IISc: ಜಗತ್ತಿನ ಟಾಪ್ ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್!
ನವದೆಹಲಿ: 2022ನೇ ಸಾಲಿನ ಟೈಮ್ಸ್ ವರ್ಲ್ಡ್ ಯುನಿವರ್ಸಿಟಿ ರ್ಯಾಂಕಿಂಗ್ ಪಟ್ಟಿ (Times World University Rankings 2022) ಪ್ರಕಟವಾಗಿದ್ದು, ವಿಶ್ವದ 350 ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಬೆಂಗಳೂರು ಕೂಡ ಸ್ಥಾನ ಪಡೆದುಕೊಂಡಿದೆ. ಇಂಗ್ಲೆಂಡ್ನ ಆಕ್ಸ್ಫರ್ಡ್ ಯೂನಿವರ್ಸಿಟಿ (University of Oxford) ವಿಶ್ವದ ಟಾಪ್ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಈ 350 ಅತ್ಯುತ್ತಮ ವಿಶ್ವವಿದ್ಯಾಲಯಗಳ ಪೈಕಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಕೂಡ ಒಂದು ಎಂಬುದು ಹೆಮ್ಮೆಯ ಸಂಗತಿ.
ವಿಶ್ವದ 350 ಟಾಪ್ ವಿಶ್ವವಿದ್ಯಾಲಯಗಳಲ್ಲಿ ಆಕ್ಸ್ಫರ್ಡ್ ಯುನಿವರ್ಸಿಟಿಗೆ ಮೊದಲ ಸ್ಥಾನ, ಕ್ಯಾಲಿಫೋರ್ನಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎರಡನೇ ಸ್ಥಾನ, ಹಾರ್ವರ್ಡ್ ಯುನಿವರ್ಸಿಟಿ 3ನೇ ಸ್ಥಾನ, ಸ್ಟಾನ್ಫೋರ್ಡ್ ಯುನಿವರ್ಸಿಟಿ 4ನೇ ಸ್ಥಾನ ಪಡೆದಿವೆ. ಬೆಂಗಳೂರಿನ ಭಾರತೀಯ ವಿಜ್ಞಾನಗಳ ಸಂಸ್ಥೆ (IISc) 301ನೇ ಸ್ಥಾನ ಪಡೆದಿದೆ. ಅಂದಹಾಗೆ, ಜಗತ್ತಿನ 350 ಟಾಪ್ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಯೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನದ್ದು. ಈ ಮೂಲಕ ಬೆಂಗಳೂರಿನ ವಿಶ್ವವಿದ್ಯಾಲಯ ಜಾಗತಿಕ ಮಟ್ಟದಲ್ಲಿ ಸ್ಥಾನ ಪಡೆದಿದೆ.
ಉಳಿದಂತೆ ಭಾರತದ ಐಐಟಿ ರೋಪರ್, ಜೆಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್, ಐಐಟಿ ಇಂದೋರ್, ಅಲಗಪ್ಪ ಯುನಿವರ್ಸಿಟಿ ಮತ್ತು ತಪಾರ್ ಯುನಿವರ್ಸಿಟಿಗಳು ಟಾಪ್ 350ರಿಂದ 400ರೊಳಗಿನ ನಂತರ ಸ್ಥಾನಗಳನ್ನು ಪಡೆದಿವೆ. ಅಲ್ಲದೆ, ಬನಾರಸ್ ಹಿಂದು ಯುನಿವರ್ಸಿಟಿ, ಜವಹರಲಾಲ್ ನೆಹರು ಯುನಿವರ್ಸಿಟಿ (JNU) ದೆಹಲಿ ಟೆಕ್ನಾಲಜಿ ಯುನಿವರ್ಸಿಟಿ ಸೇರಿದಂತೆ ಭಾರತದ 10 ವಿಶ್ವವಿದ್ಯಾಲಯಗಳು ಜಗತ್ತಿನ ಟಾಪ್ 601ರಿಂದ 800ರೊಳಗಿನ ರ್ಯಾಂಕ್ ಪಡೆದಿವೆ.
Source:Tv9kannada