ಆಗಸ್ಟ್​ 27ರವರೆಗೂ ದೇಶದ ವಿವಿಧ ರಾಜ್ಯಗಳಲ್ಲಿ ವ್ಯಾಪಕ ಮಳೆ: ಭಾರತೀಯ ಹವಾಮಾನ ಇಲಾಖೆ ವರದಿ

Aug 25, 2021

ದೆಹಲಿ: ಆಗಸ್ಟ್​ 27ರವರೆಗೆ ದೇಶಾದ್ಯಂತ ಅನೇಕ ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ. ಅದರಲ್ಲೂ ಪಶ್ಚಿಮ ಬಂಗಾಳ, ಸಿಕ್ಕಿಂ, ಮೇಘಾಲಯ, ಅಸ್ಸಾಂ, ಬಿಹಾರ್​, ಉತ್ತರಾಖಂಡ್​, ಉತ್ತರಪ್ರದೇಶ, ಕೇರಳ, ತಮಿಳುನಾಡು ಪುದುಚೇರಿಗಳಲ್ಲಿ ಅಲ್ಲಲ್ಲಿ ಮಳೆಯಾಗಲಿದೆ ಎಂದು ಹವಾಮಾನ ವರದಿ ನೀಡಿದೆ.

ಆಗಸ್ಟ್​ 25ರಿಂದ ಮಾನ್ಸೂನ್​ ಹಿಮಾಲಯದ ತಪ್ಪಲುಗಳಲ್ಲಿ ಸಂಚರಿಸಲಿದ್ದು, 26ರವರೆಗೂ ಮುಂದುವರಿಯುತ್ತದೆ. ಹಾಗಾಗಿ, ಪ್ರಬಲ ಆಗ್ನೇಯ ಮತ್ತು ನೈಋತ್ಯ ಮಾರುತಗಳು ಬಂಗಾಳಕೊಲ್ಲಿಯಿಂದ ಈಶಾನ್ಯ ಭಾರತಕ್ಕೆ ಸಂಚಾರ ಮಾಡುತ್ತವೆ. ಈ ಕಾರಣದಿಂದ ಇಂದು ಮತ್ತು ನಾಳೆ (ಆಗಸ್ಟ್​ 25) ಮೇಘಾಲಯ-ಅಸ್ಸಾಂಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ. ಹಾಗೇ, ಈಶಾನ್ಯ ಭಾರತ ಮತ್ತು ಪಶ್ಚಿಮ ಬಂಗಾಳ, ಸಿಕ್ಕಿಂಗಳಲ್ಲಿ ಆಗಸ್ಟ್​ 27ರವರೆಗೂ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಐಎಂಡಿ ಹೇಳಿದೆ.

ಪೂರ್ವ ಭಾರತದಲ್ಲೂ ಕೂಡ ಮುಂದಿನ ಮೂರು ದಿನಗಳ ಕಾಲ ಗುಡುಗು-ಮಿಂಚು ಸಹಿತ ಮಳೆಯಾಗಬಹುದು. ಮುಂದಿನ 5 ದಿನಗಳ ಕಾಲ ವಾಯುವ್ಯ, ಮಧ್ಯ ಭಾರತ ಹಾಗೂ ಪಶ್ಚಿಮ ಕರಾವಳಿಯಲ್ಲಿ ಮಳೆ ಕಡಿಮೆಯಾಗಲಿದೆ ಎಂದೂ ಐಎಂಡಿ ವರದಿ ಮಾಡಿದೆ.

Source:tv9 Kannada