Narendra Modi: ಆ ಮಹಾತ್ಯಾಗ ಯಾವತ್ತೂ ಮರೆಯಲ್ಲ: ಪುಲ್ವಾಮ ಘಟನೆ ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ
Pulwama Attack Incident: 2019, ಫೆಬ್ರುವರಿ 14ರಂದು ಪುಲ್ವಾಮದಲ್ಲಿ ಸಂಭವಿಸಿದ ಉಗ್ರ ಆತ್ಮಹತ್ಯಾ ಬಾಂಬ್ ದಾಳಿ ಘಟನೆಯಲ್ಲಿ 40 ಸಿಆರ್ಪಿಎಫ್ ಯೋಧರು ಬಲಿಯಾಗಿದ್ದರು. ಆ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿ, ದೇಶ ಕಟ್ಟುವ ಸಂದೇಶ ನೀಡಿದ್ದಾರೆ.
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ (Pulwama) 4 ವರ್ಷಗಳ ಹಿಂದೆ ಇದೇ ದಿನ 40 ಮಂದಿ ಸಿಆರ್ಪಿಎಫ್ ಜವಾನರನ್ನು ಬಲಿತೆಗೆದುಕೊಂಡು ಉಗ್ರ ಆತ್ಮಹತ್ಯಾ ದಾಳಿ ಘಟನೆಯನ್ನು ಎಂದಾದರೂ ಮರೆಯಲು ಸಾಧ್ಯವಾ? ಪ್ರತೀ ವರ್ಷವೂ ಇಡೀ ದೇಶ ಈ ಘಟನೆಯನ್ನು ನೆನಪಿಸಿಕೊಂಡು ಕುದಿದುಹೋಗುತ್ತದೆ. 2019 ಫೆಬ್ರುವರಿ 14ರಂದು ನಡೆದ ಅಂದಿನ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಸ್ಮರಿಸಿದ್ದು, ಅಭಿವೃದ್ಧಿಯತ್ತ ದೇಶ ಸಾಗಲು ವೀರಯೋಧರ ಬಲಿದಾನ ಪ್ರೇರಣೆಯಾಗಲಿ ಎಂದಿದ್ದಾರೆ.
ಪುಲ್ವಾಮದಲ್ಲಿ ಈ ದಿನ ನಾವು ಕಳೆದುಕೊಂಡ ವೀರರನ್ನು ಸ್ಮರಿಸುತ್ತಿದ್ದೇನೆ. ಅವರ ಮಹಾ ಬಲಿದಾನವನ್ನು ನಾವ್ಯಾರೂ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಎದೆಗಾರಿಕೆಯು ಪ್ರಬಲ ಭಾರತದ ನಿರ್ಮಾಣಕ್ಕೆ ಪ್ರೇರಣೆ ನೀಡುತ್ತದೆ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
40 ಮಂದಿ ಬಲಿತೆಗೆದ ಆ ಘಟನೆ
ಕಾಶ್ಮೀರದ ದಕ್ಷಿಣ ಭಾಗದಲ್ಲಿರುವ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರನ್ನು ಹೊತ್ತು ರಸ್ತೆಯಲ್ಲಿ ಹೋಗುತ್ತಿದ್ದ ಟ್ರಕ್ಗೆ ಸ್ಫೋಟಕಗಳನ್ನು ತುಂಬಿದ್ದ ವಾಹನವೊಂದು ಢಿಕ್ಕಿ ಹೊಡೆದು ಸ್ಫೋಟಗೊಳಿಸಿತ್ತು. 22 ವರ್ಷದ ಕಾಶ್ಮೀರೀ ಯುವಕ ಅದಿಲ್ ಅಹ್ಮದ್ ದರ್ ಎಂಬಾತ ಈ ಕೃತ್ಯ ಎಸಗಿದ್ದು. ಘಟನೆ ಮರುದಿನ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿತ್ತು.
ಆ ಘಟನೆ ಭಾರತೀಯರನ್ನು ಆಕ್ರೋಶದ ಮಡುವಿಗೆ ನೂಕಿದ್ದು ಹೌದು. ಭಾರತೀಯ ಸೇನೆ ಕೋಪದಿಂದ ಬೆಂದುಹೋಗಿತ್ತು. ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆಯಿಂದ ಈ ಕೆಲಸ ಆಗಿದ್ದರೂ ಪಾಕಿಸ್ತಾನ ತಪ್ಪು ಒಪ್ಪಿಕೊಳ್ಳುವುದಿಲ್ಲ. ಭಾರತ ಸರ್ಕಾರ ಪಾಕಿಸ್ತಾನಕ್ಕೆ ನೀಡಿದ್ದ ಮೋಸ್ಟ್ ಫೇವರ್ಡ್ ನೇಶನ್ ಸ್ಥಾನಮಾನವನ್ನು ಹಿಂಪಡೆಯಿತು. ಅಷ್ಟಕ್ಕೆ ಭಾರತದ ಕೋಪ ತಣ್ಣಗಾಗಲಿಲ್ಲ. 2019, ಫೆಬ್ರುವರಿ 26, ಅಂದರೆ ಪುಲ್ವಾಮ ಘಟನೆಯಾಗಿ 12 ದಿನಗಳ ಬಳಿಕ ಪಾಕಿಸ್ತಾನಕ್ಕೆ ಭಾರತ ಅಚ್ಚರಿಯ ಆಘಾತ ಕೊಟ್ಟಿತು. ಅಂದು ಪಾಕಿಸ್ತಾನದ ಬಾಲಾಕೋಟ್ ಪ್ರದೇಶದ ಉಗ್ರರ ಶಿಬಿರದ ಮೇಲೆ ಭಾರತದಿಂದ ವೈಮಾನಿಕ ದಾಳಿಗಳಾದವು. ಬೆಳ್ಳಂಬೆಳಗ್ಗೆ ಎರಗಿ ಬಂದ ಭಾರತೀಯ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಲು ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಗೆ ಸಾಧ್ಯವಾಗಲಿಲ್ಲ.
ಆದರೆ, ಮರುದಿನ ಪಾಕಿಸ್ತಾನವು ಭಾರತದ ಗಡಿಭಾಗದಲ್ಲಿ ವೈಮಾನಿಕ ಸಂಘರ್ಷಕ್ಕೆ ಇಳಿಯಿತು. ಈ ವೇಳೆ ಭಾರತದ ಮಿಗ್-21 ಚಾಲಕ ಅಭಿನಂದನ್ ವರ್ದಮಾನ್ ಅಮೆರಿಕ ಮೂಲದ ಎಫ್-16 ಯುದ್ಧವಿಮಾನ ಹೊಡೆದುರುಳಿಸಿದರು. ಈ ವೇಳೆ ಅವರು ತಪ್ಪಿ ಪಾಕಿಸ್ತಾನದ ಭಾಗಕ್ಕೆ ಇಳಿದಿದ್ದರು. ಆಗ ಪಾಕಿಸ್ತಾನೀಯರು ಅಭಿನಂದನ್ರನ್ನು ವಶಕ್ಕೆ ತೆಗೆದುಕೊಂಡು, ಕೆಲ ದಿನಗಳ ಬಳಿಕ ಬಿಡುಗಡೆ ಮಾಡಿದರು. ಅಭಿನಂದನ್ ಅವರಿಗೆ ಮಾರ್ಚ್ ತಿಂಗಳಲ್ಲಿ ವೀರ್ ಚಕ್ರ ನೀಡಿ ಗೌರವಿಸಲಾಯಿತು.