Stuart Broad: ಯುವರಾಜ್ ಸಿಂಗ್ ಬಾರಿಸಿದ 6 ಸಿಕ್ಸ್ಗಳಿಂದ ನಾನು ಇಂದು ಇಲ್ಲಿದ್ದೇನೆ: ಸ್ಟುವರ್ಟ್ ಬ್ರಾಡ್
Stuart Broad: ಆ ಸಿಕ್ಸ್ಗಳ ಬಳಿಕ ಸ್ಟುವರ್ಟ್ ಬ್ರಾಡ್ ತಮ್ಮ ಕೆರಿಯರ್ನಲ್ಲಿ 800 ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವ ಕೇವಲ 8 ಬೌಲರ್ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ ಎಂಬುದು ವಿಶೇಷ.
ಸೆಪ್ಟೆಂಬರ್ 19, 2007…ಟಿ20 ವಿಶ್ವಕಪ್ನ 21ನೇ..ಇಂಗ್ಲೆಂಡ್ ಹಾಗೂ ಭಾರತ ಮುಖಾಮುಖಿ. ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 16 ಓವರ್ಗಳಲ್ಲಿ 150 ಕ್ಕೂ ಹೆಚ್ಚಿನ ರನ್ ಕಲೆಹಾಕಿತ್ತು. ಕೊನೆಯ 4 ಓವರ್ಗಳ ವೇಳೆ ಕ್ರೀಸ್ನಲ್ಲಿದದ್ದು ಯುವರಾಜ್ ಸಿಂಗ್ ಹಾಗೂ ಎಂಎಸ್ ಧೋನಿ. 18ನೇ ಓವರ್ ಮುಕ್ತಾಯದ ವೇಳೆ ಯುವರಾಜ್ ಸಿಂಗ್ ಅವರನ್ನು ಆಂಡ್ರ್ಯೂ ಫ್ಲಿಂಟಾಫ್ ಕೆಣಕಿದ್ದರು. ಈ ಸಿಟ್ಟನೆಲ್ಲಾ ಯುವರಾಜ್ ಸಿಂಗ್ 19ನೇ ಓವರ್ನಲ್ಲಿ ಹೊರಹಾಕಿದ್ದರು. ಅಂದು 19ನೇ ಓವರ್ ಎಸೆದಿದ್ದು 21 ವರ್ಷದ ಯುವ ವೇಗಿ ಸ್ಟುವರ್ಟ್ ಬ್ರಾಡ್. ಆ ಓವರ್ನ 6 ಎಸೆತಗಳಲ್ಲೂ ಸಿಕ್ಸ್ ಸಿಡಿಸುವ ಮೂಲಕ ಯುವರಾಜ್ ಸಿಂಗ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದರು.
ಇದರೊಂದಿಗೆ ಯುವಿಯ ಹೆಸರು ದಾಖಲೆ ಪಟ್ಟಿಯಲ್ಲಿ ರಾರಾಜಿಸಿದರೆ, ಇತ್ತ 6 ಸಿಕ್ಸ್ ಹೊಡೆಸಿಕೊಂಡ ಬೌಲರ್ ಎಂಬ ಹಣೆಪಟ್ಟಿ ಸ್ಟುವರ್ಟ್ ಬ್ರಾಡ್ ಪಾಲಾಯಿತು. ಇದೀಗ ಈ ಘಟನೆ ನಡೆದು 16 ವರ್ಷಗಳ ಬಳಿಕ ಸ್ಟುವರ್ಟ್ ಬ್ರಾಡ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಈ ವಿದಾಯಕ್ಕೂ ಮುನ್ನ ಯುವರಾಜ್ ಸಿಂಗ್ ಬಾರಿಸಿದ ಆ 6 ಸಿಕ್ಸ್ಗಳ ಬಗ್ಗೆಗೂ ಮಾತನಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕೇಳಲಾದ ಆರು ಸಿಕ್ಸ್ಗಳ ಪ್ರಶ್ನೆಗೆ ಹಸನ್ಮುಖಿಯಾಗಿಯೇ ಉತ್ತರಿಸಿದ ಬ್ರಾಡ್, ಅದೊಂದು ಘಟನೆ ನಡೆಯಬಾರದಿತ್ತು ಎಂದು ತಿಳಿಸಿದ್ದಾರೆ.
ಖಂಡಿತವಾಗಿಯೂ ಆರು ಸಿಕ್ಸ್ಗಳನ್ನು ಹೊಡೆಸಿಕೊಂಡಿದ್ದು, ನನ್ನ ಪಾಲಿಗೆ ಕಠಿಣವಾಗಿತ್ತು. ಅಂತಹದೊಂದು ಘಟನೆಯೇ ನಡೆಯಬಾರದಿತ್ತು ಎಂದು ಬಯಸುತ್ತೇನೆ. ಆದರೆ ಅದೇ ನನ್ನ ವೃತ್ತಿಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಎಂದರೆ ತಪ್ಪಾಗಲಾರದು.
ಏಕೆಂದರೆ ಅಂದಿನ ನನ್ನ ಕೆಟ್ಟ ಓವರ್ನಿಂದಾಗಿ ನಾನು ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದೆ. ಅದು ನನ್ನನ್ನು ಇಂದಿಗೂ ಪ್ರತಿಸ್ಪರ್ಧಿಯನ್ನಾಗಿ ಮಾಡಿದೆ. ನಾವೆಲ್ಲರೂ ಅಂತಹದೊಂದು ಕಠಿಣ ಕ್ಷಣಗಳ ಮೂಲಕ ಹಾದು ಹೋಗುತ್ತೇವೆ. ಇದಾದ ಬಳಿಕ ನಾವು ಹೇಗೆ ಕಂಬ್ಯಾಕ್ ಮಾಡುತ್ತೇವೆ ಎಂಬುದರ ಮೇಲೆ ನಮ್ಮ ಸಾಮರ್ಥ್ಯ ಅಡಗಿದೆ ಎಂದು ಸ್ಟುವರ್ಟ್ ಬ್ರಾಡ್ ತಿಳಿಸಿದರು.
ಅಂದು ಯುವರಾಜ್ ಸಿಂಗ್ ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿದ್ದರಿಂದ ನನ್ನ ಸಹ ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸಿದೆ. ಇದು ಪ್ರತಿಬಾರಿಯೂ ನನ್ನನ್ನು ಪ್ರತಿಸ್ಪರ್ಧಿಯಾಗಿರಲು ಪ್ರೇರೇಪಿಸಿತು. ಅದರಂತೆ ಇದೀಗ ಹಲವು ಸಾಧನೆಗಳೊಂದಿಗೆ ನಾನು ಇಂದು ಇಲ್ಲಿದ್ದೇನೆ ಎಂದು ಸ್ಟುವರ್ಟ್ ಬ್ರಾಡ್ ತಿಳಿಸಿದ್ದಾರೆ.
ಅಂದಹಾಗೆ ಆ ಸಿಕ್ಸ್ಗಳ ಬಳಿಕ ಸ್ಟುವರ್ಟ್ ಬ್ರಾಡ್ ತಮ್ಮ ಕೆರಿಯರ್ನಲ್ಲಿ 800 ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವ ಕೇವಲ 8 ಬೌಲರ್ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ ಎಂಬುದು ವಿಶೇಷ.