Mahatma Gandhi: ಮಹಾತ್ಮ ಗಾಂಧಿಗೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಲು ನಿರ್ಣಯ ಮಂಡನೆ
ನವದೆಹಲಿ: ಶಾಂತಿ, ಅಹಿಂಸೆಯ ಪ್ರತಿಪಾದಕರಾದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಮರಣೋತ್ತರವಾಗಿ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂಬ ನಿರ್ಣಯವನ್ನು ನ್ಯೂಯಾರ್ಕ್ನ ಸಂಸದ ಅಮೆರಿಕದ ಸದನದಲ್ಲಿ (US House of Representatives) ಮರು ಮಂಡನೆ ಮಾಡಿದ್ದಾರೆ. ಒಂದುವೇಳೆ ಗಾಂಧೀಜಿ ಅವರಿಗೆ ಅಮೆರಿಕದ ಅತ್ಯುನ್ನತ ಗೌರವವಾದ ಚಿನ್ನದ ಪದಕ ಪ್ರದಾನ ಮಾಡುವುದಾಗಿ ಘೋಷಿಸಿದರೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತೀಯ ಎಂಬ ಕೀರ್ತಿಗೆ ಮಹಾತ್ಮ ಗಾಂಧಿ ಪಾತ್ರರಾಗಲಿದ್ದಾರೆ.
ಇದುವರೆಗೂ ಜಾರ್ಜ್ ವಾಷಿಂಗ್ಟನ್, ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಮದರ್ ತೆರೆಸಾ, ರೋಸಾ ಪಾರ್ಕ್ಸ್ ಅವರಿಗೆ ಮರಣೋತ್ತರವಾಗಿ ಅಮೆರಿಕದ ಅತ್ಯುನ್ನತ ಗೌರವವಾದ ಈ ಚಿನ್ನದ ಪದಕ ನೀಡಿ ಗೌರವಿಸಲಾಗಿದೆ. ಸತ್ಯಾಗ್ರಹ, ಅಹಿಂಸಾವಾದದ ಮೂಲಕ ಇಡೀ ಪ್ರಪಂಚದಾದ್ಯಂತ ಪ್ರಭಾವ ಬೀರಿರುವ ಮಹಾತ್ಮ ಗಾಂಧಿ ಅವರಿಗೂ ಅಮೆರಿಕದ ಅತ್ಯುನ್ನತ ಗೌರವವಾದ ಚಿನ್ನದ ಪದಕ ಘೋಷಿಸಬೇಕು ಎಂದು ಅಮೆರಿಕದ ಸದನದಲ್ಲಿ ಚರ್ಚಿಸಲಾಗಿದೆ.
ಅಮೆರಿಕದ ಕಾಂಗ್ರೆಸ್ ಪ್ರತಿನಿಧಿಯಾಗಿರುವ ಕ್ಯಾರೊಲಿನ್ ಬಿ ಈ ಕುರಿತು ಮರುಮಂಡನೆ ಮಾಡಿದ್ದಾರೆ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಜನಾಂಗೀಯ ಸಮಾನತೆಗಾಗಿ, ನೆಲ್ಸನ್ ಮಂಡೇಲಾ ಅವರ ವರ್ಣಭೇದ ನೀತಿಯ ವಿರುದ್ಧದ ಹೋರಾಟದಿಂದ ಅವರ ಪರಂಪರೆ ವಿಶ್ವದಾದ್ಯಂತ ನಾಗರಿಕ ಹಕ್ಕುಗಳ ಚಳುವಳಿಗಳಿಗೆ ಸ್ಫೂರ್ತಿ ನೀಡಿತು. ಒಬ್ಬ ಸಾರ್ವಜನಿಕ ಸೇವಕನಾಗಿ, ನಾನು ಅವರ ಧೈರ್ಯ ಮತ್ತು ಉದಾಹರಣೆಯಿಂದ ಪ್ರತಿದಿನ ಸ್ಫೂರ್ತಿ ಪಡೆಯುತ್ತೇನೆ ಎಂದಿದ್ದಾರೆ.
ಮಹಾತ್ಮ ಗಾಂಧೀಜಿ ವರ್ಣಭೇದ ನೀತಿ ವಿರುದ್ಧ ಹೋರಾಡಿ, ಸತ್ಯಾಗ್ರಹದ ಮೂಲಕ ಬ್ರಿಟಿಷರನ್ನು ಮಣಿಸಿ, ಅಹಿಂಸೆಯ ಬೋಧನೆ ಮಾಡಿ ಇಡೀ ವಿಶ್ವಾದ್ಯಂತ ಪ್ರಭಾವ ಬೀರಿದ್ದಾರೆ. ಈ ಜಗತ್ತಿನಲ್ಲಿ ಏನಾದರೂ ಬದಲಾವಣೆಯಾಗಬೇಕೆಂದರೆ ಅದು ನಿಮ್ಮಿಂದಲೇ ಪ್ರಾರಂಭವಾಗಲಿ ಎಂಬ ಗಾಂಧೀಜಿಯವರ ಮಾತನ್ನು ನಾವೆಲ್ಲರೂ ಪಾಲಿಸೋಣ ಎಂದು ಮೆಲೊನಿ ಹೇಳಿದ್ದಾರೆ.
Source: tv9 kannada