Vijay Hazare Trophy 2021: ದೇಸಿ ಕ್ರಿಕೆಟ್ ವಿಜಯ್ ಹಜಾರೆ ಟ್ರೋಫಿ 2021 ಆರಂಭ.. ಪಂದ್ಯಾವಳಿಯ ವಿವರ ಇಲ್ಲಿದೆ
Vijay Hazare Trophy 2021: ಫೆಬ್ರವರಿ 20ರಿಂದ ಮಾರ್ಚ್ 14ರ ತನಕ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ 2021ರ ಆರಂಭಿಕ ಪಂದ್ಯಗಳ ನೇರಪ್ರಸಾರ ಟಿವಿ ವಾಹಿನಿಯಲ್ಲಿ ಲಭ್ಯವಿಲ್ಲ. ಆದರೆ, ಎರಡನೇ ಸುತ್ತಿನ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಸಮೂಹದ ವಾಹಿನಿಗಳು ಪ್ರಸಾರ ಮಾಡಲಿವೆ.
ಭಾರತದ ದೇಸಿ ಕ್ರಿಕೆಟ್ ಪಂದ್ಯಾವಳಿ ವಿಜಯ್ ಟ್ರೋಫಿ 2021 ಇಂದು (ಫೆಬ್ರವರಿ 20) ಆರಂಭವಾಗುತ್ತಿದೆ. ಮಾರ್ಚ್ 14ರ ತನಕ ನಡೆಯಲಿರುವ 50 ಓವರ್ಗಳ103 ಪಂದ್ಯಗಳಲ್ಲಿ ಈ ಬಾರಿ ಒಟ್ಟು 38 ತಂಡಗಳು ಭಾಗವಹಿಸುತ್ತಿದ್ದು ಪ್ರತಿಷ್ಠಿತ ಚಾಂಪಿಯನ್ ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ. ಕೊರೊನಾ ಕಾರಣದಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (BCCI) ರಣಜಿ ಟ್ರೋಫಿಯನ್ನು ಮೊದಲ ಬಾರಿಗೆ ಆಯೋಜಿಸಿಲ್ಲ. ಜೊತೆಗೆ, ಕಳೆದ ತಿಂಗಳೇ ನಡೆಸಬೇಕಾಗಿದ್ದ ವಿಜಯ್ ಟ್ರೋಫಿ ಪಂದ್ಯಾವಳಿಯನ್ನೂ ಈಗ ಏರ್ಪಡಿಸಿದೆ. ಈ ಪಂದ್ಯಾವಳಿಯು ಸೂರತ್, ಇಂದೋರ್, ಬೆಂಗಳೂರು, ಜೈಪುರ, ಕೋಲ್ಕತ್ತಾ ಹಾಗೂ ಚೆನ್ನೈ ಸೇರಿದಂತೆ 6 ಕಡೆಗಳಲ್ಲಿ ನಡೆಯಲಿದ್ದು, ಮೊದಲ ದಿನವೇ 18 ತಂಡಗಳು 9 ಪಂದ್ಯಗಳಿಗೆ ಸಾಕ್ಷಿಯಾಗಲಿವೆ.
ಕಳೆದ ಬಾರಿ ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಫೈನಲ್ನಲ್ಲಿ 60 ರನ್ಗಳಿಂದ ತಮಿಳುನಾಡು ತಂಡವನ್ನು ಮಣಿಸಿತ್ತು. ಈ ಬಾರಿಯೂ ಕರ್ನಾಟಕ ತಂಡ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ತವಕದಲ್ಲಿದ್ದು, ಯಾವ ರೀತಿ ಪ್ರದರ್ಶನ ನೀಡಲಿದೆ ಎಂದು ನೋಡಲು ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಬಾರಿಯ ಎಲ್ಲಾ ಪಂದ್ಯಗಳೂ ಮುಂಜಾನೆ 9 ಗಂಟೆಗೆ ಆರಂಭವಾಗಲಿದ್ದು ನಿಗದಿತ ಮೈದಾನಗಳಲ್ಲಿ ನಡೆಯಲಿವೆ.
ವಿಜಯ್ ಟ್ರೋಫಿ 2021ನ್ನು ಎಲ್ಲಿ ನೋಡಬಹುದು?
ಫೆಬ್ರವರಿ 20ರಿಂದ ಮಾರ್ಚ್ 14ರ ತನಕ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ 2021ರ ಆರಂಭಿಕ ಪಂದ್ಯಗಳ ನೇರಪ್ರಸಾರ ಟಿವಿ ವಾಹಿನಿಯಲ್ಲಿ ಲಭ್ಯವಿಲ್ಲ. ಆದರೆ, ಎರಡನೇ ಸುತ್ತಿನ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಸಮೂಹದ ವಾಹಿನಿಗಳು ಪ್ರಸಾರ ಮಾಡಲಿವೆ. ಜೊತೆಗೆ ಸ್ಟಾರ್ ನೆಟ್ವರ್ಕ್ನ ಡಿಜಿಟಲ್ ವೇದಿಕೆಯಲ್ಲೂ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಜೊತೆಗೆ, BCCI ನ ಅಧಿಕೃತ ಜಾಲತಾಣದಲ್ಲಿ ವೇಳಾಪಟ್ಟಿಯನ್ನು ಪಡೆಯಬಹುದಾಗಿದೆ.
ವಿಜಯ್ ಹಜಾರೆ ಟ್ರೋಫಿ 2021ರ ಗುಂಪುಗಳು ಮತ್ತು ಪಂದ್ಯ ನಡೆಯುವ ಸ್ಥಳ
ಎ ಗುಂಪು: ಬರೋಡಾ, ತ್ರಿಪುರಾ, ಛತ್ತೀಸ್ಗಡ, ಗುಜರಾತ್, ಗೋವಾ, ಹೈದರಾಬಾದ್
ಪಂದ್ಯ ನಡೆಯುವ ಸ್ಥಳ: ಸೂರತ್
ಬಿ ಗುಂಪು: ಆಂಧ್ರ, ವಿದರ್ಭ, ಜಾರ್ಖಂಡ್, ಮಧ್ಯಪ್ರದೇಶ, ಪಂಜಾಬ್, ತಮಿಳುನಾಡು
ಪಂದ್ಯ ನಡೆಯುವ ಸ್ಥಳ: ಇಂದೋರ್
ಸಿ ಗುಂಪು: ಬಿಹಾರ, ಕರ್ನಾಟಕ, ಕೇರಳ, ಒಡಿಶಾ, ರೈಲ್ವೇಸ್, ಉತ್ತರ ಪ್ರದೇಶ
ಪಂದ್ಯ ನಡೆಯುವ ಸ್ಥಳ: ಬೆಂಗಳೂರು
ಡಿ ಗುಂಪು: ಪುದುಚೇರಿ, ರಾಜಸ್ಥಾನ, ದೆಹಲಿ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಮುಂಬೈ
ಪಂದ್ಯ ನಡೆಯುವ ಸ್ಥಳ: ಜೈಪುರ
ಇ ಗುಂಪು: ಚಂಡೀಗಡ, ಸರ್ವಿಸ್, ಬಂಗಾಳ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಸೌರಾಷ್ಟ್ರ
ಪಂದ್ಯ ನಡೆಯುವ ಸ್ಥಳ: ಕೋಲ್ಕತ್ತಾ
ಪ್ಲೇಟ್ ಗ್ರೂಪ್: ಮಿಜೋರಾಂ, ಸಿಕ್ಕಿಂ, ಉತ್ತರಾಖಂಡ, ಮೇಘಾಲಯ, ಅರುಣಾಚಲ ಪ್ರದೇಶ, ಮಣಿಪುರ, ಅಸ್ಸಾಂ, ನಾಗಾಲ್ಯಾಂಡ್
ಪಂದ್ಯ ನಡೆಯುವ ಸ್ಥಳ: ಚೆನ್ನೈ
Source: TV9Kannada