Vijay Prakash: ‘ಉಡುಪಿ ಹೋಟೆಲು, ಮೂಲೆ ಟೇಬಲು’ ಎನ್ನುತ್ತಾ ಧನಂಜಯ್ ಬರೆದ ಹಾಡಿಗೆ ದನಿಯಾಗಿದ್ದಾರೆ ವಿಜಯ್ ಪ್ರಕಾಶ್
ಚಂದನವನದ ಭರವಸೆಯ ನಟ, ತಮ್ಮ ಅಭಿನಯದಿಂದ ಈಗ ಪರಭಾಷೆಗಳಿಗೂ ಪರಿಚಯವಾಗುತ್ತಿರುವ ಡಾಲಿ ಧನಂಜಯ್ ಅವರ ಬಹು ನಿರೀಕ್ಷಿತ ‘ಬಡವ ರಾಸ್ಕಲ್’ ಚಿತ್ರದ ‘ಉಡುಪಿ ಹೋಟೆಲು’ ಹಾಡು ಬಿಡುಗಡೆಯಾಗಿದೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್, ಧನಂಜಯ್ ಬರೆದ ಸಾಹಿತ್ಯಕ್ಕೆ ದನಿಯಾಗಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಹಾಡು ತನ್ನ ಲವಲವಿಕೆಯ ಸಾಹಿತ್ಯದಿಂದ ಗಮನ ಸೆಳೆಯುತ್ತಿದೆ. ಪ್ರೇಯಸಿಗೆ ಪ್ರಿಯತಮನೊಬ್ಬ ಸಲ್ಲಿಸುವ ಕೋರಿಕೆಗಳ ರೂಪದಲ್ಲಿ ಹಾಡನ್ನು ರಚಿಸಲಾಗಿದ್ದು, ನಟ ಧನಂಜಯ್ ಹಾಗೂ ನಾಯಕಿ ಅಮೃತಾ ಅಯ್ಯಂಗಾರ್ ಅವರ ನಟನೆ ಮುದ ನೀಡುವಂತಿದೆ.
‘ಬಡವ ರಾಸ್ಕಲ್’ ಚಿತ್ರವನ್ನು ಶಂಕರ್ ಗುರು ನಿರ್ದೇಶನ ಮಾಡಿದ್ದು, ‘ಡಾಲಿ ಪಿಕ್ಚರ್ಸ್’ ಬ್ಯಾನರ್ನಲ್ಲಿ ಚಿತ್ರ ತಯಾರಾಗುತ್ತಿದೆ. ಇತ್ತೀಚೆಗೆ ಘೋಷಣೆಯಾದ ಪವನ್ ಕುಮಾರ್ ನಿರ್ದೇಶನ ಹಾಗೂ ಪುನೀತ್ ರಾಜ್ಕುಮಾರ್ ಅಭಿನಯದ ‘ದ್ವಿತ್ವ’ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿರುವ ಪ್ರೀತಾ ಜಯರಾಮನ್ ಬಡವ ರಾಸ್ಕಲ್ ಚಿತ್ರಕ್ಕೆ ಕ್ಯಾಮೆರಾದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದಲ್ಲಿ ಧನಂಜಯ್, ಅಮೃತಾ ಅವರೊಂದಿಗೆ ನಾಗಭೂಷಣ್, ರಂಗಾಯಣ ರಘು, ಪೂರ್ಣಚಂದ್ರ ಮೈಸೂರು ಮೊದಲಾದವರು ಅಭಿನಯಿಸುತ್ತಿದ್ದಾರೆ.
ಚಂದನವನದ ಭರವಸೆಯ ನಟ ಡಾಲಿ ಧನಂಜಯ್ ಕೈಯಲ್ಲಿ ಹಲವಾರು ಚಿತ್ರಗಳಿವೆ. ‘ಪುಷ್ಪಾ’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಾದರಿಯ ಸಿನಿಮಾಕ್ಕೂ ಅವರು ಕಾಲಿಡಲಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯಾದ ‘ಡಾಲಿ ಪಿಕ್ಚರ್ಸ್’ ಸಂಸ್ಥೆಯ ಮೂಲಕ ಚಿತ್ರ ನಿರ್ಮಾಣಕ್ಕೂ ಅವರು ಧುಮುಕಿದ್ದಾರೆ. ಬಡವ ರಾಸ್ಕಲ್ ಚಿತ್ರದ ಜೊತೆಗೆ ‘ಹೆಡ್ ಬುಷ್’ ಚಿತ್ರಕ್ಕೆ ಧನಂಜಯ್ ಸಹ ನಿರ್ಮಾಪಕರಾಗಿದ್ದಾರೆ. ನಟ ಧನಂಜಯ್ ಈಗ ಸಾಲು ಸಾಲು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ- 1’ರ ಜೊತೆಗೆ, ‘ಸಲಗ’, ‘ಬೈರಾಗಿ’, ‘ತೋತಾಪುರಿ’, ‘ಆರ್ಕೆಸ್ಟ್ರಾ’, ‘ರತ್ನನ್ ಪ್ರಪಂಚ ’ ಮೊದಲಾದ ಚಿತ್ರಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
Source: tv9 kannada