School Reopening: ನಿಮ್ಮ ಹತ್ತಿರದ ಯಾವುದೇ ಶಾಲೆಗೆ ಹೋಗಿ ಪಾಠ ಕೇಳಿ; ವಲಸೆ ಮಕ್ಕಳಿಗೆ ಶಿಕ್ಷಣ ಸಚಿವರಿಂದ ಶುಭ ಸುದ್ದಿ
ಬೆಂಗಳೂರು: ಕೊರೊನಾ ಆತಂಕದ ನಡುವೆಯೇ ಇಂದಿನಿಂದ ರಾಜ್ಯದಲ್ಲಿ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗುತ್ತಿದ್ದು, ವಲಸೆಹೋದ ಹಾಗೂ ಗ್ರಾಮೀಣ ಭಾಗದಲ್ಲಿ ನೆಲೆಸಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ನಾಗೇಶ್ ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ಕೊರೊನಾ ಕಾರಣದಿಂದ ವಿದ್ಯಾರ್ಥಿಗಳು ಇಷ್ಟು ವರ್ಷ ವಿದ್ಯಾಭ್ಯಾಸ ಮಾಡುತ್ತಿದ್ದ ಊರು ತೊರೆದು ಬೇರೆ ಕಡೆ ತೆರಳಿದ್ದರೆ ಅಥವಾ ಅನಿವಾರ್ಯವಾಗಿ ಬೇರೆ ಊರುಗಳಲ್ಲಿ ನೆಲೆಸಿದ್ದರೆ ಹತ್ತಿರದ ಯಾವುದೇ ಶಾಲೆಗೆ ಹೋಗಿ ಪಾಠ ಕೇಳಬಹುದು ಎಂದು ಸಲಹೆ ನೀಡಿದ್ದಾರೆ.
ಶಾಲೆಗೆ ದಾಖಲಾತಿ ಆಗಿಲ್ಲ ಎಂಬ ಕಾರಣಕ್ಕಾಗಲೀ, ವಿದ್ಯಾಭ್ಯಾಸ ನಡೆಸುತ್ತಿರುವ ಊರಿಗೆ ಮರಳಲು ಆಗಿಲ್ಲ ಎಂಬುದರಿಂದಾಗಲೀ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಬಾರದು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ ವಿದ್ಯಾರ್ಥಿಗಳು ಎಲ್ಲಿ ನೆಲೆಸಿದ್ದಾರೋ ಅಲ್ಲೇ ಸಮೀಪದ ಶಾಲೆಗೆ ತೆರಳಿ ಪಾಠ ಕೇಳಬಹುದಾಗಿದ್ದು, ನಂತರ ದಾಖಲಾತಿಯನ್ನೂ ಅದೇ ಶಾಲೆಯಲ್ಲಿ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಈ ಕೆಳಗಿನ 5 ಜಿಲ್ಲೆಗಳಲ್ಲಿ ಶಾಲೆ ಆರಂಭ ಇಲ್ಲ
ರಾಜ್ಯದಲ್ಲಿ ಡೇಂಜರ್ ಝೋನ್ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆಡೆ ಶಾಲೆ ತೆರೆಯಲಾಗುತ್ತಿದ್ದು, ಶೇ.2 ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಮಾಣ ಇರುವ ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಉಡುಪಿ, ಹಾಸನ ಬಿಟ್ಟು ಮಿಕ್ಕೆಲ್ಲಾ ಕಡೆಗಳಲ್ಲೂ ಇಂದಿನಿಂದ 9 ರಿಂದ 12 ನೇ ತರಗತಿಗಳಿಗೆ ಮೊದಲ ಹಂತದಲ್ಲಿ ಶಾಲೆ ಶುರುವಾಗಲಿದೆ.
ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಮಾರ್ಗಸೂಚಿ ನೀಡಿದ್ದು, ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದೆ. ಅದರಂತೆ ಪ್ರಮುಖ ನಿಯಮಗಳು ಇಂತಿವೆ:
1. ಶಾಲೆಯಲ್ಲಿ ಎರಡಕ್ಕಿಂತ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಕಂಡು ಬಂದರೆ ಒಂದು ವಾರ ಶಾಲೆ ಸೀಲ್ಡೌನ್
2. ಶೇ. 2ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಮಾಣ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯುವಂತಿಲ್ಲ
3. ಕೊರೊನಾ ಲಕ್ಷಣ ಕಂಡು ಬರುವ ಮಗುವನ್ನು ಶಾಲೆಗೆ ಕಳುಹಿಸುವಂತಿಲ್ಲ
4. ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯ
5. ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆದಿರಬೇಕು
6. ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಒಪ್ಪಿಗೆ ಪತ್ರ ಪಡೆದು ಶಾಲೆಗೆ ಬರಬೇಕು
7. ವಸತಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ 72 ಗಂಟೆಗಳ ಅಂತರದಲ್ಲಿ ಪಡೆದ ಕೊವಿಡ್ ನೆಗೆಟಿವ್ ವರದಿ ಸಲ್ಲಿಸಬೇಕು
8. ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ ಇಲ್ಲ
9. ಆನ್ ಲೈನ್ ಹಾಗೂ ಆಫ್ ಲೈನ್ ಎರಡಕ್ಕೂ ಅವಕಾಶ ಸಾಧ್ಯತೆ
10. ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಕಲಿಕೆಗೆ ಅವಕಾಶ ಅಥವಾ ಕೊಠಡಿಯ ವಿಶಾಲತೆ ಆಧಾರದ ಮೇಲೆ ನಿರ್ಧಾರ
11. ಶಾಲಾ ವಾಹನಗಳಲ್ಲಿಯೂ ಸಹ ಸಾಮಾಜಿಕ ಅಂತರ ಕಾಪಾಡಬೇಕು
12. ಕೊಠಡಿಗಳಲ್ಲಿ ಎಲ್ಲ ವಸ್ತುಗಳನ್ನು ಸ್ಯಾನಿಟೈಸ್ ಮಾಡಬೇಕು
13. ಮಕ್ಕಳ ಆಗಮನ ಮತ್ತು ನಿರ್ಗಮನದ ದಾರಿ ಪ್ರತ್ಯೇಕವಾಗಿ ಮಾಡಬೇಕು
14. ಶಾಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕು
15. ಶಾಲೆಯ ಅವರಣದಲ್ಲಿ ಬಾಕ್ಸ್ ನಿರ್ಮಾಣ ಮಾಡಬೇಕು
16. ವಿದ್ಯಾರ್ಥಿಗಳು ಸಾಮಾಜಿಕ ಅಂತರದೊಂದಿಗೆ ಶಾಲೆ ಪ್ರವೇಶ ಮಾಡಬೇಕು
17. ಶಾಲಾ ಪ್ರವೇಶಕ್ಕೆ ಮೊದಲು ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು
18. ಪಿಯು ಕಾಲೇಜುಗಳಲ್ಲಿ ವಾರದ ಮೊದಲ ದಿನ ಶೇ.50ರಷ್ಟು ವಿದ್ಯಾರ್ಥಿಗಳಿಗೆ ಹಾಗೂ ನಂತರದ ಮೂರು ದಿನ ಉಳಿದ ಶೇ.50ರಷ್ಟು ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ನಡೆಸಬೇಕು.
ಪ್ರಿಯ ವಿದ್ಯಾರ್ಥಿಗಳೇ, ಚಾಚೂ ತಪ್ಪದೇ ಈ ನಿಯಮಗಳನ್ನು ಪಾಲಿಸಿ
ಸಾಮಾಜಿಕ ಅಂತರ ಕಾಪಾಡುವುದರ ಜೊತೆ ಆಗಾಗ ಕೈ ತೊಳೆಯಬೇಕು. ಯೋಗ, ಪ್ರಾಣಾಯಾಮ, ವ್ಯಾಯಾಮವನ್ನು ರೂಢಿ ಮಾಡಿಕೊಳ್ಳಬೇಕು. ಮನೆಯಿಂದಲೇ ಊಟದ ಡಬ್ಬಿ ಹಾಗೂ ಕಾಯಿಸಿ ಆರಿಸಿದ ನೀರನ್ನು ತರಬೇಕು. ಬಿಸಿಯಾದ ಆಹಾರ ಪದಾರ್ಥ ಸೇವಿಸಬೇಕು. ಪೆನ್, ನೋಟ್ ಬುಕ್, ನೀರಿನ ಬಾಟಲ್ ಸೇರಿದಂತೆ ಯಾವುದೇ ವಸ್ತುವನ್ನು ಸಹಪಾಠಿಗಳೊಂದಿಗೆ ಹಂಚಿಕೊಳ್ಳಬಾರದು.
Source: tv9 Kannada