IPL 2021: ದುಬೈ ಫ್ಲೈಟ್ ಏರಲು ಸಜ್ಜಾದ ಆರ್​ಸಿಬಿ: ಯಾವ ತಂಡ ಯಾವಾಗ ಪ್ರಯಾಣ?: ಇಲ್ಲಿದೆ ಮಾಹಿತಿ

Aug 19, 2021

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ಪುನರಾರಂಭಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡ ದುಬೈಗೆ ತೆರಳಿದ್ದು ಕ್ವಾರಂಟೈನ್ನಲ್ಲಿದೆ. ಸದ್ಯ ಇತರೆ ತಂಡಗಳು ಯುಎಇಗೆ ತೆರಳಲು ಸಜ್ಜಾಗಿ ನಿಂತಿದೆ.

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡ ಇದೇ ತಿಂಗಳ ಅಂತ್ಯದಲ್ಲಿ ದುಬೈ ಫ್ಲೈಟ್ ಏರಲಿದೆ. ಕೊಹ್ಲಿ ಇಂಗ್ಲೆಂಡ್​ನ ಬಯೋಬಬಲ್​ನಿಂದ ನೇರವಾಗಿ ಆರ್​ಸಿಬಿ ಸೇರಲಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆಗಸ್ಟ್ 27ಕ್ಕೆ ಅಬುದಾಬಿ ತೆರಳುವುದಾಗಿ ತಿಳಿಸಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ಆಗಸ್ಟ್ 29 ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಸೆಪ್ಟೆಂಬರ್ 2ಕ್ಕೆ ದುಬೈ ತಲುಪಲಿದೆ.

ಸನ್ರೈಸರ್ಸ್ ಹೈದರಾಬಾದ್ ತಂಡ ಆಗಸ್ಟ್ 31ಕ್ಕೆ ತೆರಳಲಿದೆ. ಶುಭಸುದ್ದಿ ಎಂದರೆ ಎಸ್ಆರ್​ಹೆಚ್​ನ ಪ್ರಮುಖ ಬೌಲರ್ ಟಿ. ನಟರಾಜನ್ ಇಂಜುರಿಯಿಂದ ಗುಣಮುಖರಾಗಿದ್ದು, ಟೂರ್ನಿಗೆ ಲಭ್ಯವಿದ್ದಾರೆಂದು ತಿಳಿದುಬಂದಿದೆ.

ಇನ್ನೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಗಸ್ಟ್ 21 ರಂದು ಯುಎಇಗೆ ಪ್ರಯಾಣ ಬೆಳೆಸಲಿದೆ. ಈ ಮೂಲಕ ಚೆನ್ನೈ ಮತ್ತು ಮುಂಬೈ ಬಳಿಕ ದುಬೈ ತಲುಪಲಿರುವ ಮೂರನೇ ತಂಡ ಡೆಲ್ಲಿ ಆಗಿದೆ. ತಂಡದ ನಾಯಕ ಶ್ರೇಯಸ್ ಅಯ್ಯರ್ ಆಗಸ್ಟ್ 14 ರಂದು ದುಬೈಗೆ ತಲುಪಿದ್ದರು.

ಇನ್ನೂ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಈ ಬಾರಿಯ ಐಪಿಎಲ್ ವೀಕ್ಷಿಸಲು ಸ್ಟೇಡಿಯಂನಲ್ಲಿ ಶೇ. 60 ರಷ್ಟು ಜನರಿಗೆ ಅವಕಾಶ ನೀಡುತ್ತಿದೆ ಎಂದು ಘೋಷಿಸಿದೆ. ಈ ಬಗ್ಗೆ ನಾವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೊತೆ ಮಾತುಕತೆ ನಡೆಸಿ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಹೇಳಿದೆ.

ಕಳೆದ ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಕೊರೊನಾ ವೈರಸ್ ಕಾರಣದಿಂದಾಗಿ ಅರ್ಧದಲ್ಲಿಯೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

ಕೋವಿಡ್ ಕಾರಣದಿಂದ ಅರ್ಧದಲ್ಲಿ ಸ್ಥಗಿತಗೊಂಡಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಟೂರ್ನಿಯ ಮುಂದಿನ ಭಾಗ ಯುಎಇ ನಲ್ಲಿ ನಡೆಯಲಿದೆ. ಇದೇ ಸೆಪ್ಟೆಂಬರ್ 19ರಿಂದ ಐಪಿಎಲ್ 2021 ಪುನರಾರಂಭವಾಗಲಿದ್ದು, ಸಿದ್ದತೆಗಳು ಭರ್ಜರಿಯಾಗಿ ನಡೆಯುತ್ತಿದೆ.

Source: tv9 Kannada