Mysuru Dasara 2021: ನಾಳೆ ಚಾಮುಂಡಿಬೆಟ್ಟದಲ್ಲಿ ನಾಡಹಬ್ಬಕ್ಕೆ ಚಾಲನೆ, ಇಂದೇ ಮೈಸೂರಿನತ್ತ ಹೊರಟ ಸಿಎಂ ಬಸವರಾಜ ಬೊಮ್ಮಯಿ, ಎಸ್.ಎಂ ಕೃಷ್ಣ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ನಾಳೆ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿ ಚಾಮುಂಡಿಬೆಟ್ಟದಲ್ಲಿ ನಾಡಹಬ್ಬಕ್ಕೆ ಚಾಲನೆ ಸಿಗಲಿದ್ದು ಸಿಎಂ ಬಸವರಾಜ ಬೊಮ್ಮಯಿ ಸೇರಿದಂತೆ ಹಲವು ಗಣ್ಯರು ದಸರಾ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.
ಕೊರೊನಾ ಮಹಾಮಾರಿಯ ಆತಂಕದಿಂದ ಈ ಬಾರಿಯೂ ಸಹ ಸರಳವಾಗಿ ದಸರಾ ಆಚರಿಸಲಾಗ್ತಿದೆ. ನಾಳೆ ನಾಡಹಬ್ಬ ದಸರಾಗೆ ಚಾಲನೆ ಸಿಗಲಿದೆ. ಹಾಗಾಗಿ ಒಂದು ದಿನ ಮುಂಚಿತವಾಗಿ ಅಂದ್ರೆ ಇಂದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿಗೆ ತೆರಳ್ತಾಯಿದ್ದಾರೆ.
ಕೆಆರ್‌ಎಸ್‌ನಲ್ಲಿಂದು ಸಿಎಂ ಬಸವರಾಜ ಬೊಮ್ಮಾಯಿ ವಾಸ್ತವ್ಯ
ಅಂದಹಾಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಲಿದ್ದಾರೆ. ಮೊದಲಿಗೆ ಶಾಸಕ ಎಸ್.ಎ ರಾಮದಾಸ್ ಆಯೋಜಿಸಿರುವ ಮೋದಿ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಂತರ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ಗೆ ತೆರಳಿ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ದಸರಾ ಮಹೋತ್ಸವಕ್ಕೆ ಕೌಂಟ್‌ಡೌನ್
ನಾಳೆ ಬೆಳಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಕೆಆರ್‌ಎಸ್‌ನಿಂದ ನೇರವಾಗಿ ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ನಾಳೆ ಬೆಳಗ್ಗೆ 7.45ಕ್ಕೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು, 8.15ಕ್ಕೆ ನಾಡಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ನಂತರ ನಾಳೆ ಬೆಳಗ್ಗೆ 10.40ಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಸ್ವಾಗತಿಸಲಿದ್ದಾರೆ. ನಂತರ ರಾಷ್ಟ್ರಪತಿಗಳ ಜೊತೆ ಚಾಮರಾಜನಗರಕ್ಕೆ ತೆರಳಲಿರುವ ಸಿಎಂ, ಚಾಮರಾಜನಗರ ವೈದ್ಯಕೀಯ ಕಾಲೇಜು & ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಚಾಮರಾಜನಗರದಿಂದ ಮತ್ತೆ ಮೈಸೂರಿಗೆ ಹಿಂತಿರುಗಲಿದ್ದಾರೆ. ರಾತ್ರಿ ಮೈಸೂರು ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇನ್ನು ಮಾಜಿ ಸಿಎಂ ಎಸ್.ಎಂ ಕೃಷ್ಣ ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟನೆ ಮಾಡಲಿದ್ದು, ಅವರು ಸಹ ಇಂದೇ ಕುಟುಂಬ ಸಮೇತ ಮೈಸೂರಿಗೆ ಆಗಮಿಸಲಿದ್ದಾರೆ. ನಾಳೆ ತಾಯಿ ಚಾಮುಂಡೇಶ್ಬರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ದಸರಾ ಉದ್ಘಾಟನೆ ಮಾಡಲಿದ್ದಾರೆ. ನಂತ್ರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ನಂತರ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಒಟ್ನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಕೌಂಟ್‌ಡೌನ್ ಶುರುವಾಗಿದ್ದು ಗಣ್ಯಾತಿಗಣ್ಯರು ಸಾಂಸ್ಕೃತಿಕ ನಗರಿ ಮೈಸೂರಿಲ್ಲಿ ಬೀಡುಬಿಟ್ಟು ಸರಳಾ ದಸರಾದಲ್ಲಿ ಭಾಗಿಯಾಗಲಿದ್ದಾರೆ.
Source:tv9kannada