Video: 1000 ಕೆಜಿ ತೂಕದ ಖಾದಿ ತ್ರಿವರ್ಣಧ್ವಜ ಲೇಹ್​​ನಲ್ಲಿ ಅನಾವರಣ; ವಿಶ್ವದಲ್ಲೇ ಅತ್ಯಂತ ದೊಡ್ಡ ರಾಷ್ಟ್ರಧ್ವಜವಿದು

Oct 2, 2021

ಇಂದು ದೇಶಾದ್ಯಂತ ಮಹಾತ್ಮ ಗಾಂಧಿ (Mahatma Gandhi) 152ನೇ ಜನ್ಮದಿನ ಆಚರಣೆ ಮಾಡಲಾಗುತ್ತಿದ್ದು, ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್​, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಕೇಂದ್ರ ಸಚಿವರಾದಿಯಾಗಿ ಅನೇಕರು ಗಾಂಧಿಗೆ ನಮನ ಸಲ್ಲಿಸಿದ್ದಾರೆ. ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಾಗೇ, ಇಂದು ಕೇಂದ್ರಾಡಳಿತ ಪ್ರದೇಶ ಲಡಾಖ್​​ನ ಲೇಹ್ (Leh Of Ladakh)​​ನಲ್ಲಿ ಗಾಂಧಿ ಜಯಂತಿ ನಿಮಿತ್ತ, ಅತ್ಯಂತ ದೊಡ್ಡದಾದ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಲೇಹ್​ನ ಝಾನ್ಸ್​​ಕರ್​ ಕಣಿವೆಯಲ್ಲಿ ಹಾರಿಸಾಲದ ಈ ಖಾದಿ ರಾಷ್ಟ್ರಧ್ವಜ 225 ಅಡಿ ಉದ್ದವಿದ್ದು, 125 ಅಡಿ ಅಗಲವಿದೆ. ಹಾಗೇ, 1000 ಕೆಜಿಗಳಷ್ಟು ತೂಗುತ್ತದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ರಾಷ್ಟ್ರಧ್ವಜ ಎನ್ನಿಸಿದ್ದು, ಮುಂಬೈನ ಮುದ್ರಣಕಂಪನಿಯೊಂದರ ಸಹಯೋಗದೊಂದಿಗೆ ಧ್ವಜ ತಯಾರಾಗಿದೆ.

ಈ ರಾಷ್ಟ್ರಧ್ವಜವನ್ನು ಲಡಾಖ್​​ನ ಲೆಫ್ಟಿನೆಂಟ್​ ಗವರ್ನರ್​ ಆರ್​.ಕೆ.ಮಾಥುರ್​ ಅನಾವರಣಗೊಳಿಸಿದ್ದಾರೆ. ಹಾಗೇ, ಸೇನಾ ಮುಖ್ಯಸ್ಥ ಎಂ.ಎಂ.ನರವಾನೆ ಕೂಡ ಉಪಸ್ಥಿತರಿದ್ದರು. ಇಂದು ಇಲ್ಲಿ ಹಾರಿಸಲಾದ ಅತ್ಯಂತ ದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಅಕ್ಟೋಬರ್​ 8ರಂದು ಏರ್​ಫೋರ್ಸ್​ ದಿನಾಚರಣೆ ನಿಮಿತ್ತ ಹಿಂಡನ್​ನಲ್ಲಿ ಹಾರಿಸಲಾಗುವುದು. ಅಂದಹಾಗೆ ಈ ಝಾನ್ಸ್​ಕರ್​ ವ್ಯಾಲಿ ಲಡಾಖ್​ನ ಕಾರ್ಗಿಲ್​ ಜಿಲ್ಲೆಯಲ್ಲಿದೆ. ಕಾರ್ಗಿಲ್​​ನ ರಾಷ್ಟ್ರೀಯ ಹೆದ್ದಾರಿಯಿಂದ 250 ಕಿಮೀ ದೂರದಲ್ಲಿದೆ.

ಭೌಗೋಳಿಕವಾಗಿ ಈ ಝಾನ್ಸ್​ಕರ್​ ಶ್ರೇಣಿ ಟೆಥಿಸ್​ ಹಿಮಾಲಯ ಶ್ರೇಣಿಗಳ ಭಾಗವಾಗಿದೆ. ಇದು ಸರಾಸರಿ 6000 ಮೀಟರ್​ (19,700 ಅಡಿ) ಎತ್ತರವಾಗಿದೆ. ಝಾನ್ಸ್​ಕರ್​ ಶ್ರೇಣಿಯ ಪೂರ್ವಭಾಗವನ್ನು ರೂಪ್ಶು ಎಂದು ಕರೆಯಲಾಗುತ್ತದೆ. ಈ ಝಾನ್ಸ್​ಕರ್​ ಪ್ರದೆಶವನ್ನು ಜಿಲ್ಲೆಯಾಗಿ ಪರಿವರ್ತಿಸಬೇಕು ಎಂಬ ಆಗ್ರಹವೂ ಬಹುದಿನಗಳಿಂದ ಇದೆ. ಝಾನ್ಸ್​ಕರ್ ಕಣಿವೆಯಂತೂ ಹಿಮಾಚ್ಛಾದಿತವಾಗಿದ್ದು, ಶುದ್ಧ ನದಿಗಳ ಹರಿವನ್ನು ಹೊಂದಿದೆ. ಬೌದ್ಧಧರ್ಮದ ಕೇಂದ್ರವೂ ಹೌದು.

 

Source:tv9kannada