್ಗೆ ವಿರಾಟ್ ಕೊಹ್ಲಿ ಈಗಾಗಲೇ ಬಿಸಿಸಿಐ ಮಾಹಿತಿ ನಿಡಿದ್ದಾರಂತೆ.

ವಿರಾಟ್ ಕೊಹ್ಲಿಯ ನಾಯಕತ್ವದ ದಾಖಲೆ ನೋಡುವುದಾದರೆ, ಟೆಸ್ಟ್​ನಲ್ಲಿ ನಾಯಕನಾಗಿ ಮುನ್ನಡೆಸಿದ ಒಟ್ಟು 65 ಪಂದ್ಯಗಳಲ್ಲಿ 38 ರಲ್ಲಿ ಜಯ ಸಾಧಿಸಿದ್ದಾರೆ. ಏಕದಿನದಲ್ಲಿ 95 ಪಂದ್ಯಗಳಲ್ಲಿ ಪೈಕಿ 65 ಮತ್ತು ಟಿ-20 ಯಲ್ಲಿ 45 ಪಂದ್ಯಗಳ ಪೈಕಿ 29 ಪಂದ್ಯಗಳಲ್ಲಿ ಭಾರತ ಇವರ ನಾಯಕತ್ವದಡಿಯಲ್ಲಿ ಗೆದ್ದಿದೆ.

ಆದರೆ, 2013ರ ಬಳಿಕ ಟೀಮ್ ಇಂಡಿಯಾ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. 2014 ರಿಂದ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವ ಕೊಹ್ಲಿ ನಾಯಕತ್ವದಲ್ಲಿ ಐಸಿಸಿ ಪ್ರಶಸ್ತಿ ಭಾರತಕ್ಕೆ ಮರೀಚಿಕೆಯಾಗಿದೆ. ನಾಯಕನಾಗಿ ಕೊಹ್ಲಿ ಐಸಿಸಿ ಟೂರ್ನಿಗಳಾದ ಟಿ-20 ವಿಶ್ವಕಪ್​, ಏಕದಿನ ವಿಶ್ವಕಪ್​, ಚಾಂಪಿಯನ್​​ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಸೇರಿ 4 ಟೂರ್ನಿಗಳಲ್ಲಿ ಕೊನೆ ಹಂತದಲ್ಲಿ ಎಡವಿದ್ದಾರೆ.

2017 ರಲ್ಲಿ ಚಾಂಪಿಯನ್​ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿದರೂ ಪಾಕಿಸ್ತಾನ ವಿರುದ್ದ ಸೋಲುವ ಮೂಲಕ ಚೊಚ್ಚಲ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈತಪ್ಪಿಸಿಕೊಂಡಿದ್ದರು. 2019ರ ವಿಶ್ವಕಪ್​​ನಲ್ಲಿ ಸೆಮಿಫೈನಲ್​ನಲ್ಲಿ ಎಡವಿದ ಟೀಮ್ ಇಂಡಿಯಾ ಟ್ರೋಫಿಗೆ ಮುತ್ತಿಕ್ಕುವ ಅವಕಾಶವನ್ನು ಕಳೆದುಕೊಂಡಿತು. ಅಲ್ಲದೆ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲೂ​ ನ್ಯೂಜಿಲೆಂಡ್ ವಿರುದ್ದ ಸೋಲುವ ಮೂಲಕ ಕೊಹ್ಲಿ ನಿರಾಸೆ ಅನುಭವಿಸಿದರು.

 

Source:tv9kannada