US Open 2021: ದಾಖಲೆಯ 31ನೇ ಬಾರಿ ಗ್ರ್ಯಾನ್ ಸ್ಲಾಮ್ ಫೈನಲ್​ಗೆ ಜೋಕೊವಿಚ್: ಇತಿಹಾಸ ನಿರ್ಮಿಸುವ ಅವಕಾಶ

Sep 11, 2021

ಸರ್ಬಿಯಾ ದೇಶದ ಶ್ರೇಷ್ಠ ಟೆನಿಸ್ ಆಟಗಾರ ನೊವಾಕ್ ಜೋಕೊವಿಚ್ (Novak Djokovic) ಅವರು ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ (US Open 2021) ಟೂರ್ನಿಯ ಫೈನಲ್ ತಲುಪಿದ್ದಾರೆ. ಭಾರತೀಯ ಕಾಲಮಾನದಲ್ಲಿ ಇಂದು ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್​ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜವೆರೆವ್ ವಿರುದ್ಧ ವಿಶ್ವದ ಅಗ್ರಮಾನ್ಯ ಆಟಗಾರ ಜೋಕೊವಿಚ್ 4-6, 6-2, 6-4, 4-6, 6-2 ರೋಚಕ ಗೆಲುವು ಪಡೆದರು.

ಈ ಮೂಲಕ ಜೊಕೋವಿಚ್ ಅವರು ದಾಖಲೆಯ 31 ಬಾರಿ ಗ್ರ್ಯಾನ್ ಸ್ಲಾಮ್ ಪ್ರವೇಶಿಸಿದ್ದ ರೋಜರ್ ಫೆಡರರ್ ದಾಖಲೆ ಸರಿಗಟ್ಟಿದ್ದಾರೆ. 5 ಸೆಟ್ ಗಳ ಹೋರಾಟದಲ್ಲಿ ಗೆಲುವು ಪಡೆಯುವ ಮೂಲಕ ಫೆಡರರ್ ಈ ವರ್ಷ ಆಡಿದ 27 ಪಂದ್ಯಗಳಲ್ಲಿ ಸೋಲರಿಯದ ಆಟಗಾರನಾಗಿ ದಾಖಲೆ ಬರೆದರು.

34 ವರ್ಷದ ನೊವಾಕ್ ಜೋಕೊವಿಚ್ ಅವರು ಫೈನಲ್ ಪಂದ್ಯ ಗೆದ್ದೇ ಗೆಲ್ಲುವ ಸಂಕಲ್ಪ ತೊಟ್ಟಿದ್ದಾರೆ. ಅದು ತನ್ನ ವೃತ್ತಿ ಜೀವನದ ಕೊನೆಯ ಪಂದ್ಯವೆಂಬಂತೆ ಆಡಿ ಗೆಲ್ಲುತ್ತೇನೆ ಎಂದು ಅವರು ಹೇಳಿದ್ಧಾರೆ. ಹೀಗಾಗಿ, ಜೋಕೊವಿಚ್ ಅವರಿಂದ ಬೆಸ್ಟ್ ಟೆನಿಸ್ ಆಟವನ್ನು ನಿರೀಕ್ಷಿಸಬಹುದು.

ವಿಶ್ವದ ನಂಬರ್ ಒನ್ ಆಟಗಾರನೂ ಆಗಿರುವ ಜೋಕೊವಿಚ್ ಅವರು ಇದೂವರೆಗೆ 20 ಗ್ರ್ಯಾನ್​ಸ್ಲಾಮ್ ಟೂರ್ನಿಗಳನ್ನ ಗೆದ್ದಿದ್ದಾರೆ. ಸಮಕಾಲೀನ ದಿಗ್ಗಜರಾದ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಅವರಿಬ್ಬರೂ ಕೂಡ 20 ಗ್ರ್ಯಾನ್ ಸ್ಲಾಂ ಗೆದ್ದ ಸಾಧನೆ ಮಾಡಿದ್ದಾರೆ. ಈಗ ಜೋಕೊವಿಚ್ ಅವರು ಯುಎಸ್ ಓಪನ್ ಗೆದ್ದರೆ ಅತಿ ಹೆಚ್ಚು ಗ್ರ್ಯಾನ್ ಸ್ಲಾಂ ಜಯಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ಧಾರೆ.

ಜೋಕೊವಿಚ್ ಅವರಿಗೆ ಒಲಿಂಪಿಕ್ಸ್ ಟೆನಿಸ್​ನಲ್ಲಿ ಚಿನ್ನ ಗೆಲ್ಲಲು ಸಾಧ್ಯವಾಗಿದ್ದಿದ್ದರೆ ಅಪರೂಪದ ವಿಶ್ವದಾಖಲೆ ಸ್ಥಾಪಿಸುವ ಅವಕಾಶ ಇತ್ತು. ಈಗ ಐದು ದಶಕಗಳ ಹಿಂದಿನ ದಾಖಲೆಯನ್ನ ಸರಿಗಟ್ಟುವ ಚಾನ್ಸ್ ಇದೆ. ಇದಕ್ಕೆ ಅವರು ನಾಳೆ ಭಾನುವಾರ ನಡೆಯಲಿರುವ ಯು ಎಸ್ ಓಪನ್ ಫೈನಲ್​ನಲ್ಲಿ ರಷ್ಯಾದ ಡೇನಿಲ್ ಮೆಡ್ವೆಡೆವ್ ಅವರನ್ನ ಸೋಲುಣಿಸಬೇಕಿದೆ.

Source:tv9kannada