Karnataka Lokayukta Raid: ಬಿಜೆಪಿ ಶಾಸಕ ಮಾಡಾಳ್​ ವಿರೂಪಾಕ್ಷಪ್ಪ ವಿರುದ್ಧ ಎಫ್​ಐಆರ್ ದಾಖಲು, ಜಾಮೀನು ಪಡೆಯಲು ಕಸರತ್ತು

Mar 3, 2023

 
 

ತಮ್ಮ ವಿರುದ್ಧ ಎಫ್​ಐಆರ್ ದಾಖಲಾಗುತ್ತಿದ್ದಂತೆ ಮಾಡಾಳ್​ ವಿರೂಪಾಕ್ಷಪ್ಪಗೆ ಬಂಧನ ಭೀತಿ ಎದುರಾಗಿದ್ದು, ಜಾಮೀನು ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದೆಡೆ ಶಾಸಕರಿಗಾಗಿ ಲೋಕಾಯುಕ್ತ ಪೊಲೀಸರು ಮೂರು ತಂಡಗಳಿಂದ ಹುಟುಕಾಟ ನಡೆಸಲಾಗುತ್ತಿದೆ

ಬೆಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (BJP MLA Madal Virupakshappa) ಪುತ್ರ ಮಾಡಾಳ್ ಪ್ರಶಾಂತ್‌ ಲೋಕಾಯುಕ್ತ (Lokayukta Raid) ಬಲೆಗೆ ರೆಡ್‌ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಬೆನ್ನಲ್ಲೇ ಇದೀಗ ಶಾಸಕರಿಗೂ ಬಂಧನದ ಭೀತಿ ಎದುರಾಗಿದೆ. ಲಂಚ ಸ್ವೀಕಾರ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಶಾಸಕ ಮಾಡಾಳ್ ವಿರೂಪಾಕ್ಷ ಸೇರಿದಂತೆ ಮತ್ತಿತರರ ವಿರುದ್ಧ ಎಫ್​ಐಆರ್ (FIR) ದಾಖಲಿಸಿದ್ದಾರೆ. ಶ್ರೇಯಸ್ ಕಶ್ಯಪ್​ ನೀಡಿದ್ದ ದೂರಿನ ಅನ್ವಯ ದಾಖಲಾದ ಎಫ್​ಐಆರ್​ನಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಎ1 (ಮೊದಲ ಆರೋಪಿ) ಆಗಿದ್ದು, ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಎ2 (2ನೇ ಆರೋಪಿ), ಕೆಎಸ್​ಡಿಎಲ್​ ಅಕೌಂಟೆಂಟ್​ ಸುರೇಂದ್ರ ಎ3, ಮಾಡಾಳ್​ ಪ್ರಶಾಂತ್ ಸಂಬಂಧಿ ಸಿದ್ದೇಶ್ ಎ4, ಅರೋಮಾ ಕಂಪನಿ ಸಿಬ್ಬಂದಿ ಆಲ್ಬರ್ಟ್ ನಿಕೋಲಾ ಎ5, ಅರೋಮಾ ಕಂಪನಿ ಸಿಬ್ಬಂದಿ ಗಂಗಾಧರ ಎ6 ಆಗಿದ್ದಾನೆ. ಆಧಾರಿಸಿ ಈ ಎಫ್​ಐಆರ್ ದಾಖಲಿಸಲಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ತುಂಬಾ ಸಮಯ ಕಾಯಬೇಕಿಲ್ಲ, ಈ ನಡುವೆಯೇ ಶಾಸಕ ಮಾಡಾಲ್ ವಿರೂಪಾಕ್ಷ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿರುವುದು ರಾಜಕೀಯ ಜೀವನಕ್ಕೆ ಮುಳ್ಳಾಗಿ ಪರಿಣಮಿಸಿದೆ. ಮಾತ್ರವಲ್ಲದೆ, ತಮ್ಮ ವಿರುದ್ಧ ಎಫ್​ಐಆರ್ ದಾಖಲಾಗುತ್ತಿದ್ದಂತೆ ಶಾಸಕರಿಗೆ ಬಂಧನ ಭೀತಿ ಎದುರಾಗಿದ್ದು, ಜಾಮೀನು ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದೆಡೆ ಶಾಸಕರಿಗಾಗಿ ಲೋಕಾಯುಕ್ತ ಪೊಲೀಸರು ಮೂರು ತಂಡಗಳಿಂದ ಹುಟುಕಾಟ ನಡೆಸಲಾಗುತ್ತಿದೆ. ಚನ್ನೇಶಪುರ ಗ್ರಾಮದಲ್ಲಿರುವ ಶಾಸಕರ​ ನಿವಾಸ, ಮಾವಿನಹೊಳೆ ಬಳಿ ಇರುವ ಮಾಡಾಳ್ ಕುಟುಂಬದ ಕ್ರಷರ್ ಕಚೇರಿ, ಮಾವಿನಕಟ್ಟೆ ಗ್ರಾಮದ ಬಳಿ ಇರುವ ತೋಟದ ಮನೆ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದು, 20 ಮಂದಿಯಿಂದ ಪರಿಶೀಲನೆ ನಡೆಯುತ್ತಿದೆ. ದಾಳಿ ವೇಳೆ ಚಿನ್ನ, ಅಪಾರ ಪ್ರಮಾಣದ ಆಸ್ತಿ ಪತ್ರಗಳು ಪತ್ತೆ ಶಂಕೆ ವ್ಯಕ್ತವಾಗಿದೆ.

ಟೆಂಡರ್ ಕೊಡಿಸುವ ವಿಚಾರವಾಗಿ ಗುತ್ತಿಗೆದಾರನಿಂದ 80 ಲಕ್ಷಕ್ಕೂ ಹೆಚ್ಚು ಹಣಕ್ಕೆ ಡಿಮ್ಯಾಂಡ್ ಮಾಡಲಾಗಿತ್ತು. ಇದರ ಮುಂಗಡವಾಗಿ 40 ಲಕ್ಷ ಹಣ ಪಡೆಯುವ ಸಂದರ್ಭದಲ್ಲಿ ಎಂಟ್ರಿಕೊಟ್ಟಿದ್ದ ಲೋಕಾಯುಕ್ತ ಪೊಲೀಸರು, ಶಾಸಕ ಮಾಡಾಳ್ ಪುತ್ರಮಾಡಾಳ್ ಪ್ರಶಾಂತ್​ನನ್ನು ರೆಡ್​​ಹ್ಯಾಂಡ್​ ಹಾಕಿ ಬಂಧಿಸಿದ್ದರು. ಪ್ರಶಾಂತ್‌ BWSSB ಮುಖ್ಯ ಲೆಕ್ಕಾಧಿಕಾರಿಯಾಗಿದ್ದು, KSDL ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್ ನೀಡಲು ಲಂಚಕ್ಕೆ ಬೇಡಿಯಿಟ್ಟಿದ್ದ ಎನ್ನಲಾಗುತ್ತಿದೆ.

ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ವಿರೂಪಾಕ್ಷಪ್ಪ ಕಚೇರಿಯಲ್ಲಿ 3 ಬ್ಯಾಗ್​ಗಳಲ್ಲಿ 2 ಸಾವಿರ ರೂ. ಮತ್ತು 500 ರೂಪಾಯಿ ಕಂತೆ ಕಂತೆ ನೋಟುಗಳು ಪತ್ತೆ ಆಗಿದ್ದು, ಒಟ್ಟಾರೆಯಾಗಿ ದಾಳಿ ವೇಳೆ 8.12 ಕೋಟಿಗೂ ಅಧಿಕ ನಗದನ್ನು ಜಪ್ತಿ ಮಾಡಲಾಗಿತ್ತು. ಲೋಕಾಯುಕ್ತ ಐಜಿಪಿ ಸುಬ್ರಮಣ್ಯೇಶ್ವರ ರಾವ್, ಎಸ್​ಪಿ ಅಶೋಕ್ ನೇತೃತ್ವದಲ್ಲಿ ನಡೆಯುತ್ತಿರುವ ತನಿಖೆಯ ಮುಂದುರಿದ ಭಾಗವಾಗಿ ಭ್ರಷ್ಟಾಚಾರ ನಿಯಂತ್ರ ಕಾಯ್ದೆ ಅಡಿಯ ಸೆಕ್ಷನ್ 7a ಮತ್ತು b ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

Source: TV9KANNADA