IND vs WI: ಸತತ 17 ವರ್ಷಗಳ ಗೆಲುವಿನ ನಾಗಲೋಟ; ವಿಂಡೀಸ್ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ..!

Aug 2, 2023

 
 

India vs West Indies 3rd ODI: ಕೆರಿಬಿಯನ್ನರ ನಾಡಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿರುವ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದು ಬೀಗಿದೆ.

ಕೆರಿಬಿಯನ್ನರ ನಾಡಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿರುವ ಟೀಂ ಇಂಡಿಯಾ (India vs West Indies) ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದು ಬೀಗಿದೆ. 2006 ರಿಂದ ವೆಸ್ಟ್ ಇಂಡೀಸ್ ವಿರುದ್ಧ ತನ್ನ ಗೆಲುವಿನ ನಾಗಲೋಟವನ್ನು ಮುಂದುವರೆಸಿರುವ ಭಾರತ ಸತತ 13 ನೇ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಬಾರ್ಬಡೋಸ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ (Team India) ಪೈಪೋಟಿ ನೀಡಿದ್ದ ವಿಂಡೀಸ್ ಪಡೆ, ಟ್ರಿನಿಡಾಡ್‌ನಲ್ಲಿ ಸರಣಿ ಗೆಲುವಿಗಾಗಿ ಹೋರಾಟ ನೀಡಲಿದೆ ಎಂಬ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಲಾರಾ ಮೈದಾನದಲ್ಲಿ ಯಂಗ್ ಇಂಡಿಯಾದ ಮುಂದೆ ವಿಂಡೀಸ್ ಪಡೆಯ ಆಟ ನಡೆಯಲ್ಲಿಲ್ಲ. ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದಲ್ಲಿ ಭಾರತ ತಂಡ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಬರೋಬ್ಬರಿ 200 ರನ್​ಗಳಿಂದ ಸೋಲಿಸಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಇದರೊಂದಿಗೆ ಹಲವು ಪ್ರಯೋಗಗಳ ನಡುವೆಯೂ ಸರಣಿಯ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ, ಕೋಚ್ ರಾಹುಲ್ ದ್ರಾವಿಡ್ (Rahul Dravid) ಮತ್ತು ನಾಯಕ ರೋಹಿತ್ ಶರ್ಮಾ (Rohit Sharma) ಅವರ ಪ್ರಯತ್ನಕ್ಕೆ ಸ್ವಲ್ಪ ಯಶ ಸಿಕ್ಕಂತ್ತಾಯಿತು.

ಇಶಾನ್- ಗಿಲ್ ಸ್ಫೋಟಕ ಆರಂಭ

ಈ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್, ಟೀಂ ಇಂಡಿಯಾವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು. ತಂಡದ ಪರ ಆರಂಭಿಕ ಕಣಕ್ಕಿಳಿದ ಇಶಾನ್ ಕಿಶನ್ ಹಾಗೂ ಶುಭ್​ಮನ್ ಗಿಲ್ ವಿಂಡೀಸ್ ಬೌಲಿಂಗ್​ ವಿಭಾಗದ ಮೇಲೆ ಆರಂಭದಲ್ಲೇ ಸವಾರಿ ನಡೆಸಿದರು. ಆರಂಭಿಕರಿಬ್ಬರೂ ಅರ್ಧಶತಕದ ಇನ್ನಿಂಗ್ಸ್ ಆಡುವುದರೊಂದಿಗೆ 19.4 ಓವರ್‌ಗಳಲ್ಲಿಯೇ ತಂಡದ ಮೊತ್ತವನ್ನು 143 ರನ್‌ಗಳ ಗಡಿ ದಾಟಿಸಿದರು. ಈ ಪಂದ್ಯದಲ್ಲಿ 77 ರನ್​ಗಳ ಇನ್ನಿಂಗ್ಸ್ ಆಡಿದ ಕಿಶನ್, ಏಕದಿನ ಸರಣಿಯ ಮೂರೂ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ ದಾಖಲೆ ಬರೆದರು.

ಅದೇ ಸಮಯದಲ್ಲಿ, ಪ್ರವಾಸದುದ್ದಕ್ಕೂ ಬ್ಯಾಟಿಂಗ್​ನಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಗಿಲ್ ಅಂತಿಮವಾಗಿ ಅರ್ಧಶತಕದ ಇನ್ನಿಂಗ್ಸ್ ಆಡಿ ಮಿಂಚಿದರು. ಆದರೆ 85 ರನ್ ಸಿಡಿಸಿ ಶತಕದತ್ತ ಸಾಗುತ್ತಿದ್ದ ಗಿಲ್, ಸ್ಪಿನ್ ಬಲೆಗೆ ಬಿದ್ದರು. ಈ ಎರಡು ಆರಂಭಿಕ ವಿಕೆಟ್‌ಗಳ ನಡುವೆ ಮೂರನೇ ಕ್ರಮಾಂಕದಲ್ಲಿ ಬಂದ ರುತುರಾಜ್ ಗಾಯಕ್ವಾಡ್ (8) ಅವರಿಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಬಂದ ಸಂಜು ಸ್ಯಾಮ್ಸನ್ ಆಯ್ಕೆ ಮಂಡಳಿಯ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಸಂಜು, ಕೇವಲ 41 ಎಸೆತಗಳಲ್ಲಿ 51 ರನ್ ಬಾರಿಸಿ, ಪೆವಿಲಿಯನತ್ತ ಹೆಜ್ಜೆ ಹಾಕಿದರು.

ಸ್ಫೋಟಕ ಫಿನಿಶಿಂಗ್ ಟಚ್ ನೀಡಿದ ಹಾರ್ದಿಕ್

ಟಾಪ್ ಆರ್ಡರ್ ನೀಡಿದ ಭರ್ಜರಿ ಪ್ರದರ್ಶನದಿಂದಾಗಿ ಟೀಂ ಇಂಡಿಯಾ 39 ಓವರ್‌ಗಳಲ್ಲಿಯೇ 240 ರನ್ ದಾಖಲಿಸಿತ್ತು. ನಂತರ ಸೂರ್ಯಕುಮಾರ್ ಯಾದವ್ (35) ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಜೊತೆಗೂಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಏಕದಿನ ಸರಣಿಯಲ್ಲಿ ತನ್ನ ಅಸ್ಥಿತ್ವಕ್ಕಾಗಿ ಹೆಣಗಾಡುತ್ತಿರುವ ಸೂರ್ಯ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ, ಹಾರ್ದಿಕ್​ಗೆ ಉತ್ತಮ ಸಾಥ್ ನೀಡಿದರು. ಆದರೆ ಮತ್ತೊಮ್ಮೆ ಬಿಗ್ ಇನ್ನಿಂಗ್ಸ್ ಆಡುವ ಅವಕಾಶವನ್ನು ಕಳೆದುಕೊಂಡರು. ಆದರೆ ತನ್ನ ನಾಯಕನ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಹಾರ್ದಿಕ್, ನಿಧಾನಗತಿಯ ಆರಂಭದ ನಂತರ ಕೊನೆಯ 3 ಓವರ್​ಗಳಲ್ಲಿ ಅಬ್ಬರಿಸಿ ತಮ್ಮ 10ನೇ ಅರ್ಧಶತಕ ದಾಖಲಿಸಿದರು. ಕೊನೆಯ ಎರಡು ಓವರ್‌ಗಳಲ್ಲಿ ಹಾರ್ದಿಕ್ (ಔಟಾಗದೆ 70, 5 ಸಿಕ್ಸರ್, 4 ಬೌಂಡರಿ) 3 ಸಿಕ್ಸರ್ ಬಾರಿಸಿದರು. ಇದರ ಆಧಾರದ ಮೇಲೆ ತಂಡ 351 ರನ್ ಕಲೆ ಹಾಕಿತು.

ಮುಕೇಶ್-ಶಾರ್ದೂಲ್ ಮಾರಕ ದಾಳಿ

ಇನ್ನು 351 ರನ್​ಗಳ ಬೃಹತ್ ಗುರಿಯೊಂದಿಗೆ ಅಖಾಡಕ್ಕಿಳಿದ ವಿಂಡೀಸ್​ ಪಡೆಯನ್ನು ಭಾರತದ ಬೌಲರ್​ಗಳು ಇನ್ನಿಲ್ಲದಂತೆ ಕಾಡಿದರು. ಇನಿಂಗ್ಸ್‌ನ ಮೊದಲ ಮತ್ತು ಮೂರನೇ ಓವರ್‌ನಲ್ಲಿ ಮುಕೇಶ್ ಕುಮಾರ್ ಆರಂಭಿಕ ಜೋಡಿ ಬ್ರಾಂಡನ್ ಕಿಂಗ್ ಮತ್ತು ಕೈಲ್ ಮೇಯರ್ಸ್ ಅವರನ್ನು ಪೆವಿಲಿಯನ್‌ಗಟ್ಟಿದರು. ಇಲ್ಲಿಗೆ ನಿಲ್ಲದ ಮುಖೇಶ್ 7ನೇ ಓವರ್​ನಲ್ಲಿ ವಿಂಡೀಸ್ ನಾಯಕ ಶಾಯ್ ಹೋಪ್ ಅವರನ್ನು ಔಟ್ ಮಾಡುವ ಮೂಲಕ ಕೆರಿಬಿಯನ್ನರಿಗೆ ದೊಡ್ಡ ಹೊಡೆತ ನೀಡಿದರು.

12ನೇ ಓವರ್ ವೇಳೆಗೆ ವೆಸ್ಟ್ ಇಂಡೀಸ್ ತಂಡ 5 ವಿಕೆಟ್ ಕಳೆದುಕೊಂಡು ಕೇವಲ 40 ರನ್ ಗಳಿಸಿತ್ತು. ಇದರಲ್ಲಿ 10 ವರ್ಷಗಳ ಬಳಿಕ ಏಕದಿನ ತಂಡಕ್ಕೆ ವಾಪಸಾದ ಎಡಗೈ ವೇಗಿ ಜಯದೇವ್ ಉನದ್ಕಟ್,ಕೆಸಿ ಕಾರ್ಟಿ ವಿಕೆಟ್ ಉರುಳಿಸಿದರೆ, ಶಾರ್ದೂಲ್ ಠಾಕೂರ್ ಶಿಮ್ರೋನ್ ಹೆಟ್ಮೆಯರ್​ಗೆ ಪೆವಿಲಿಯನ್ ದಾರಿ ತೋರಿಸಿದರು. ಆ ಬಳಿಕ ರೊಮಾರಿಯೊ ಶೆಫರ್ಡ್‌ರನ್ನು ಶಾರ್ದೂಲ್ ಬಲಿ ಪಡೆದರು. ಹೀಗಾಗಿ ತಂಡದ ಮೊದಲ 6 ವಿಕೆಟ್‌ಗಳು ಕೇವಲ 50 ರನ್‌ಗಳಿಗೆ ಪತನಗೊಂಡವು.

ಕುಲ್ದೀಪ್ ಸ್ಪಿನ್ ಮೋಡಿ

ವೇಗಿಗಳೊಂದಿಗೆ ಕೈ ಜೋಡಿಸಿದ ಕುಲ್ದೀಪ್ ಯಾದವ್ ವೆಸ್ಟ್ ಇಂಡೀಸ್ ಪರ ಏಕಾಂಗಿ ಹೋರಾಟ ನಡೆಸುತ್ತಿದ್ದ ಅಲಿಕ್ ಅತಾನಾಜ್ (32) ಅವರನ್ನು ಬೌಲ್ಡ್ ಮಾಡಿದರು. ಬಳಿಕ ಯಾನಿಕ್ ಕಾರಿಯಾ ಕೆಲವೇ ಹೊತ್ತಿನಲ್ಲಿ ಎಲ್ ಬಿಡಬ್ಲ್ಯು ಆಗಿ ಔಟಾದರು. ಗುಡ್ಕೇಶ್ ಮೋತಿ (ಔಟಾಗದೆ 39) ಮತ್ತು ಅಲ್ಜಾರಿ ಜೋಸೆಫ್ (26) ವೆಸ್ಟ್ ಇಂಡೀಸ್‌ ಪರ ಕೆಳ ಕ್ರಮಾಂಕದಲ್ಲಿ ಒಂಬತ್ತನೇ ವಿಕೆಟ್‌ಗೆ ಬಲವಾದ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರು. ಆದರೆ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡುವಲ್ಲಿ ವಿಫಲರಾದರು. ಅಂತಿಮವಾಗಿ ವಿಂಡೀಸ್ ತಂಡ 35.3 ಓವರ್‌ಗಳಲ್ಲಿ ಕೇವಲ 151 ರನ್‌ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ ಪರ ಶಾರ್ದೂಲ್ 4, ಮುಖೇಶ್ 3 ಹಾಗೂ ಕುಲ್ದೀಪ್ 2 ವಿಕೆಟ್ ಪಡೆದು ಮಿಂಚಿದರು. ಸರಣಿಯಲ್ಲಿ ಮೂರು ಅರ್ಧಶತಕ ಸಿಡಿಸಿದ ಇಶಾನ್ ಕಿಶನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Source: TV9 KANNADA