Shivarajkumar: ‘ಭಜರಂಗಿ 2’ ರಿಲೀಸ್ ಡೇಟ್ ಮುಂದೂಡಿಕೆ; ಕೊರೊನಾ ಭೀತಿಯಿಂದ ಚಿತ್ರತಂಡದ ನಿರ್ಧಾರ
ಚಿತ್ರರಂಗವನ್ನು ಕೊರೊನಾ ವೈರಸ್ ಕಾಡುತ್ತಿದೆ. ಮೊದಲನೇ ಅಲೆ ಆರಂಭ ಆದಾಗಿನಿಂದ ಇಂದಿನವರೆಗೆ ಸಿನಿಮಾರಂಗದ ವ್ಯವಹಾರದ ಮೇಲೆ ಕೊವಿಡ್ ಪೆಟ್ಟು ಕೊಡುತ್ತಲೇ ಇದೆ. ಇನ್ನೇನು ಎರಡನೇ ಅಲೆ ಶಮನ ಆಗುತ್ತಿದೆ ಎಂದುಕೊಂಡಿದ್ದ ಹಲವು ಸಿನಿಮಾ ತಂಡಗಳು ರಿಲೀಸ್ ಡೇಟ್ ಘೋಷಿಸಿಕೊಂಡಿದ್ದವು. ಶಿವರಾಜ್ಕುಮಾರ್ (Shivarajkumar) ನಟನೆಯ ಬಹುನಿರೀಕ್ಷಿತ ‘ಭಜರಂಗಿ 2’ (Bhajarangi 2) ಸಿನಿಮಾ ಸೆ.10ರಂದು ಬಿಡುಗಡೆಯಾಗಲು ಸಜ್ಜಾಗಿತ್ತು. ಆದರೆ ಈಗ ಕೊರೊನಾ ಭೀತಿಗೆ ಚಿತ್ರತಂಡ ನಿರ್ಧಾರ ಬದಲಿಸಿದೆ. ಸೆ.10ರಂದು ಸಿನಿಮಾ ರಿಲೀಸ್ ಮಾಡುವುದು ಬೇಡ ಎಂದು ನಿರ್ಮಾಪಕರು ತೀರ್ಮಾನಿಸಿದ್ದಾರೆ. ಈ ಬಗ್ಗೆ ಶಿವರಾಜ್ಕುಮಾರ್ ಹೇಳಿಕೆ ನೀಡಿದ್ದಾರೆ.
‘ಸೆ.1ರಂದು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಆಗಬೇಕಿತ್ತು. ಸೆ.10 ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ ನಿಮಗೂ ಗೊತ್ತು. ಕೊರೊನಾ ಕೇಸ್ಗಳು ಜಾಸ್ತಿ ಆಗುತ್ತಿವೆ. ವೀಕೆಂಡ್ ಲಾಕ್ಡೌನ್ ಮತ್ತು ನೈಟ್ ಕರ್ಫ್ಯೂ ಇರುವುದರಿಂದ ಸೆ.10ರಂದು ಸಿನಿಮಾ ಬಿಡುಗಡೆ ಮಾಡಲು ಆಗುತ್ತಿಲ್ಲ’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
‘ಆದಷ್ಟು ಬೇಗ ಹೊಸ ರಿಲೀಸ್ ದಿನಾಂಕವನ್ನು ನಾವು ನಿಮಗೆ ತಿಳಿಸುತ್ತೇವೆ. ತುಂಬಾ ಲೇಟ್ ಆಗುವುದಿಲ್ಲ. ಆದಷ್ಟು ಬೇಗ ರಿಲೀಸ್ ಮಾಡಬೇಕು ಎಂದು ನಾವು ಪ್ರಯತ್ನಿಸುತ್ತಿದ್ದೇವೆ. ಶೇ.100ರಷ್ಟು ಚಿತ್ರಮಂದಿರ ತುಂಬಿದ್ದಾಗಲೇ ಜನರು ಸಿನಿಮಾದ ಮಜವನ್ನು ಅನುಭವಿಸಬಹುದು. ತಡ ಆಗುತ್ತಿರುವುದಕ್ಕೆ ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ಟ್ರೇಲರ್ ರಿಲೀಸ್ ಮಾಡಿ, ಅದರಲ್ಲೇ ಹೊಸ ರಿಲೀಸ್ ಡೇಟ್ ತಿಳಿಸುತ್ತೇವೆ’ ಎಂದು ಶಿವಣ್ಣ ಹೇಳಿದ್ದಾರೆ.
‘ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಎಷ್ಟೇ ಅಡೆತಡೆಗಳು ಬಂದರೂ ಆಂಜನೇಯ ಸ್ವಾಮಿ ಕೃಪೆಯಿಂದ ಮುನ್ನುಗ್ಗಿಕೊಂಡು ಹೋಗುತ್ತಿದ್ದೇವೆ. ನಾವು ಪಟ್ಟ ಕಷ್ಟವನ್ನು ನೀವು ಅನುಭವಿಸಬಾರದು. ನೀವು ಆರಾಮಾಗಿ ಬಂದು ಸಿನಿಮಾ ನೋಡಬೇಕು. ನಾವು ಪಟ್ಟಿರುವ ಕಷ್ಟಕ್ಕೆ ನೀವು ಪ್ರತಿಫಲ ನೀಡುತ್ತೀರಿ ಎಂಬ ಭರವಸೆ ಇದೆ. ರಿಲೀಸ್ ದಿನಾಂಕ ಮುಂದೂಡಿಕೆ ಆಗಿದ್ದಕ್ಕೆ ಇಡೀ ತಂಡದಿಂದ ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ’ ಎಂದು ಅಭಿಮಾನಿಗಳ ಜೊತೆ ಶಿವರಾಜ್ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ಎ. ಹರ್ಷ ನಿರ್ದೇಶನದ ಈ ಚಿತ್ರಕ್ಕೆ ಜಯಣ್ಣ ಮತ್ತು ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ‘ಭಜರಂಗಿ’ ಸೂಪರ್ ಹಿಟ್ ಆಗಿದ್ದರಿಂದ ‘ಭಜರಂಗಿ 2’ ಮೇಲೆ ಜನರಿಗೆ ಹೆಚ್ಚು ನಿರೀಕ್ಷೆ ಇದೆ. ಆದರೆ ಸಿನಿಮಾ ಕಣ್ತುಂಬಿಕೊಳ್ಳಲು ಪ್ರೇಕ್ಷಕರಿಗೆ ಕೊರೊನಾ ಅಡ್ಡಿಯಾಗಿದೆ. ಹೊಸ ರಿಲೀಸ್ ಡೇಟ್ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
Source:Tv9kannada