Tokyo Olympics: ‘ಭಾರತಕ್ಕೆ ತನ್ನ ಆಟಗಾರರ ಕುರಿತು ಹೆಮ್ಮೆಯಿದೆ’ ಎಂದು ಹಾಕಿ ತಂಡದ ಬೆಂಬಲಕ್ಕೆ ನಿಂತ ಪ್ರಧಾನಿ ಮೋದಿ
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸರಣಿ ಟ್ವೀಟ್ಗಳ ಮೂಲಕ ಭಾರತ ಪುರುಷರ ಹಾಕಿ ತಂಡದ ಶ್ರಮವನ್ನು ಶ್ಲಾಘಿಸಿದ್ದಾರೆ. ಸೆಮಿಫೈನಲ್ನಲ್ಲಿ ಬೆಲ್ಜಿಯಂ ವಿರುದ್ಧ ಸೋತರೂ ಸಹ, ಕಂಚಿನ ಪದಕವನ್ನು ಭಾರತ ಜಯಿಸಿಲಿ ಎಂದು ಅವರು ಶುಭಹಾರೈಸಿದ್ದಾರೆ.
ಟೊಕಿಯೊ ಒಲಂಪಿಕ್ಸ್: ಇಂದು (ಆಗಸ್ಟ್ 3ರ ಮಂಗಳವಾರ) ನಡೆದ ಟೊಕಿಯೊ ಒಲಂಪಿಕ್ಸ್ನ ಪುರುಷರ ಹಾಕಿ ಸೆಮಿಫೈನಲ್ನಲ್ಲಿ ಭಾರತ ತಂಡವು ಬೆಲ್ಜಿಯಂ ತಂಡಕ್ಕೆ ಶರಣಾಯಿತು. ಇದರಿಂದಾಗಿ 41 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿ ಚಿನ್ನ ಗೆಲ್ಲುವ ಭಾರತದ ಬಯಕೆ ಸಾಕಾರವಾಗಲಿಲ್ಲ. ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ ಪಂದ್ಯ ಸೋತ ಭಾರತ ತಂಡದ ಬೆಂಬಲಕ್ಕೆ ನಿಂತಿದ್ದು, ಮುಂದೆ ನಡೆಯುವ ಪಂದ್ಯದಲ್ಲಿ ಕಂಚಿನ ಪದಕ ಗೆಲ್ಲುವಂತೆ ಹಾರೈಸಿದ್ದಾರೆ.
ಸರಣಿ ಟ್ವೀಟ್ಗಳ ಮೂಲಕ ಆಟಗಾರರಿಗೆ ಸಮಾಧಾನದ ಮಾತುಗಳನ್ನು ಹೇಳಿರುವ ನರೇಂದ್ರ ಮೋದಿ, ‘ಸೋಲು ಗೆಲುವುಗಳು ಆಟದ ಒಂದು ಭಾಗ. ಒಲಂಪಿಕ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡುವುದು ಮುಖ್ಯ. ಭಾರತ ಹಾಕಿ ತಂಡವು ಟೊಕಿಯೊ ಒಲಂಪಿಕ್ಸ್ನಲ್ಲಿ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ’ ಎಂದು ಅವರು ಹೇಳಿದ್ದಾರೆ. ಜೊತೆಗೆ ಭಾರತ ತಂಡದ ಮುಂದಿನ ಪಂದ್ಯಕ್ಕೂ ಶುಭ ಹಾರೈಸಿ, ‘ತಂಡದ ಮುಂದಿನ ಪಂದ್ಯಕ್ಕೆ ಶುಭ ಹಾರೈಕೆಗಳು. ದೇಶಕ್ಕೆ ತನ್ನ ಆಟಗಾರರ ಕುರಿತು ಬಹಳ ಹೆಮ್ಮೆಯಿದೆ’ ಎಂದಿದ್ದಾರೆ.
Source: Tv9 kannada