Mysuru Mayor election; ಮೊದಲ ಬಾರಿಗೆ ಮೈಸೂರು ಮೇಯರ್ ಪಟ್ಟಕ್ಕೇರಿದ ಬಿಜೆಪಿ: ಮೇಯರ್ ಆಗಿ ಸುನಂದಾ ಪಾಲನೇತ್ರ ಆಯ್ಕೆ
ಮೈಸೂರು: ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಬಿಜೆಪಿಗೆ ಲಭಿಸಿದೆ. ಬಿಜೆಪಿಯ ಸುನಂದಾ ಪಾಲನೇತ್ರ ಆಯ್ಕೆಯಾಗಿದ್ದು ಮೇಯರ್ ಪಟ್ಟಕ್ಕೇರಿದ್ದಾರೆ. ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರ ಪರ 26 ಮತಗಳು ಲಭಿಸಿದ್ದು ಕಾಂಗ್ರೆಸ್ ಅಭ್ಯರ್ಥಿ ಶಾಂತಕುಮಾರಿ ಪರ 22 ಮತ ಚಲಾವಣೆಯಾಗಿದೆ.
25 ವರ್ಷಗಳಿಂದ ಪಾಲಿಕೆಯ ರಾಜಕಾರಣದಲ್ಲಿದ್ದೇನೆ. 5 ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ಇದು ನನ್ನ ಕೊನೆಯ ಚುನಾವಣೆ ಎಂದು ಮತದಾನದ ವೇಳೆ ಸುನಂದಾ ಪಾಲನೇತ್ರ ಹೇಳಿದ್ದರು. ಕಳೆದ ಬಾರಿ ಮೇಯರ್ ಎಲೆಕ್ಷನ್ ವೇಳೆಯೂ ಬಿಜೆಪಿಯಿಂದ ಸುನಂದಾ ಪಾಲನೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಇನ್ನು, ಬಿಜೆಪಿಯೂ ಈವರೆಗೆ ಒಮ್ಮೆಯೂ ಮೈಸೂರು ಮಹಾನಗರ ಪಾಲಿಕೆಯ ಗದ್ದುಗೆ ಏರಿರಲಿಲ್ಲ. ಆದ್ರೆ ಅದೃಷ್ಟವಶಾತ್ ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಬಿಜೆಪಿಗೆ ಲಭಿಸಿದೆ. ಸುನಂದಾ ಪಾಲನೇತ್ರ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಬಿಜೆಪಿಗೆ ಲಭಿಸಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಜೋರಾಗಿದೆ. ಮತ್ತೊಂದು ಕಡೆ ಕಾಂಗ್ರೆಸ್ಗೆ ದಿಕ್ಕಾರ ಕೂಗಿ ಜೆಡಿಎಸ್ ಸದಸ್ಯರು ಹೊರನಡೆದಿದ್ದಾರೆ. ಎಲ್ಲಾ ಅಧಿಕಾರ ನಮಗೆ ಬೇಕು ಎಂದು ಅಧಿಕಾರದ ಲಾಲಾಸೆ ಕಾಂಗ್ರೆಸ್ನದು. ಉಪಮೇಯರ್ ಇದ್ದರೂ ಎಲ್ಲವೂ ನಮಗೆ ಬೇಕು ಎಂದು ಕಾಂಗ್ರೆಸ್ ಹೇಳುತ್ತಾರೆ ಎಂದು ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಮೇಯರ್ಗೆ ಸಿಎಂ ಬೊಮ್ಮಾಯಿ ಅಭಿನಂದನೆ
ಮೈಸೂರು ಮೇಯರ್ ಸುನಂದಾ ಪಾಲನೇತ್ರಗೆ ಸಿಎಂ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ. ಬಹಳ ವರ್ಷಗಳ ನಂತರ ಮೊದಲ ಬಾರಿಗೆ ಬಿಜೆಪಿಗೆ ಮೈಸೂರು ಮೇಯರ್ ಪಟ್ಟ ಸಿಕ್ಕಿದೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಿಎಸ್ವೈ, ಸಿಎಂ ಬೊಮ್ಮಾಯಿಗೆ ಕೃತಜ್ಞತೆ ಸಲ್ಲಿಸುತ್ತೇನೆ
ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಗಿರುವ ಸುನಂದಾ ಸಂತಸ ಹಂಚಿಕೊಂಡಿದ್ದಾರೆ. ಮೇಯರ್ ಆಗಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ತುಂಬಾ ದಿನಗಳ ಬಳಿಕ ಬಿಜೆಪಿಗೆ ಅಧಿಕಾರ ಸಿಕ್ಕಿದೆ. ಕಳೆದ ಬಾರಿಯೇ ನಾನು ಮೇಯರ್ ಆಗಬೇಕಿತ್ತು, ಈಗ ಸಿಕ್ಕಿದೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಟಿವಿ9ಗೆ ಮೈಸೂರು ಮೇಯರ್ ಸುನಂದಾ ಪಾಲನೇತ್ರ ತಿಳಿಸಿದರು.
ಮೈಸೂರು ಮೇಯರ್ ಚುನಾವಣೆ ಘೋಷಣೆ ಬಳಿಕ ಮಹಿಳಾ ಸದಸ್ಯರ ನಡುವೆ ಪೈಪೋಟಿ ಗರಿಗೆದರಿತ್ತು. ಇದರ ನಡುವೆ ಬಿಜೆಪಿ ಹಿರಿಯ ಸದಸ್ಯೆ ಸುನಂದಾ ಪಾಲನೇತ್ರಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿತ್ತು. ಮೂರು ಬಾರಿ ಕಾರ್ಪೋರೇಟರ್ ಆಗಿರುವುದು ಹಾಗೂ ಬಿ.ಎಸ್. ಯಡಿಯೂರಪ್ಪ ಕುಟುಂಬದ ಸಂಬಂಧಿಕರು ಕೂಡ ಆಗಿದ್ದಾರೆ.
Source:tv9 Kannada