National Mathematics Day 2021: ಇಂದು ಶ್ರೀನಿವಾಸ ರಾಮಾನುಜನ್​ ಜನ್ಮದಿನ; ದೇಶಾದ್ಯಂತ ರಾಷ್ಟ್ರೀಯ ಗಣಿತ ದಿನ ಆಚರಣೆ

Dec 22, 2021

ಇಂದು ರಾಷ್ಟ್ರೀಯ ಗಣಿತ ದಿನ (National Mathematics Day). ಭಾರತದ ಅಪ್ರತಿಮ ಗಣಿತತಜ್ಞ ಶ್ರೀನಿವಾಸ ರಾಮಾನುಜನ್​ ಅವರ ಜನ್ಮದಿನದ ನಿಮಿತ್ತ ಪ್ರತಿವರ್ಷ ಡಿಸೆಂಬರ್ 22ನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿ ಶ್ರೀನಿವಾಸ ರಾಮಾನುಜನ್​​ ಅವರ 134ನೇ ಜನ್ಮವಾರ್ಷಿಕೋತ್ಸವ. ರಾಮಾನುಜಂ ಅವರು ಹುಟ್ಟಿದ್ದು 1887ರ ಡಿಸೆಂಬರ್​ 22ರಂದು. 2012ರವರೆಗೂ ದೇಶದಲ್ಲಿ ರಾಷ್ಟ್ರೀಯ ಗಣಿತ ದಿನ ಆಚರಣೆ ಇರಲಿಲ್ಲ. 2012ರಲ್ಲಿ ಶ್ರೀನಿವಾಸ ರಾಮಾನುಜನ್​ ಅವರ 125ನೇ ಜನ್ಮ ವಾರ್ಷಿಕೋತ್ಸವ ನಿಮಿತ್ತ, ಅಂದಿನ ಪ್ರಧಾನಮಂತ್ರಿ ಮನಮೋಹನ್​ ಸಿಂಗ್ ಅವರು, ಇನ್ನು ಮುಂದೆ ಪ್ರತಿವರ್ಷ ಡಿಸೆಂಬರ್​ 22ನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುವುದು ಎಂದು ಘೋಷಿಸಿದರು. ಅಂದಿನಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ.

ಶ್ರೀನಿವಾಸ ರಾಮಾನುಜಂ ಬಗೆಗೊಂದಿಷ್ಟು
ಶ್ರೀನಿವಾಸ ರಾಮಾನುಜನ್​ ಅವರು ಮೂಲತಃ ತಮಿಳುನಾಡಿನ ಈರೋಡ್​​ನವರು. ಈರೋಡ್​ನ ತಮಿಳು ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದ್ದರು. ಗಣಿತಶಾಸ್ತ್ರದ ಬಗ್ಗೆ ಅಪರಿಮಿತ ಪ್ರೀತಿ ಹೊಂದಿದ್ದ ಅವರು, ಅಪಾರ ಕೊಡುಗೆ ನೀಡಿದ್ದಾರೆ. ಈ ಕಾರಣಕ್ಕೆ ಅವರನ್ನು ಅನಂತವನ್ನೂ ಅರಿತ ಮನುಷ್ಯ (The Man Who Knew Infinity) ಎಂದು ಕರೆಯಲಾಗುತ್ತಿತ್ತು. 14ನೇ ವಯಸ್ಸಿನಲ್ಲಿ ಮನೆಯಿಂದ ಓಡಿ ಹೋಗಿ ಮದ್ರಾಸ್​​ನಲ್ಲಿರುವ ಪಚ್ಚಯಪ್ಪ ಕಾಲೇಜಿಗೆ ಸೇರಿದರು. ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅವರು ಗಣಿತ ಹೊರತು ಪಡಿಸಿ ಇನ್ಯಾವುದೇ ವಿಷಯದಲ್ಲಿಯೂ ಉತ್ತಮ ಅಂಕ ತೆಗೆಯುತ್ತಿರಲಿಲ್ಲ. ಹೀಗಾಗಿ ಫೇಲ್ ಕೂಡ ಆಗಿದ್ದರು. ಆದರೆ ತ್ರಿಕೋನಮಿತಿ ಮತ್ತು ಬೀಜಗಣಿತಗಳನ್ನು ತುಂಬ ಸಲೀಸಾಗಿ ಬಿಡಿಸುತ್ತಿದ್ದರು. 17ನೇ ವರ್ಷದಲ್ಲಿ ಕುಂಭಕೋಣಂ ಸರ್ಕಾರಿ ಕಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿ ವೇತನವನ್ನೂ ಪಡೆದಿದ್ದರು. ಆದರೆ ಉಳಿದ ಕೆಲವು ವಿಷಯಗಳಲ್ಲಿ ಫೇಲ್ ಆದ ಕಾರಣ ಆ ವಿದ್ಯಾರ್ಥಿ ವೇತನವೂ ಕೈ ತಪ್ಪಿತು. ಆದರೆ ಅದಕ್ಕೆ ತಲೆಕೆಡಿಸಿಕೊಳ್ಳದ ರಾಮಾನುಜನ್, ಮಕ್ಕಳಿಗೆ ಗಣಿತದ ಟ್ಯೂಷನ್ ಕೊಟ್ಟು ಹಣ ಗಳಿಸಿದರು.

ಶ್ರೀನಿವಾಸ ರಾಮಾನುಜನ್ ಅವರು ಸ್ವತಃ ಹಲವು ಪ್ರಮೇಯಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವರಿಗೆ 26 ವರ್ಷವಾಗಿದ್ದಾಗ ಕೆಂಬ್ರಿಡ್ಜ್​ ವಿಶ್ವವಿದ್ಯಾಲಯದಿಂದ ಆಹ್ವಾನ ಬಂತು. ಅವರ ಅನಂತ ಸರಣಿಗಳು, ಭಿನ್ನರಾಶಿಗಳು, ಪ್ರಮೇಯಗಳ ಬಗೆಗಿನ ಲೇಖನಗಳು, ಹೇಳಿಕೆಗಳನ್ನು ಪರಿಗಣಿಸಿ ಈ ಯೂನಿವರ್ಸಿಟಿ ಆಹ್ವಾನ ನೀಡಿತ್ತು. ವಿಶ್ವ ಮಹಾಯುದ್ಧ ಪ್ರಾರಂಭಕ್ಕೂ ಕೆಲವೇ ತಿಂಗಳ ಮೊದಲು ರಾಮಾನುಜನ್ ಅವರು ಕೆಂಬ್ರಿಡ್ಜ್​ ಯೂನಿವರ್ಸಿಟಿಯ ಟ್ರಿನಿಟಿ ಕಾಲೇಜಿಗೆ ಅವರು ಸೇರಿದರು. 1916ರಲ್ಲಿ ಬ್ಯಾಚುಲರ್​ ಆಫ್​ ಸೈನ್ಸ್​ ಡಿಗ್ರಿ ಪಡೆದರು. ಅವರು ಟ್ರಿನಿಟಿ ಕಾಲೇಜಿನ ಫೆಲೋ ಆಗಿ ಆಯ್ಕೆಯಾದ ಮೊದಲ ಭಾರತೀಯರಾಗಿದ್ದರು. ನಂತರ ಲಂಡನ್ ಮ್ಯಾಥಮೆಟಿಕಲ್ ಸೊಸೈಟಿ ಮತ್ತು ರಾಯಲ್ ಸೊಸೈಟಿಗೆ ಆಯ್ಕೆಯಾದರು. ಆದರೆ ಇಂಗ್ಲೆಂಡ್​​ನಲ್ಲಿ ಅವರಿಗೆ ಆಹಾರ ಪದ್ಧತಿಗೆ ಹೊಂದಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಆರೋಗ್ಯ ಹದಗೆಡಲು ಶುರವಾಗಿ 1919ರಲ್ಲಿ ಭಾರತಕ್ಕೆ ಮರಳಿದ್ದರು. ಅಷ್ಟಾದರೂ 1920ರ 26ರಂದು ತಮ್ಮ 32ನೇ ವರ್ಷದಲ್ಲಿ ಮೃತಪಟ್ಟಿದ್ದಾರೆ.

ಗಣಿತ ಲೋಕಕ್ಕೆ ಅವರ ಕೊಡುಗೆ
ರಾಮಾನುಜನ್ ಅವರ ಪ್ರತಿಭೆಯನ್ನು ಗಣಿತಜ್ಞರು ಕ್ರಮವಾಗಿ 18 ಮತ್ತು 19ನೇ ಶತಮಾನಗಳ ಯೂಲರ್ ಮತ್ತು ಜಾಕೋಬಿಗೆ ಸಮನಾಗಿ ಪರಿಗಣಿಸಿದ್ದಾರೆ. ಸಂಖ್ಯೆ ಸಿದ್ಧಾಂತದಲ್ಲಿ ಅವರ ಕೆಲಸವನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ. ಪಾರ್ಟಿಷನ್ ಫಂಕ್ಷನ್​​ನಲ್ಲಿ ಅವರು ಹೆಚ್ಚಿನ ಅಧ್ಯಯನ ನಡೆಸಿದ್ದರು. ರಾಮಾನುಜನ್ ಅವರು ಮುಂದುವರಿದ ಭಿನ್ನರಾಶಿಗಳ (continued fractions) ಪಾಂಡಿತ್ಯಕ್ಕಾಗಿ ಗುರುತಿಸಲ್ಪಟ್ಟರು. ರೀಮನ್ ಸರಣಿಗಳು, ಎಲಿಪ್ಟಿಕ್ ಇಂಟಿಗ್ರಲ್ಸ್, ಹೈಪರ್ಜಿಯೊಮೆಟ್ರಿಕ್ ಸರಣಿಗಳು ಮತ್ತು ಜೀಟಾ ಕ್ರಿಯೆಯ ಕ್ರಿಯಾತ್ಮಕ ಸಮೀಕರಣಗಳನ್ನು ಅವರು ರೂಪಿಸಿದ್ದರು. ಸಾಯುವುದಕ್ಕೂ ಮುನ್ನ ಮೂರು ನೋಟ್ ಪುಸ್ತಕಗಳಲ್ಲಿ ರಾಮಾನುಜನ್ ಬರೆದಿದ್ದ ಲೆಕ್ಕಗಳ ಬಗ್ಗೆ ಅವರ ನಿಧನ ನಂತರ ತಜ್ಞರು ಹಲವಾರು ವರ್ಷ ಅಧ್ಯಯನ ನಡೆಸಿದರು. 2015ರಲ್ಲಿ ರಾಮಾನುಜನ್ ಬಯೊಪಿಕ್ The Man Who Knew Infinity ತೆರೆಕಂಡಿದೆ.

ರಾಮಾನುಜನ್ -ಜೀವನದ ಪ್ರಮುಖ ಘಟನೆಗಳು
1887: ಬಟ್ಟೆಯಂಗಡಿಯೊಂದರಲ್ಲಿ ಲೆಕ್ಕ ಬರೆಯುತ್ತಿದ್ದ ಕುಪ್ಪಸ್ವಾಮಿ ಶ್ರೀನಿವಾಸ ಅಯ್ಯಂಗಾರ್ ಮತ್ತು ಕೋಮಳತ್ತಾಮ್ಮಳ್ ಪುತ್ರನಾಗಿ 1887 ಡಿಸೆಂಬರ್ 22ರಂದು ಈರೋಡ್​ನಲ್ಲಿ ಜನನ. ಬಾಲ್ಯದಿಂದಲೇ ಗಣಿತದಲ್ಲಿ ಅಪಾರ ಆಸಕ್ತಿ. ಯಾವುದೇ ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಭಾಗಿಸಿದರೆ ಸಿಗುವ ಉತ್ತರ 1 ಎಂದು ಶಿಕ್ಷಕರು ಹೇಳಿದಾಗ, ಆಗ ಮೂರನೇ ತರಗತಿಯಲ್ಲಿದ್ದ ರಾಮಾನುಜನ್ ಕೇಳಿದ ಪ್ರಶ್ನೆ ಸೊನ್ನೆಯನ್ನು ಸೊನ್ನೆಯಿಂದ ಭಾಗಿಸಿದರೆ ಸಿಗುವ ಉತ್ತರ ಎಷ್ಟು ಎಂಬುದಾಗಿತ್ತು.

1903: ಹೈಸ್ಕೂಲ್​ನಲ್ಲಿ ಕಲಿಯುತ್ತಿರುವಾಗ ಜಿ.ಎಸ್. ಕಾರ್ ಅವರ ‘ಎ ಸಿನೋಪ್ಸಿಸ್ ಆಫ್ ಎಲಿಮೆಂಟರಿ ರಿಸಲ್ಟ್ ಇನ್ ಪ್ಯೂರ್ ಮ್ಯಾಥಮೆಟಿಕ್ಸ್’‌ (synopsis of elementary results in pure mathematics) ಎಂಬ ಪುಸ್ತಕ ರಾಮಾನುಜನ್ ಅವರ ಕೈಗೆ ಸಿಕ್ಕಿತು. ಆ ಪುಸ್ತಕ ಅವರ ಮೇಲೆ ಬಹಳಷ್ಟು ಪ್ರಭಾವ ಬೀರಿತು. ಮೆಟ್ರಿಕ್ಯುಲೇಷನ್ ಪಾಸಾಗಿ ಕುಂಭಕೋಣದಲ್ಲಿರುವ ಸರ್ಕಾರಿ ಕಾಲೇಜಿಗೆ ಸೇರಿದರು. ಗಣಿತ ಬಿಟ್ಟು ಬೇರೆ ಯಾವುದೇ ವಿಷಯದಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ. ಸ್ಕಾಲರ್​ಶಿಪ್ ನಿಂತು ಹೋದಾಗ ರಾಮಾನುಜನ್ ಮನೆ ಬಿಟ್ಟು ಹೋಗಿದ್ದರು.

1906: ಮದ್ರಾಸ್​ನಲ್ಲಿರುವ ಪಚ್ಚಯಪ್ಪಾಸ್ ಕಾಲೇಜು ಸೇರಿದರೂ ಗಣಿತ ಬಿಟ್ಟು ಬೇರೆ ವಿಷಯದಲ್ಲಿ ಫೇಲಾದರು. ಹಾಗಾಗಿ ಮದ್ರಾಸ್ ವಿವಿಯಲ್ಲಿ ಪ್ರವೇಶ ಸಿಗಲಿಲ್ಲ. ಶಿಕ್ಷಣ ಮೊಟಕುಗೊಂಡ ನಂತರ ಮಕ್ಕಳಿಗೆ ಟ್ಯೂಷನ್ ನೀಡಿ ಸಂಪಾದನೆ ಮಾಡಿದರು.

1909: ಜಾನಕಿ ಜತೆ ಮದುವೆ. ಜವಾಬ್ದಾರಿಗಳೂ ಹೆಚ್ಚಿದ್ದರಿಂದ 1912 ರಲ್ಲಿ ಅವರು ಮದ್ರಾಸ್ ಅಕೌಂಟ್ಸ್ ಜನರಲ್ ಕಚೇರಿಯಲ್ಲಿ ಗುಮಾಸ್ತರಾದರು.

1913: ಖ್ಯಾತ ಗಣಿತಶಾಸ್ತ್ರಜ್ಞರಿಗೆ ತಾವು ಮಾಡಿದ ಅಧ್ಯಯನ, ಪ್ರಮೇಯಗಳನ್ನು ರಾಮಾನುಜನ್ ನಿಯಮಿತವಾಗಿ ಕಳಿಸಿಕೊಡುತ್ತಿದ್ದರು. ಅವರ ಪೈಕಿ ಕೆಲವರು ಮಾತ್ರ ರಾಮಾನುಜನ್ ಅವರಿಗೆ ಪ್ರತಿಕ್ರಿಯಿಸುತ್ತಿದ್ದರು. 1913ರಲ್ಲಿ ರಾಮಾನುಜನ್ ಅವರು ಬರೆದ ಪತ್ರಕ್ಕೆ ಕೇಂಬ್ರಿಡ್ಜ್ ವಿಶ್ವವಿದ್ಯಾಲದ ಪ್ರೊಫೆಸರ್ ಜಿ.ಎಚ್.ಹಾರ್ಡಿ ಉತ್ತರ ಬರೆದರು.

1914: ರಾಮಾನುಜನ್ ಅವರನ್ನು ಇಂಗ್ಲೆಂಡ್​ಗೆ ಕರೆತರಲು ಹಾರ್ಡಿ ಪ್ರಯತ್ನ ಮಾಡುತ್ತಲೇ ಇದ್ದರು. ರಾಮಾನುಜನ್ ಅವರು ಲಂಡನ್​ಗೆ ಹೋಗಲು ಒತ್ತಾಯಿಸಿದ್ದು ಗಣಿತಜ್ಞ ಇ.ಎಚ್.ನೆವೀಲ್. ಪ್ರಯಾಣದ ವೆಚ್ಚವನ್ನು ಮದ್ರಾಸ್ ವಿಶ್ವವಿದ್ಯಾಲಯ ವಹಿಸಿಕೊಂಡಿತ್ತು. ಸಮುದ್ರ ದಾಟಿ ಹೋಗುವುದಕ್ಕೆ ಅವರ ಬ್ರಾಹ್ಮಣ ಕುಟುಂಬ ಒಪ್ಪಲಿಲ್ಲ. ನಾಮಗಿರಿ ದೇವಿ ಕನಸಿನಲ್ಲಿ ಬಂದು ಅನುಮತಿ ನೀಡಿದ ನಂತರ ನಾನು ಹೊರಡಲು ಸಿದ್ಧತೆ ನಡೆಸಿದೆ ಎಂದು ರಾಮಾನುಜನ್ ಹೇಳಿದ್ದರು. 1914 ಏಪ್ರಿಲ್ 14 ರಂದು ಅವರು ಲಂಡನ್​ಗೆ ಬಂದರು.

1919: ಒಂದನೇ ಮಹಾಯುದ್ಧ ಮುಗಿದ ಮೇಲೆ ರಾಮಾನುಜನ್ ಊರಿಗೆ ಮರಳಿದರು. ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತು.

1920: ಅನಾರೋಗ್ಯದಿಂದ ಬಳಲುತ್ತಿದ್ದರೂ ರಾಮಾನುಜನ್ ಸಂಖ್ಯೆಗಳಿಂದ ಗಣಿತ ಮೋಹ ಕಡಿಮೆ ಮಾಡಿಕೊಳ್ಳಲಿಲ್ಲ. ಏಪ್ರಿಲ್ 26, 1920ರಂದು ಕುಂಬಕೋಣದಲ್ಲಿ ನಿಧನರಾದರು.

Source: tv9kannada