Dhananjay: ಸಾಹಿತಿ ಆಗಿ ಮಿಂಚಿದ್ದಾಯ್ತು; ಈಗ ಸಿಂಗರ್ ಆಗಲಿದ್ದಾರಾ ಡಾಲಿ ಧನಂಜಯ್?; ಕುತೂಹಲ ಹುಟ್ಟಿಸಿದೆ ಪ್ರೋಮೊ!

Aug 7, 2021

ಚಂದನವನದ ಭರವಸೆಯ ನಟ ಡಾಲಿ ಧನಂಜಯ್ ಕೈಯಲ್ಲಿ ಹಲವಾರು ಚಿತ್ರಗಳಿವೆ. ‘ಪುಷ್ಪಾ’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಾದರಿಯ ಸಿನಿಮಾಕ್ಕೂ ಅವರು ಕಾಲಿಡಲಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯಾದ ‘ಡಾಲಿ ಪಿಕ್ಚರ್ಸ್’ ಸಂಸ್ಥೆಯ ಮೂಲಕ ಚಿತ್ರ ನಿರ್ಮಾಣಕ್ಕೂ ಅವರು ಧುಮುಕಿದ್ದಾರೆ. ಈಗಾಗಲೇ ನಾಯಕನಾಗಿ, ಪ್ರತಿನಾಯಕನಾಗಿ, ಸಾಹಿತಿಯಾಗಿ, ಬರಹಗಾರನಾಗಿ ಎಲ್ಲರ ಮನಸೂರೆಗೊಂಡಿರುವ ಧನಂಜಯ್ ಈಗ ಹಾಡನ್ನೂ ಹೇಳಲಿದ್ದಾರಾ? ಎಂಬ ಪ್ರಶ್ನೆಯೊಂದು ಎಲ್ಲರಲ್ಲಿ ಮೂಡಿದೆ. ಹೌದು. ಅವರು ನಟಿಸಿ, ನಿರ್ಮಾಣ ಮಾಡುತ್ತಿರುವ ‘ಬಡವ ರಾಸ್ಕಲ್’ ಚಿತ್ರದ ಹಾಡೊಂದನ್ನು ಅವರು ಹೇಳಬಹುದೇ? ಎಂಬ ಕುತೂಹಲವನ್ನು ಹುಟ್ಟಿಸುವಂತಹ ಪ್ರೋಮೋವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಮುಖಾಂತರ ಹಂಚಿಕೊಳ್ಳಲಾಗಿರುವ ಪ್ರೋಮೋದಲ್ಲಿ ‘ಬಡವ ರಾಸ್ಕಲ್’ ಚಿತ್ರದ ಹಾಡೊಂದನ್ನು ಕಟ್ಟುವ ಸಂದರ್ಭವನ್ನು ಹಾಸ್ಯಭರಿತ ಮಾದರಿಯಲ್ಲಿ ಮರುಸೃಷ್ಟಿ ಮಾಡಲಾಗಿದೆ. ಚಿತ್ರದ ನಿರ್ದೇಶಕ ಶಂಕರ್ ಗುರು, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರೊಂದಿಗೆ ಧನಂಜಯ್ ಸೇರಿಕೊಂಡು ಹಾಡಿನ ಸಾಹಿತ್ಯವನ್ನು ಹೇಗೆ ಬರೆಸಬಹುದು, ಯಾರಿಂದ ಬರೆಸಬಹುದು, ಯಾರ ಕೈಯಲ್ಲಿ ಹಾಡಿಸಬಹುದು ಎಂಬುದನ್ನು ಚರ್ಚಿಸುತ್ತಾರೆ. ಕೊನೆಗೆ ಧನಂಜಯ್, ತನ್ನ ಹಳೆಯ ಪದ್ಯಗಳನ್ನೆಲ್ಲಾ ನೀಡಿ ತಾನೂ ಚೆನ್ನಾಗಿ ಬರೆಯುತ್ತೇನೆ ಎನ್ನುತ್ತಾರೆ.

ಕೊನೆಯಲ್ಲಿ ಧನಂಜಯ್​ ಬರೆದ ಗೀತೆಯನ್ನೇ ಹಾಡು ಮಾಡುವುದು ಎಂದು ತೀರ್ಮಾನವಾಗುತ್ತದೆ. ಆದರೆ, ಅದನ್ನು ಹಾಡುವುದು ಯಾರು ಎಂಬ ಪ್ರಶ್ನೆ ಬರುತ್ತದೆ. ಆಗ ಧನಂಜಯ್, ‘ಅದೇನೋ ಆಟೋ ಟ್ಯೂನಿಂಗ್ ಎಲ್ಲಾ ಮಾಡಿ ನಾವೇ ಹಾಡಬಹುದಂತಲ್ಲ…’ ಎನ್ನುತ್ತಾರೆ. ಅಲ್ಲಿಂದ ಪ್ರಶ್ನೆಯನ್ನು ಅಭಿಮಾನಿಗಳಿಗೇ ಬಿಟ್ಟಿರುವ ಚಿತ್ರತಂಡ, ಹಾಡನ್ನು ಹಾಡಿರುವುದು ಯಾರೆಂದು ತಿಳಿಯುವುದಕ್ಕಾಗಿ ಆಗಸ್ಟ್ 9ರ ಸಂಜೆವರೆಗೆ ಕಾಯಿರಿ ಎಂದಿದೆ. ಕಾರಣ, ಅಂದು ಸಂಜೆ 5.55ಕ್ಕೆ ಹಾಡು ಬಿಡುಗಡೆಯಾಗಲಿದೆ.

Source: Tv9 kannada