Krishna Janmashtami 2021: ಕೃಷ್ಣ ಜನ್ಮಾಷ್ಟಮಿ ವಿಶೇಷ: ತುಂಟ ಬಾಲಕ, ಕೊಳಲು ವಾದಕ, ಪ್ರೇಮಿ ಯುವಕ, ರಾಜತಂತ್ರ ನಿಪುಣ, ಧರ್ಮ ರಕ್ಷಕ ಶ್ರೀಕೃಷ್ಣ
ಶ್ರೀಕೃಷ್ಣ -ಮಹಾಭಾರತದುದ್ದಕ್ಕೂ ಕೇಳಿ ಬರುವ ಪ್ರಮುಖ ಹೆಸರಿದು. ಮಹಾಭಾರತದ ನಾಯಕ ಯಾರು ಅನ್ನುವ ಪ್ರಶ್ನೆ ಏನಾದರೂ ಬಂದರೆ ಅದಕ್ಕೆ ಸರಿಯಾದ ಉತ್ತರ ಕೃಷ್ಣ ಅಂದರೆ ತಪ್ಪಾಗಲಾರದು. ಮಕ್ಕಳಿಂದ ವೃದ್ಧರವರೆಗೆ ಶ್ರೀಕೃಷ್ಣ ಎಲ್ಲರಿಗೂ ಅಚ್ಚುಮೆಚ್ಚು. ಮಹಾಭಾರತದಲ್ಲಿ ಕೃಷ್ಣ ಬೆಣ್ಣೆ ಕಳ್ಳನಾಗಿ, ಯುವತಿಯರ ಹೃದಯ ಚೋರನಾಗಿ, ಮಹಿಳೆಯರ ಕಣ್ಮಣಿಯಾಗಿ, ಯುವಕರ ಆದರ್ಶ ಪುರುಷನಾಗಿ, ದೀನರ ದೈವವಾಗಿ, ಪಂಡಿತರ ಪಾಲಿಗೆ ಜ್ಞಾನಿಯಾಗಿ ಕಂಡು ಬರುತ್ತಾನೆ. ಮಹಾಭಾರತದುದ್ದಕ್ಕೂ ತಾನು ಜನಿಸಿದ್ದು ಧರ್ಮ ರಕ್ಷಣೆಗೆ ಅಂತಲೇ ಹೇಳುತ್ತಾ ಹೋಗುವ ಕೃಷ್ಣ, ಧರ್ಮ ರಕ್ಷಣೆಯ ಜೊತೆಗೆ ಅನೇಕ ಕಾರ್ಯಗಳನ್ನು ಕೂಡ ಮಾಡುತ್ತಾನೆ. ತುಂಟತನ, ಪ್ರೀತಿ, ಕರುಣೆ, ಗಡಸುತನ, ಹಠ, ಧರ್ಮ, ಜ್ಞಾನ – ಎಲ್ಲ ಮೇಳೈಸಿರುವ ಏಕೈಕ ವ್ಯಕ್ತಿತ್ವವೆಂದರೆ ಅದು ಕೃಷ್ಣ ಮಾತ್ರ. ಇಂಥ ಕೃಷ್ಣನ ಜನ್ಮಾಷ್ಟಮಿ ಬಂದರೆ ಸಾಕು ಆತನ ಭಕ್ತರು, ಅನುಯಾಯಿಗಳು ಸಂತಸದ ಕ್ಷಣ. ಕೃಷ್ಣನೆಂಬ ಬಾಲಕನೊಬ್ಬ ನಾಯಕನಾಗಿ, ನಾಯಕನೊಬ್ಬ ದೇವರಾಗಿ ಬೆಳೆದ ವಿಭಿನ್ನ- ಅನನ್ಯ ಕಥೆಯನ್ನು ಅಷ್ಟೇ ನವಿರಾಗಿ ಬರೆದಿದ್ದಾರೆ ಟಿವಿ9 ಕನ್ನಡದ ಧಾರವಾಡ ವರದಿಗಾರ ನರಸಿಂಹಮೂರ್ತಿ ಪ್ಯಾಟಿ. ಓದಿ, ಕೃಷ್ಣನ ಲೋಕದಲ್ಲಿ ನೀವೂ ಮಿಂದೇಳಿ.
ಕೃಷ್ಣ ಬೃಂದಾವನದಿಂದ ಮಧುರೆಗೆ ಹೋಗುತ್ತಿರುವ ಸಂದರ್ಭ. ಗೋಪಿಕಾ ಸ್ತ್ರೀಯರು ಬಂದು ಕೃಷ್ಣನ ಬಳಿ ಕಣ್ಣೀರಿಡುತ್ತಾರೆ. ಮಧುರೆಯಿಂದ ಮರಳಿ ಯಾವಾಗ ಬರುತ್ತೀ? ಅಂತಾ ಕೇಳುತ್ತಾರೆ. ಆಗ ಕೃಷ್ಣನಿಗೆ ಕೇವಲ 14 ವರ್ಷ. ಕೃಷ್ಣ ನಾಳೆಯೇ ಮರಳುವುದಾಗಿ ನಸುನಗುತ್ತಾ ಹೇಳುತ್ತಾನೆ. ಅದುವರೆಗೂ ತನ್ನ ಬಾಲ್ಯವನ್ನೆಲ್ಲಾ ಅವರೊಂದಿಗೆ ಕಳೆದಿದ್ದ ಕೃಷ್ಣ, ಮಧುರೆಗೆ ಹೋಗುವಾಗ ಕೊಂಚವೂ ವಿಚಲಿತನಾಗುವುದಿಲ್ಲ. ಕೊಂಚವೂ ನೋವನ್ನು ತೋರ್ಪಡಿಸುವುದಿಲ್ಲ. ತನ್ನಿಷ್ಟದ ಅಷ್ಟೂ ಜನರನ್ನು, ತಾನೇ ಕಟ್ಟಿದ ವೃಂದಾವನವನ್ನು ಬಿಟ್ಟು ಹೊರಡುವಾಗ ಭಾವನಾತೀತನಾಗಿದ್ದ ಅಂತಾ ಅನೇಕ ಕಡೆಗಳಲ್ಲಿ ಉಲ್ಲೇಖಿಸಲಾಗಿದೆ. ಕೃಷ್ಣನ ಮನಸ್ಸೇ ಅಂಥದ್ದು. ಯಾರನ್ನೂ, ಯಾವುದನ್ನೂ ಬಿಟ್ಟುಕೊಡುವುದಿಲ್ಲ. ಹಾಗಂತ ಯಾವುದನ್ನೂ ಹೆಚ್ಚು ಹಚ್ಚಿಕೊಳ್ಳುವುದಿಲ್ಲ. ಬಿಟ್ಟುಕೊಟ್ಟರೂ ಕಷ್ಟ, ಹಚ್ಚಿಕೊಂಡರೂ ಕಷ್ಟವೇ. ಇದಕ್ಕೆಲ್ಲಾ ಕಾರಣ ಕೃಷ್ಣನಿಗೆ ತನ್ನ ಮೇಲಿರುವ ಜವಾಬ್ದಾರಿಯ ಅರಿವು. ಅರಿವೇ ಗುರುವಾದಾಗ ಮಾತ್ರ ಇಂಥ ಮನಸ್ಥಿತಿ ಬರಲು ಸಾಧ್ಯವೇನೋ? ಕೃಷ್ಣ ಕ್ರೂರಿ ಕಂಸನ ಆಹ್ವಾನದ ಮೇರೆಗೆ ಮಧುರೆಗೆ ಹೋಗುತ್ತಿದ್ದಾನೆ. ಅದಾಗಲೇ ಪೂತನಿ ಬಂದು ಕೃಷ್ಣನ ಕೊಲೆಗೆ ಯತ್ನಿಸಿ ಸೋತಿದ್ದಾಗಿತ್ತು. ಕಂಸ ಮತ್ತೆ ಯಾವ ಕುಟಿಲ ತಂತ್ರ ಹೆಣೆದಿದ್ದಾನೋ? ಕೃಷ್ಣನ ಜೀವಕ್ಕೆ ಆಪತ್ತು ಎದುರಾದರೆ? ಎಲ್ಲರಿಗೂ ಆತಂಕ. ಆ ಆತಂಕ ಕೃಷ್ಣನಿಗೆ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ತನ್ನವರ ಆತಂಕವೇನು ಅನ್ನುವುದನ್ನು ಕೃಷ್ಣ ಅರಿತಿದ್ದ. ಆತಂಕಗಳನ್ನು ನಸುನಗುತ್ತಲೇ ಎದುರಿಸುವ ಮನೋಭಾವನೆ ಕೃಷ್ಣನಿಗೆ ಅಷ್ಟು ಸಣ್ಣ ವಯಸ್ಸಿನಲ್ಲಿಯೇ ರೂಢಿಯಾಗಿ ಹೋಗಿತ್ತು. ತಾನೇ ನಿಂತು ವೃಂದಾವನವನ್ನು ನಿರ್ಮಿಸಿದ್ದ ಕೃಷ್ಣ, ಇದೀಗ ತನ್ನ ಪ್ರೀತಿಯ ಬೃಂದಾವನ, ತನ್ನವರನ್ನು ಬಿಟ್ಟು ಕಂಸನ ಆಹ್ವಾನದ ಮೇರೆಗೆ ಮಧುರೆಗೆ ಹೋಗಲು ಸಿದ್ಧನಾಗಿದ್ದ. ಆತನನ್ನು ಕಳಿಸಲು ಸಿದ್ಧರಿರದ ಗೋಪಿಕಾ ಸ್ತ್ರೀಯರು ಮತ್ತೆ ಯಾವತ್ತು ಮರಳಿ ಬರುತ್ತೀ? ಅಂತಾ ಕಣ್ಣು ತುಂಬಿಕೊಂಡಿದ್ದರು. ಮುಗುಳ್ನಗುತ್ತಲೇ ಅವರನ್ನು ಸಮಾಧಾನಪಡಿಸಿದ ಕೃಷ್ಣ ನಾಳೆಯೇ ಮರಳಿ ಬರುವುದಾಗಿ ಹೇಳುತ್ತಾನೆ. ಮಧುರೆಗೆ ಹೋಗಿದ್ದೂ ಆಯಿತು, ಸೋದರ ಮಾವ ಕಂಸನನ್ನು ಕೊಂದಿದ್ದೂ ಆಯಿತು, ಅದಾದ ಬಳಿಕ ಮಹಾಭಾರತ ಯುದ್ಧದಲ್ಲಿ ಪಾಂಡವರ ಪರ ನಿಂತು ಯುದ್ದ ಗೆಲ್ಲಿಸಿಕೊಟ್ಟಿದ್ದೂ ಆಯಿತು. ಆದರೆ ನಾಳೆಯೇ ಮರಳುವುದಾಗಿ ಹೇಳಿ ಹೋಗಿದ್ದ ಕೃಷ್ಣ ತನ್ನ ಪ್ರೀತಿಯ ವೃಂದಾವನಕ್ಕೆ ಮರಳಿ ಬಂದಿದ್ದು ನಾಲ್ಕು ದಶಕಗಳ ನಂತರವೇ! ಆತ ಮರಳಿ ಬಂದಿದ್ದರ ಬಗ್ಗೆ ಒಬ್ಬೊಬ್ಬರು ಒಂದೊಂದು ವರ್ಷವನ್ನು ಹೇಳಿದ್ದಾರೆ. ಎಲ್ಲ ಲೆಕ್ಕಾಚಾರಗಳನ್ನು ಪರಿಗಣಿಸಿ ನೋಡಿದಾಗ ಕೃಷ್ಣ ಮರಳಿ ಬಂದಿದ್ದು ನಾಲ್ಕು ದಶಕಗಳ ಬಳಿಕ ಅನ್ನುವುದು ಸ್ಪಷ್ಟವಾಗಿ ತಿಳಿದು ಬರುವ ಅಂಶ. ಈ ಘಟನೆಯಿಂದ ಕೃಷ್ಣನಿಗೆ ತನ್ನ ಜವಾಬ್ದಾರಿ ಏನಿತ್ತು? ಅದರ ಗಂಭೀರತೆ ಎಷ್ಟಿತ್ತು ಅನ್ನುವುದು ತಿಳಿದುಬರುತ್ತದೆ.
ಮಧುರೆಗೆ ಹೋಗಿ ಕಂಸನನ್ನು ಕೊಂದ ಬಳಿಕ ಕೃಷ್ಣ ಅಣ್ಣ ಬಲರಾಮನೊಂದಿಗೆ ಪರಾರಿಯಾಗಿ ಬಿಡುತ್ತಾನೆ. ಆತನ ಈ ವರ್ತನೆ ಅಪಹಾಸ್ಯಕ್ಕೂ ಗುರಿಯಾಗುತ್ತದೆ. ಆದರೆ ಕೃಷ್ಣ ಒಬ್ಬ ಪಕ್ಕಾ ರಾಜತಾಂತ್ರಿಕ, ದೂರದೃಷ್ಟಿಯುಳ್ಳವನೂ ಆಗಿದ್ದ ಅನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕಂಸನ ಮಾವ ಜರಾಸಂಧ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕಂಸನಿಗೆ ಧಾರೆಯೆರೆದಿದ್ದ. ಕಂಸನ ಸಾವಿನಿಂದಾಗಿ ಒಮ್ಮೆಲೇ ಇಬ್ಬರೂ ಮಕ್ಕಳು ವಿಧವೆಯರಾಗಿದ್ದು ಆತನನ್ನು ಕೆರಳಿಸಿತ್ತು. ಇದರಿಂದಾಗಿ ಆತ ಯಾವ ಕ್ಷಣದಲ್ಲಾದರೂ ಕೃಷ್ಣ ಹಾಗೂ ಯಾದವರ ಮೇಲೆ ದಾಳಿ ಮಾಡುವ ಸಾಧ್ಯತೆ ಇತ್ತು. ಇದನ್ನು ಮನಗಂಡ ಕೃಷ್ಣ ಯಾದವರನ್ನು ಉಳಿಸಲು ಇಂಥದ್ದೊಂದು ತಂತ್ರವನ್ನು ಮಾಡಿದ್ದ. ಕೃಷ್ಣ ಹೆದರಿ ಓಡಿಹೋದ ಅನ್ನುವುದೇ ಜರಾಸಂಧನಿಗೆ ಆ ವೇಳೆಗೆ ಸಿಗುವ ಸಮಾಧಾನವಾಗಿತ್ತು. ಆತನ ಅಹಂಕಾರವನ್ನು ತಣಿಸಲು ಈ ತಂತ್ರ ಅವಶ್ಯಕವಾಗಿತ್ತು. ಇದು ಕೃಷ್ಣನಿಗೆ ಗೊತ್ತಿತ್ತು. ಒಂದು ವೇಳೆ ಕೃಷ್ಣ ಅಲ್ಲಿಯೇ ಇದ್ದರೆ ಕೃಷ್ಣನನ್ನು ಹುಡುಕುತ್ತಾ, ಯಾದವರನ್ನೆಲ್ಲಾ ಜರಾಸಂಧ ಕೊಂದು ಹಾಕುತ್ತಿದ್ದ. ಆದರೆ ಕೃಷ್ಣ ಅಲ್ಲಿಂದ ಪರಾರಿಯಾಗಿದ್ದರಿಂದ ಆತನನ್ನು ಹುಡುಕುವುದರಲ್ಲಿ ಹಾಗೂ ಆತ ಹೆದರಿ ಓಡಿ ಹೋದ ಅನ್ನುವ ಅಹಂನಲ್ಲಿ ಜರಾಸಂಧ ಯಾದವರ ತಂಟೆಗೆ ಹೋಗಲೇ ಇಲ್ಲ. ಇಲ್ಲಿ ಕೃಷ್ಣ ಜರಾಸಂಧನ ಅಹಂಕಾರದೊಂದಿಗೂ ಆಟವಾಡಿದ್ದ.
ಕೃಷ್ಣನ ಈ ಆಟ ಇಲ್ಲಿಗೇ ಮುಗಿಯುವುದಿಲ್ಲ. ಕಂಸನ ಸಂಹಾರದ ಬಳಿಕ ಕೃಷ್ಣ-ಬಲರಾಮರು ಮಧುರೆಯಿಂದ ಗೋಮಾಂತಕ ಪರ್ವತಕ್ಕೆ ಹೋಗುತ್ತಾರೆ. ಆ ಪ್ರದೇಶದಲ್ಲಿ ಬುಡಕಟ್ಟು ಜನಾಂಗದ ಗರುಡರು ವಾಸವಾಗಿದ್ದರು. ತಮ್ಮ ದೇವರು ವಿಷ್ಣುವಿನ ಗರುಡ. ತಾವು ಅದೇ ವಂಶಸ್ಥರು ಅನ್ನುವ ನಂಬಿಕೆಯುಳ್ಳವರು. ಗರುಡರ ಬಳಿ ಹೋದ ಕೃಷ್ಣ, ತನ್ನ ಪರಿಚಯ ಮಾಡಿಕೊಳ್ಳುತ್ತಾನೆ. ಕಂಸನನ್ನು ಕೊಂದ ವೀರ ಅನ್ನುವುದು ಅಷ್ಟೊತ್ತಿಗಾಗಲೇ ಅವರ ಅರಿವಿಗೂ ಬಂದಿರುತ್ತದೆ. ಹೀಗಾಗಿ ಕೃಷ್ಣ ಅವರ ಪಾಲಿಗೆ ವೀರನಷ್ಟೇ ಅಲ್ಲದೇ ದೇವರಂತೆಯೂ ಕಾಣುತ್ತಾನೆ. ಈ ಜನರ ಬಳಿ ಇದ್ದ ವಿಶೇಷ ಬುದ್ಧಿವಂತಿಕೆ, ಗುಡ್ಡ-ಬೆಟ್ಟಗಳನ್ನು ಹತ್ತುವ ಕಲೆಯನ್ನು ಗುರುತಿಸಿ, ಅಲ್ಲೊಂದು ಯೋಧರ ಪಡೆಯನ್ನೇ ನಿರ್ಮಾಣ ಮಾಡುತ್ತಾನೆ. ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವಂತೆ ತರಬೇತಿ ನೀಡುತ್ತಾನೆ. ಇದೇ ಪ್ರದೇಶದಲ್ಲಿಯೇ ಕೃಷ್ಣ ತನ್ನ ಸುದರ್ಶನ ಚಕ್ರವನ್ನು ತಯಾರಿಸಿಕೊಳ್ಳುತ್ತಾನೆ. ಈ ಪ್ರದೇಶದಲ್ಲಿನ ಒಂದು ವಿಚಿತ್ರ ಬಗೆಯ ಲೋಹದಿಂದ ಆತ ಸುದರ್ಶನ ಚಕ್ರವನ್ನು ತಯಾರಿಸುತ್ತಾನೆ. ಕೃಷ್ಣನಿಗೆ ಇಂದಿಲ್ಲ ನಾಳೆ ಜರಾಸಂಧ ಹಾಗೂ ತನ್ನ ವಿರೋಧಿಗಳು ತನ್ನನ್ನು ಹುಡುಕಿಕೊಂಡು ಇಲ್ಲಿಗೂ ಬರುತ್ತಾರೆ ಅನ್ನುವುದು ಗೊತ್ತಿತ್ತು. ಅದಕ್ಕಾಗಿ ಗೋಮಾಂತಕಕ್ಕೆ ಹೋದಾಗಿನಿಂದ ಮುಂಬರುವ ಸಂಕಷ್ಟಗಳನ್ನು ಎದುರಿಸಲು ಸಿದ್ಧನಾಗಿಯೇ ಇರುತ್ತಾನೆ. ಅಲ್ಲದೇ ಆತ ಮುಂಬರುವ ಆತಂಕಗಳನ್ನು ಊಹಿಸಿಯೂ ಇದ್ದ. ಕೃಷ್ಣ ಅಲ್ಲಿರುವ ಮಾಹಿತಿ ಪಡೆಯುವ ಜರಾಸಂಧ ಅಲ್ಲಿಗೆ ದಾಳಿ ಮಾಡುತ್ತಾನೆ. ಆಗ ಕೃಷ್ಣ-ಬಲರಾಮನ ನೇತ್ರತ್ವದಲ್ಲಿ ನಡೆದ ಯುದ್ಧದಲ್ಲಿ ಜರಾಸಂಧ ಸೋತು ಮರಳಿ ಹೋಗುತ್ತಾನೆ. ಈ ಯುದ್ಧದಲ್ಲಿ ಕೃಷ್ಣ ಗರುಡರ ಸೇನೆಯನ್ನು ಬಳಸಿಕೊಳ್ಳುತ್ತಾನೆ. ಮುಂದೆ ಬರಬಹುದಾದ ಸಮಸ್ಯೆಗಳನ್ನು ಎದುರಿಸುವ ವಿಚಾರದಲ್ಲಿ ಕೃಷ್ಣನಷ್ಟು ವೇಗವಾಗಿ ಯೋಚಿಸುವವರು ಆ ಕಾಲದಲ್ಲಿ ಯಾರು ಇರಲಿಲ್ಲ ಅನ್ನುವುದಕ್ಕೆ ಈ ಪ್ರಕರಣ ಸಾಕ್ಷಿ.
ಧರ್ಮ, ಅರ್ಥ, ಕಾಮ – ಇವುಗಳಲ್ಲಿ ಯಾವುದು ಶ್ರೇಷ್ಠ?
ಒಮ್ಮೆ ಪಾಂಡವರು ಕೃಷ್ಣನೊಂದಿಗೆ ಹರಟುತ್ತಾ ಕೂತಿದ್ದರು. ಕೃಷ್ಣ ಎಲ್ಲರಿಗೂ ಒಂದು ಪ್ರಶ್ನೆಯನ್ನು ಕೇಳುತ್ತಾನೆ. ಧರ್ಮ, ಅರ್ಥ, ಕಾಮ-ಇವುಗಳಲ್ಲಿ ಯಾವುದು ಶ್ರೇಷ್ಠ? ಎಂದಿನಂತೆ ಧರ್ಮರಾಯ ಧರ್ಮ ಅನ್ನುತ್ತಾನೆ. ಧರ್ಮವೇ ಎಲ್ಲಕ್ಕಿಂತ ಶ್ರೇಷ್ಠ. ಧರ್ಮದಿಂದಲೇ ಜಗತ್ತು ನೆಮ್ಮದಿಯಿಂದ ಬದುಕಬಲ್ಲದು. ಎಲ್ಲರಿಗೂ ಧರ್ಮದಿಂದಲೇ ಮುಕ್ತಿ ಸಿಗುತ್ತದೆ ಅಂತಾ ತನ್ನ ವಾದವನ್ನು ಮಂಡಿಸುತ್ತಾನೆ. ಬಳಿಕ ಕೃಷ್ಣ ಅರ್ಜುನನ ಕಡೆಗೆ ತಿರುಗುತ್ತಾನೆ. ಆರ್ಥಿಕ ತಜ್ಞ ಅರ್ಜುನ, ಅರ್ಥವೇ ಶ್ರೇಷ್ಠ ಅನ್ನುತ್ತಾನೆ. ಜಗತ್ತಿನಲ್ಲಿ ಎಲ್ಲದಕ್ಕೂ ಮುಖ್ಯವಾಗಿದ್ದು ಅರ್ಥ. ಹಣವಿಲ್ಲದೇ ಇದ್ದರೆ ಏನನ್ನೂ ಮಾಡಲು ಆಗದು. ಹೀಗಾಗಿ ಅರ್ಥವೇ ಬಹಳ ಮುಖ್ಯ ಅನ್ನುತ್ತಾನೆ. ಕೃಷ್ಣ ಮುಗುಳ್ನಗುತ್ತಾ ಭೀಮಸೇನನ ಕಡೆಗೆ ತಿರುಗುತ್ತಾನೆ. ಭೀಮಸೇನ ಗಟ್ಟಿ ದನಿಯಲ್ಲಿ ಎಲ್ಲಕ್ಕಿಂತ ಶ್ರೇಷ್ಠವೆಂದರೆ ಕಾಮ ಅಂತಾ ಹೇಳುತ್ತಾನೆ. ಭೀಮನ ಮಾತಿಗೆ ಧರ್ಮರಾಯ ಹಾಗೂ ಅರ್ಜುನ ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ಭೀಮಸೇನನ ಮಾತನ್ನೇ ಕೃಷ್ಣ ಸಮರ್ಥಿಸುತ್ತಾನೆ. ಏಕೆಂದರೆ ಆಸೆ ಇಲ್ಲದೇ ಹೋದರೆ ಏನನ್ನು ಕೂಡ ಮಾಡಲು ಅಸಾಧ್ಯ ಅನ್ನುವ ಕೃಷ್ಣ, ಧರ್ಮಾಚರಣೆಗೂ ಆಸೆ ಬೇಕು. ಅರ್ಥವನ್ನು ಗಳಿಸಲು ಕೂಡ ಆಸೆ ಬೇಕು. ಒಳ್ಳೆಯದನ್ನು ಮಾಡಲು ಆಸೆ ಬೇಕು. ಏನನ್ನಾದರೂ ಮಾಡಬೇಕು ಅನ್ನುವುದು ಕೂಡ ಆಸೆಯೇ ಅಲ್ಲವೇ? ಹೀಗಾಗಿ ಕಾಮವೇ ಸರ್ವ ಶ್ರೇಷ್ಠ ಅಂತಾ ತಿಳಿ ಹೇಳುತ್ತಾನೆ. ವಿಷ್ಣುವಿನ ಎಂಟನೇ ಅವತಾರ ಅಂತಾ ನಂಬಲಾಗಿರುವ ಕೃಷ್ಣ, ಮುಂದಿನ ಅವತಾರ ಎಂದು ನಂಬಲಾಗಿರುವ ಬುದ್ಧನಾಗಿ ಆಸೆಯೇ ದುಃಖಕ್ಕೆ ಮೂಲ ಕಾರಣ ಅಂತಾ ಹೇಳಿ ಅಚ್ಚರಿ ಮೂಡಿಸುತ್ತಾನೆ. ಈ ವಿಚಾರವಾಗಿ ಹಲವರ ಅಭಿಪ್ರಾಯಗಳು ಬೇರೆ ಬೇರೆ ಆಗಿರಬಹುದು. ಆದರೆ ಬುದ್ಧ ಎಲ್ಲವನ್ನು ಬಿಡಬೇಕು ಅಂತಾ ಬಯಸಿದ್ದು ಕೂಡ ಆಸೆಯೇ ಅಲ್ಲವೇ? ಸಿದ್ಧಾರ್ಥ ಮುಂದೆ ಬುದ್ಧ ಆಗಿದ್ದು ವಿಭಿನ್ನ ಬಗೆಯ ಆಸೆಯಿಂದಲೇ ಅಲ್ಲವೇ? ಇಂಥ ವಿಚಾರಗಳು ಚರ್ಚೆಗೆ ಬಂದಾಗ ಕೃಷ್ಣನ ವಾದಕ್ಕೆ ಮನ್ನಣೆ ಸಿಗುತ್ತದೆ.
ಊದುವ ಕೊಳಲಲ್ಲಿ, ರಾಧೆಯ ಕೊರಳಲ್ಲಿ ಕೃಷ್ಣ
ಶ್ರೀಕೃಷ್ಣ ಮಕ್ಕಳಿಂದ ವೃದ್ಧರವರೆಗೂ ಎಲ್ಲರಿಗೂ ಇಷ್ಟ. ಸಾಮಾನ್ಯ ಬಾಲಕನೊಬ್ಬ, ಗೊಲ್ಲನೊಬ್ಬ ದೇವರಾಗಿದ್ದು ವಿಚಿತ್ರವಾದರೂ ಸತ್ಯ. ಬಹುತೇಕ ಧರ್ಮಗಳಲ್ಲಿ ಜಾನುವಾರುಗಳನ್ನು ಕಾದವರೇ ದೇವರಾಗಿದ್ದಾರೆ. ಕ್ರಿಶ್ಚಿಯನ್ನರ ಯೇಸು, ಮುಸ್ಲಿಮರ ಮಹಮ್ಮದ್ ಪೈಗಂಬರ್ ಕೂಡ ದನ-ಕುರಿ ಕಾದವರೇ. ಅದೇ ರೀತಿ ದನ ಕಾದ ಕೃಷ್ಣ ಹಿಂದೂಗಳ ದೇವರಾದ. ಇಂದಿಗೂ ಕೊಳಲು ಕಂಡರೆ ಕೃಷ್ಣ ನೆನಪಾಗುತ್ತಾನೆ. ರಾಧೆಯ ಮಾತು ಬಂದರೆ ಕೃಷ್ಣ ಕಣ್ಣ ಮುಂದೆ ಬರುತ್ತಾನೆ. ಗೊಲ್ಲರ ಬಾಲಕನೊಬ್ಬ ಹೀಗೆ ದೇವರಾಗಿದ್ದು ಸಣ್ಣ ಮಾತೇನಲ್ಲ. ಅದರ ಹಿಂದೆ ಆತನ ಬುದ್ಧಿವಂತಿಕೆ, ಸ್ವಂತಿಕೆ, ಸತತ ಪರಿಶ್ರಮ, ಜಾಣ್ಮೆ, ಜ್ಞಾನ, ಕರುಣೆ, ಪ್ರೀತಿ ಎಲ್ಲವೂ ಇದೆ. ಕೃಷ್ಣ ಯಾವತ್ತೂ ಸಾವಿಗೆ ಹೆದರಿದವನಲ್ಲ. ಮೊದಲಿಗೆ ತಾನೇ ಹೋಗಿ ಸಮಸ್ಯೆಗೆ ಎದುರಾಗಿ ನಿಲ್ಲುತ್ತಿದ್ದ. ಇದರಿಂದ ಆತನ ಸಹಚರರಿಗೆ ಸಹಜವಾಗಿ ಆತ್ಮವಿಶ್ವಾಸ ವೃದ್ಧಿಯಾಗುತ್ತಿತ್ತು. ಇದೇ ಬುದ್ಧಿವಂತಿಕೆಯಿಂದಲೇ ಕೃಷ್ಣ ದಿಕ್ಕಾಪಾಲಾಗಿದ್ದ ಯಾದವರನ್ನು ಒಂದೇ ವೇದಿಕೆಗೆ ತಂದ. ಅವರನ್ನು ಹುರಿದುಂಬಿಸಿ, ಶಕ್ತಿಶಾಲಿಯನ್ನಾಗಿ ಮಾಡಿದ. ಯಾದವರ ಬಲವನ್ನು ವೃದ್ಧಿಸಿದ. ಸದಾ ಮಜಾ ಮಾಡುವಲ್ಲಿಯೇ ಕಾಲ ಕಳೆಯಲು ಬಯಸುತ್ತಿದ್ದ ಯಾದವರನ್ನು ದಾರಿಗೆ ತರುವಲ್ಲಿ ಕೃಷ್ಣ ಮಾಡಿದ ಕೆಲಸ ಅಷ್ಟಿಷ್ಟಲ್ಲ. ಯಾದವರು ತೀಕ್ಷ್ಣ ಸ್ವಭಾವದವರು. ಅವರಿಗೆ ಕೃಷ್ಣ ಹೇಳುತ್ತಿದ್ದುದು ಸದಾ ಒಂದೇ ಮಾತು : ಸತ್ತರೆ ಒಮ್ಮೆ ಸಾಯುತ್ತೇವೆ. ಅದಕ್ಕಾಗಿ ನಿತ್ಯವೂ ಅಂಜುವ ಅಥವಾ ಅಳುವ ಅವಶ್ಯಕತೆ ಇಲ್ಲ. ಮುಂಬರುವ ಸಮಸ್ಯೆಗಳನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಂಡಾಗ ಮಾತ್ರ ಜಯ ನಮ್ಮೊಂದಿಗೆಯೇ ಜೀವಿಸುತ್ತಿರುತ್ತದೆ. ಇಲ್ಲದಿದ್ದರೆ ಅದು ಯಾವತ್ತೂ ವೈರಿಯ ಗುಲಾಮ!
ನಮ್ಮಿಷ್ಟದಂತೆ ಕೃಷ್ಣನನ್ನು ಊಹಿಸಿಕೊಳ್ಳುವ ಅಧಿಕಾರ
ಪ್ರಪಂಚದ ಬಹುತೇಕ ಧರ್ಮಗಳಲ್ಲಿ ದೇವರೆಂದರೆ ಸ್ಪಷ್ಟವಾದ ಚಿತ್ರಣವಿದೆ. ಅವರವರ ದೇವರು ಹೀಗೆಯೇ ಇದ್ದಾನೆ ಅನ್ನುವುದು ನಿರ್ಧರಿತವಾಗಿದೆ. ಆದರೆ ನಮಗೆ ಬೇಕಾದಂತೆ ಊಹಿಸಿಕೊಂಡು, ಆರಾಧಿಸುವಂತೆ ಇರುವವನು ಶ್ರೀಕೃಷ್ಣ. ಮಕ್ಕಳು ಬೆತ್ತಲೆ ಓಡಾಡಿದಾಗ, ಯುವಕರು ಪ್ರೇಮದ ಬಲೆಯಲ್ಲಿ ಬಿದ್ದಾಗ, ರಾಜಕಾರಣಿಗಳ ತಂತ್ರ ಮೆಚ್ಚುಗೆಯಾದಾಗ, ಸೈನಿಕ ಯುದ್ಧ ಗೆದ್ದಾಗ, ವ್ಯಕ್ತಿಯೊಬ್ಬ ದೀನ ದಲಿತರ ಸೇವೆ ಮಾಡಿದಾಗಲೆಲ್ಲ ಕೃಷ್ಣ ನೆನಪಾಗುತ್ತಾನೆ. ಇದೇ ಕಾರಣಕ್ಕೆ ಕೃಷ್ಣ ನಮ್ಮೊಂದಿಗೆ ನಮ್ಮವನಾಗುತ್ತಾನೆ, ಮುಂದಿನ ಗಳಿಗೆಯಲ್ಲಿ ದೇವರಾಗುತ್ತಾನೆ. ಶ್ರೀರಾಮಚಂದ್ರ ಗಂಭೀರ. ಆತ ಕೃಷ್ಣನಂತಲ್ಲ. ಅಲ್ಲಲ್ಲ! ಕೃಷ್ಣ ಶ್ರೀರಾಮನಂತಲ್ಲ, ಪರಮ ಗಂಭೀರನಲ್ಲ. ಹಾಗಂತ ಗಂಭೀರನಲ್ಲ ಅಂತಾನೂ ಅಲ್ಲ. ಈ ಬಗ್ಗೆ ಹೇಳುವುದು ಕೊಂಚ ಕಷ್ಟಕರ. ಏಕೆಂದರೆ ಕೃಷ್ಣನ ಗುಣವೇ ಹಾಗೆ. ಆತನನ್ನು ನಾಯಕನೆಂದುಕೊಂಡಾಗ ವಿಭಿನ್ನ ನಾಯಕನಾಗಿ ಕಾಣುತ್ತಾನೆ. ದೇವನೆಂದು ನಂಬಿದಾಗ ಎಲ್ಲ ದೇವರಿಗಿಂತ ವಿಭಿನ್ನವಾಗಿ ನಿಲ್ಲುತ್ತಾನೆ. ಕೃಷ್ಣ ಎಲ್ಲ ಕಡೆಯೂ ಸಲ್ಲುವವ. ತಾಯಂದಿರಿಗೆ ತುಂಟ ಬಾಲಕನಾಗಿ, ರಾಧೆಯರಿಗೆ ಪ್ರೇಮಿಯಾಗಿ, ದ್ರೌಪದಿಗೆ ಅಣ್ಣನಾಗಿ, ವಿದುರನಿಗೆ ದೇವರಾಗಿ, ದುರ್ಯೋಧನ-ಕರ್ಣರಿಗೆ ಮೋಸಗಾರನಾಗಿ, ವ್ಯಾಸರಿಗೆ ಅದ್ಭುತ ಶಕ್ತಿಯಾಗಿ ಕಾಣುತ್ತಾನೆ. ಎಂದಿಗೂ ಅಧಿಕಾರದ ಆಸೆ ಪಡದ ಕೃಷ್ಣನ ಮನಸ್ಥಿತಿಯೇ ಅಚ್ಚರಿಯ ಸಂಗತಿ. ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯೇ ಧರ್ಮದ ಮೂಲ ತಳಹದಿ ಅನ್ನುವ ಆತನ ಮಾತೇ ಶ್ರೇಷ್ಠ. ತನ್ನ ಬಳಿ ಸಹಾಯ ಕೇಳಿ ಬಂದ ಯಾರನ್ನೂ ಕೃಷ್ಣ ಕೈಬಿಟ್ಟ ಉದಾಹರಣೆಗಳಿಲ್ಲ. ಕೃಷ್ಣ ತಾನೇ ಮುಂದೆ ನಿಂತು ಯುದ್ದ ಗೆಲ್ಲಿಸಿದ ಸಾಕಷ್ಟು ಉದಾಹರಣೆಗಳಿದ್ದರೂ, ತನ್ನ ಕೈಯಲ್ಲಿಯೇ ಅಧಿಕಾರದ ಸೂತ್ರವಿದ್ದರೂ ಅದನ್ನು ಬೇರೆಯವರ ಕೊರಳಿಗೆ ಹಾಕಿ ಎದ್ದು ಹೋಗುವ ಉದಾತ್ತ ನಾಯಕ. ಪ್ರತಿಬಾರಿಯೂ ತಾನು ಆಳಲು ಬಂದಿಲ್ಲ ಅಂತಾ ಹೇಳುತ್ತಲೇ ದುಷ್ಟರ ಸಂಹಾರ ಮಾಡಿ, ಅದರ ರಾಜ್ಯಭಾರವನ್ನು ಬೇರೆಯವರ ಹೆಗಲಿಗೆ ಒಪ್ಪಿಸುತ್ತಾ ಸಾಗಿದ ನಾಯಕ. ತಾನು ಭೂಮಿಗೆ ಬಂದಿದ್ದು ಧರ್ಮ ರಕ್ಷಣೆಗೆ ಅನ್ನುತ್ತಲೇ ಮುಂದೆ ಮುಂದೆ ಸಾಗಿದ ಕೃಷ್ಣನನ್ನು ಶ್ರೇಷ್ಠ ನಾಯಕ ಅನ್ನುವದಕ್ಕಿಂತ ದೇವರು ಅಂದುಕೊಂಡವರೇ ಹೆಚ್ಚು. ಧರ್ಮ ರಕ್ಷಣೆಗಾಗಿಯೇ ಜನಿಸಿ ಬಂದ ದೇವರು ಅಂದುಕೊಂಡವರೇ ಹೆಚ್ಚು. ಮಹಾಭಾರತವನ್ನು ಒಂದು ಸಾಮಾಜಿಕ ಕಾದಂಬರಿಯಾಗಿ ನೋಡಿದಾಗ ಶ್ರೀಕೃಷ್ಣನ ರಾಜಕೀಯ ತಂತ್ರಗಾರಿಕೆ ಹೆಚ್ಚು ಇಷ್ಟವಾಗುತ್ತದೆ. ಅವಶ್ಯಕತೆ ಬಿದ್ದಾಗ, ಸಂದರ್ಭ ಬಂದಾಗ ಯಾವ ಯಾವ ಅಸ್ತ್ರಗಳನ್ನು ಬಳಸಬೇಕು ಅನ್ನುವುದನ್ನು ಕೃಷ್ಣ ಕರಗತ ಮಾಡಿಕೊಂಡಿದ್ದ. ಹೀಗಾಗಿ ಕೃಷ್ಣನನ್ನು ಶ್ರೇಷ್ಠ ರಾಜಕೀಯ ತಂತ್ರಗಾರನೆಂದು ಕರೆದರೆ ತಪ್ಪಿಲ್ಲ.
ಇದೀಗ ಮತ್ತೆ ಶ್ರೀಕೃಷ್ಣ ಜನ್ಮಾಷ್ಟಮಿ ಬಂದಿದೆ. ಅವರವರ ಭಕುತಿಯಂತೆ ಇರುತಿಹನು ಶಿವಯೋಗಿ ಅನ್ನುವ ಮಾತಿನಂತೆ, ಕೃಷ್ಣ ತುಂಟ ಬಾಲಕನಾಗಿ, ಶ್ರೇಷ್ಠ ಕೊಳಲು ವಾದಕನಾಗಿ, ಪ್ರೇಮಿಯಾಗಿ, ಅಣ್ಣನಾಗಿ, ತಮ್ಮನಾಗಿ, ಮಗನಾಗಿ, ಧರ್ಮ ರಕ್ಷಕನಾಗಿ ಅವರವರ ಪಾಲಿಗೆ ಅವರು ಇಷ್ಟಪಡುವ ಶಕ್ತಿಯಾಗಿ ಕಾಣುತ್ತಲೇ ಇದ್ದಾನೆ. ಹಿಂದಿನ ಜನಾಂಗಕ್ಕೂ ಮುಂಬರುವ ಜನಾಂಗಕ್ಕೂ ಆತ ಆದರ್ಶ ವ್ಯಕ್ತಿಯೇ. ಸಾವಿರಾರು ವರ್ಷಗಳಿಂದಲೂ ಆರಾಧಿಸಲ್ಪಸುತ್ತಿರೋ ಶ್ರೀಕೃಷ್ಣ ಮುಂದಿನ ಸಾವಿರಾರು ವರ್ಷಗಳಲ್ಲಿ ಕೊಳಲಿನ ದನಿಯಲ್ಲಿ, ಹಸುವಿನ ಹಾಲಿನಲ್ಲಿ, ಬಾನಿನ ನೀಲಿಯಲ್ಲಿ, ರಾಧೆಯ ಪ್ರೇಮದಲ್ಲಿ, ಯುವಕರ ಮೋಹಕ ನಗೆಯಲ್ಲಿ, ದುಷ್ಟರ ಸಂಹಾರದ ಮುಂಚೂಣಿಯಲ್ಲಿ ಇದ್ದೇ ಇರುತ್ತಾನೆ. ಇದು ನಂಬಿಕೆಯಷ್ಟೇ ಅಲ್ಲ, ವಾಸ್ತವವೂ ಹೌದು!
Source:Tv9kannada