Rahul Dravid: ರಾಹುಲ್​ ದ್ರಾವಿಡ್​ಗೆ ಚಿತ್ರರಂಗದಿಂದ ಬಂತು ಬೇಡಿಕೆ! ಒಂದೇ ದಿನದಲ್ಲಿ ಇದೆಂಥಾ ಮ್ಯಾಜಿಕ್​

Apr 10, 2021

Rahul Dravid Ad Viral Video: ರಾಹುಲ್​ ದ್ರಾವಿಡ್​ ಅವರು ಸಿನಿಮಾದಲ್ಲಿ ನಟಿಸಬೇಕು ಎಂದು ಜನರು ಒತ್ತಾಯ ಮಾಡುತ್ತಿದ್ದಾರೆ. ಯಾಕೆಂದರೆ, ಕ್ರೆಡ್​ ಕಂಪನಿಯ ಜಾಹೀರಾತಿಯಲ್ಲಿ ದ್ರಾವಿಡ್​ ನಟಿಸಿರುವ ರೀತಿಗೆ ಎಲ್ಲರೂ ಬೋಲ್ಡ್​ ಆಗಿದ್ದಾರೆ.

ಈಗ ಎಲ್ಲೆಲ್ಲೋ ಐಪಿಎಲ್​ನದ್ದೇ ಸದ್ದು. ಆದರೆ ಅದಕ್ಕಿಂತಲೂ ಜೋರಾಗಿ ರಾಹುಲ್​ ದ್ರಾವಿಡ್​ ಸೌಂಡು ಮಾಡುತ್ತಿದ್ದಾರೆ! ಅದು ಕ್ರಿಕೆಟ್​ ಕಾರಣಕ್ಕಾಗಿ ಅಲ್ಲ. ಬದಲಿಗೆ ಒಂದು ಜಾಹೀರಾತಿನಿಂದಾಗಿ ಎಂಬುದು ವಿಶೇಷ. ಕ್ರೆಡಿಟ್​ ಕಾರ್ಡ್​ ಬಿಲ್​ ಪಾವತಿ ಮಾಡುವ ಕ್ರೆಡ್​ ಕಂಪನಿಯ ಜಾಹೀರಾತಿನಲ್ಲಿ ರಾಹುಲ್​ ದ್ರಾವಿಡ್​ ಕಾಣಿಸಿಕೊಂಡಿದ್ದು, ಅದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅಷ್ಟೇ ಅಲ್ಲ, ಜನರು ಇದನ್ನು ತುಂಬ ಇಷ್ಟಪಡುತ್ತಿದ್ದಾರೆ. ಸಿಡುಕಿನ ಮನುಷ್ಯನಾಗಿ ದ್ರಾವಿಡ್​ ಹೊಸ ಅವತಾರ ತಾಳಿದ್ದಾರೆ. ಪರಿಣಾಮವಾಗಿ ಅವರಿಗೆ ಸಿನಿಮಾಗಳಲ್ಲಿ ನಟಿಸುವಂತೆ ಆಫರ್​ ಬರುತ್ತಿದೆ!

ಸಿನಿಮಾ ಮತ್ತು ಕ್ರಿಕೆಟ್​ಗೆ ತುಂಬ ಹತ್ತಿರದ ಸಂಬಂಧ ಇದೆ. ಸೆಲೆಬ್ರಿಟಿಗಳು ಕ್ರಿಕೆಟ್​ ಆಡುತ್ತಾರೆ. ಹಾಗೆಯೇ ಕೆಲವು ಕ್ರಿಕೆಟಿಗರು ಸಿನಿಮಾ ಮಾಡಿದ್ದಾರೆ. ಕ್ರೀಡಾ ಜಗತ್ತಿನ ಅನೇಕ ಸಾಧಕರ ಬಯೋಪಿಕ್​ ಸಹ ಆಗಿದೆ. ಆದರೆ ಈಗ ನೇರವಾಗಿ ರಾಹುಲ್​ ದ್ರಾವಿಡ್​ ಅವರು ಸಿನಿಮಾದಲ್ಲಿ ನಟಿಸಬೇಕು ಎಂದು ಜನರು ಒತ್ತಾಯ ಮಾಡುತ್ತಿದ್ದಾರೆ. ಯಾಕೆಂದರೆ, ಕ್ರೆಡ್​ ಕಂಪನಿಯ ಜಾಹೀರಾತಿಯಲ್ಲಿ ದ್ರಾವಿಡ್​ ನಟಿಸಿರುವ ರೀತಿಗೆ ಎಲ್ಲರೂ ಬೋಲ್ಡ್​ ಆಗಿದ್ದಾರೆ.

‘ರಾಹುಲ್​ ದ್ರಾವಿಡ್​ ಅವರೇ.. ದಯವಿಟ್ಟು ನೀವು ಕನ್ನಡ ಸಿನಿಮಾದಲ್ಲಿ ನಟನೆ ಶುರುಮಾಡಿ. ಯಾಕೆಂದರೆ ನಿಮ್ಮ ಅಭಿನಯ ಕೌಶಲ್ಯ ಮತ್ತು ಲುಕ್​ ಬೇರೆ ಎಷ್ಟೋ ನಟರಿಗಿಂತ ಚೆನ್ನಾಗಿದೆ’ ಎಂದು ರಂಗಭೂಮಿ ಹಿನ್ನೆಲೆ ಹೊಂದಿರುವ ಸಿನಿಮಾ ಬರಹಗಾರ ಅಭಿಶೇಕ್​ ಅಯ್ಯಂಗರ್​ ಅವರು ಟ್ವೀಟ್​ ಮಾಡಿದ್ದಾರೆ. ಅಷ್ಟೇ ಅಲ್ಲ, ಬಾಲಿವುಡ್​ ಸಿನಿಪ್ರಿಯರು ಕೂಡ ದ್ರಾವಿಡ್​ ಅಭಿನಯಕ್ಕೆ ಮನಸೋತು ಹೊಸ ಬೇಡಿಕೆ ಇಟ್ಟಿದ್ದಾರೆ.

 

ತೆಲುಗಿನ ‘ಅರ್ಜುನ್​ ರೆಡ್ಡಿ’ ಚಿತ್ರದ ಬಾಲಿವುಡ್​ ರಿಮೇಕ್​ ಆದಂತಹ ‘ಕಬೀರ್​ ಸಿಂಗ್​’ ಸಿನಿಮಾದಲ್ಲಿ ಶಾಹಿದ್​ ಕಪೂರ್​ ನಟಿಸಿದ್ದರು. ಆ ಚಿತ್ರದ ಕಥಾನಾಯಕನಿಗೆ ವಿಪರೀತ ಕೋಪ ಇರುತ್ತದೆ. ಈಗ ದ್ರಾವಿಡ್​ ಕೂಡ ಅಂಥ ಕೋಪಿಷ್ಟ ಮನುಷ್ಯನ ಪಾತ್ರವನ್ನು ಈ ಜಾಹೀರಾತಿನಲ್ಲಿ ನಿಭಾಯಿಸಿದ್ದಾರೆ. ಅದು ಜನರಿಗೆ ಸಖತ್​ ಇಷ್ಟ ಆಗಿದೆ. ಹಾಗಾಗಿ ದಯವಿಟ್ಟು ‘ಕಬೀರ್​ ಸಿಂಗ್​’ ಸಿನಿಮಾವನ್ನು ಮತ್ತೆ ಹೊಸದಾಗಿ ಮಾಡಬೇಕು ಹಾಗೂ ಅದರಲ್ಲಿ ದ್ರಾವಿಡ್​ ಹೀರೋ ಆಗಬೇಕು ಎಂದು ನೆಟ್ಟಿಗರು ಡಿಮ್ಯಾಂಡ್​ ಮಾಡುತ್ತಿದ್ದಾರೆ!  

ವಿರಾಟ್​ ಕೊಹ್ಲಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಜಾಹೀರಾತು ನೋಡಿ ಫಿದಾ ಆಗಿದ್ದಾರೆ. ಇಷ್ಟು ವರ್ಷಗಳಲ್ಲಿ ದ್ರಾವಿಡ್​ ಅವರನ್ನು ಯಾರೂ ಈ ಅವತಾರದಲ್ಲಿ ನೋಡಿಯೇ ಇರಲಿಲ್ಲ. ಇನ್ನು, ಇದೇ ಜಾಹೀರಾತನ್ನು ಇಟ್ಟುಕೊಂಡು ಹಲವು ಮೀಮ್​ಗಳನ್ನು ಮಾಡಿ ಹರಿಬಿಡಲಾಗುತ್ತಿದೆ.

 


‘ಈ ಜಾಹೀರಾತಿನಲ್ಲಿ ರಾಹುಲ್​ ದ್ರಾವಿಡ್​ ಮಾಡಿದ ನಟನೆಯು ಅರ್ಜುನ್​ ಕಪೂರ್​ ಅವರ ಇಷ್ಟು ವರ್ಷಗಳ ಕರಿಯರ್​ಗಿಂತ ಉತ್ತಮವಾಗಿದೆ. ಇದನ್ನು ನೀವೆಲ್ಲ ಒಪ್ಪಿಕೊಳ್ಳಿ ಅಥವಾ ಸತ್ತು ಹೋಗಿ’ ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ.

Source: TV9Kannada