India vs England 2nd Test: 5ನೇ ದಿನ ಭಾರತವನ್ನು ಕಾಪಾಡುತ್ತಾನ ವರುಣದೇವ?: ಹವಾಮಾನ ವರದಿ ಏನು ಹೇಳುತ್ತೇ?

Aug 16, 2021

ಸುಲಭವಾಗಿ ಗೆಲುವು ಸಾಧಿಸಿ ಬಹುದಿದ್ದ ಇಂಗ್ಲೆಂಡ್ (England) ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಐದನೇ ದಿನ ಭಾರತಕ್ಕೆ (India) ಮಳೆರಾಯ ಕಂಟಕವಾಗಿದ್ದು ಗೊತ್ತೇ ಇದೆ. ಇಂದು ಕೂಡ ಎರಡನೇ ಟೆಸ್ಟ್ ಅದೇ ಘಟ್ಟಕ್ಕೆ ಬಂದು ನಿಂತಿದೆ. ಆದರೆ, ಇಂದು ಮಳೆ ಬರಲಿ ಎಂಬುದು ಭಾರತೀಯರ ಆಶಯ. ಯಾಕೆಂದರೆ ಎರಡನೇ ಟೆಸ್ಟ್​ನಲ್ಲಿ (Second Test) ಭಾರತಕ್ಕೆ ಗೆಲುವು ಕಠಿಣವಾಗಿದ್ದು, 200 ರನ್​ಗಳ ಒಳಗೆ ಟಾರ್ಗೆಟ್ ನೀಡಿದರೆ ಇಂಗ್ಲೆಂಡ್ ಸುಲಭ ಜಯ ಸಾಧಿಸಬಹುದು. ಹಾಗಾದ್ರೆ ಲಾರ್ಡ್ಸ್​ನಲ್ಲಿ ಇಂದು ಮಳೆ ಬರುವ ಸಾಧ್ಯತೆ ಇದೆಯೇ?, ಹವಾಮಾನ ವರದಿ ಏನು ಹೇಳುತ್ತೆ? ಎಂಬುದನ್ನು ನೋಡೋಣ.

ಫಲಿತಾಂಶವಿಲ್ಲದೆ ಅಂತ್ಯಕಂಡಿದ್ದ ಮೊದಲ ಟೆಸ್ಟ್ ರೀತಿ ಎರಡನೇ ಟೆಸ್ಟ್ ಕೂಡ ಆಗದಿರಲಿ ಎಂಬುದು ಕ್ರಿಕೆಟ್ ಪಂಡಿತರ ಆಶಯ. ಮೊದಲ ದಿನ ಭಾರತ ಮೇಲುಗೈ ಸಾಧಿಸಿದ್ದು ಬಿಟ್ಟರೆ ನಂತರದ ದಿನದಲ್ಲಿ ಏರು-ಪೇರು ಕಂಡಿತು. ಸದ್ಯ ಇಂಗ್ಲೆಂಡ್​ಗೆ ಗೆಲುವಿನ ಅವಕಾಶ ಹೆಚ್ಚಿದೆ. ಟೀಮ್ ಇಂಡಿಯಾ ಸಂಪೂರ್ಣ ರಿಷಭ್ ಪಂತ್ ಮೇಲೆ ಅವಲಂಬಿತವಾಗಿದೆ.

ಅಂತಿಮ ದಿನದ ಹವಾಮಾನ ನೋಡುವುದಾದರೆ, ತಂಪಾದ 18 ಡಿಗ್ರಿ ತಾಪಮಾನ ಇರಲಿದೆ. 4ನೇ ದಿನಕ್ಕಿಂತ ಕೊಂಚ ಗಾಳಿ ಅಧಿಕವಾಗಿರಲಿದೆ. ತೇವಾಂಶವು ಸುಮಾರು 50-60% ನಷ್ಟು ಇರುತ್ತದೆ. ಹೀಗಾಗಿ ವರುಣನ ಕಾಟ ಅನುಮಾನ ಎಂದು ಹೇಳಲಾಗಿದೆ.

ನಾಲ್ಕನೇ ದಿನ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ಮೊದಲ ಇನ್ನಿಂಗ್ಸ್​ನಂತೆ ಉತ್ತಮ ಆರಂಭ ಪಡೆದುಕೊಳ್ಳಿಲ್ಲ. ಓಪನರ್​ಗಳಾದ ಕೆ. ಎಲ್ ರಾಹುಲ್ 5 ಹಾಗೂ ರೋಹಿತ್ ಶರ್ಮಾ 21 ರನ್​ಗೆ ಬೇಗನೆ ಔಟ್ ಆದರು. ನಾಯಕ ವಿರಾಟ್ ಕೊಹ್ಲಿ ಕೂಡ 20 ರನ್​ಗೆ ಬ್ಯಾಟ್ ಕಳೆಗಿಟ್ಟರು.

ಈ ಸಂದರ್ಭ ಕಳಪೆ ಫಾರ್ಮ್​ನಿಂದ ಕಂಗೆಟ್ಟಿದ್ದ ಚೇತೇಶ್ವರ್ ಪೂಜಾರ ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆ ತಂಡಕ್ಕೆ ಆಸರೆಯಾಗಿ ನಿಂತರು. ಈ ಜೋಡಿ ಎಚ್ಚರಿಕೆಯ ಜೊತೆಯಾಟ ಆಡಿ 100 ರನ್​ಗಳ ಕಾಣಿಕೆ ನೀಡಿತು. ಪೂಜಾರ 206 ಎಸೆತಗಳಲ್ಲಿ 45 ರನ್ ಗಳಿಸಿದರೆ, ರಹಾನೆ 146 ಎಸೆತಗಳಲ್ಲಿ 61 ರನ್​ಗೆ ಔಟ್ ಆದರು, ರವೀಂದ್ರ ಜಡೇಜಾ 3 ರನ್​ಗೆ ಬೌಲ್ಡ್ ಆದರು.

ಹೀಗೆ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 181 ರನ್ ಬಾರಿಸಿದೆ. 154 ರನ್​ಗಳ ಮುನ್ನಡೆಯಲ್ಲಿದೆ. ರಿಷಭ್ ಪಂತ್ 14 ರನ್ ಹಾಗೂ ಇಶಾಂತ್ ಶರ್ಮಾ 4 ರನ್ ಗಳಿಸಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Source: tv9 Kannada