BS Yediyurappa: ರಾಜ್ಯ ಪ್ರವಾಸಕ್ಕೆ 1 ಕೋಟಿ ರೂ. ಬೆಲೆಯ ಐಷಾರಾಮಿ ಕಾರು ಖರೀದಿಸಿದ ಮಾಜಿ ಸಿಎಂ ಯಡಿಯೂರಪ್ಪ

Aug 26, 2021

ಬೆಂಗಳೂರು: ಇತ್ತೀಚೆಗಷ್ಟೇ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ.ಎಸ್. ಯಡಿಯೂರಪ್ಪ (BS Yediyurappa) ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಘೋಷಿಸಿದ್ದರು. 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿರುವ ಮಾಜಿ ಸಿಎಂ ಯಡಿಯೂರಪ್ಪ ರಾಜ್ಯದ ತುಂಬ ಪ್ರವಾಸ ಮಾಡಲೆಂದು ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Polls 2023) ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಪಣ ತೊಟ್ಟಿರುವ ಬಿ.ಎಸ್. ಯಡಿಯೂರಪ್ಪ ತಮ್ಮ ಪ್ರವಾಸಕ್ಕೆಂದು 1 ಕೋಟಿ ರೂ. ಮೌಲ್ಯದ ಹೊಸ ಟೊಯೊಟಾ ವೆಲ್​ಫೈರ್ (Toyota Vellfire) ಕಾರನ್ನು ಖರೀದಿಸಿದ್ದಾರೆ.

78 ವರ್ಷದ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ತಮ್ಮ ಕುಟುಂಬಸ್ಥರೊಂದಿಗೆ ಮಾಲ್ಡೀವ್ಸ್​ಗೆ ಪ್ರವಾಸಕ್ಕೆ ತೆರೆಳಿದ್ದರು. ಕುಟುಂಬದೊಂದಿಗೆ ಮಾಲ್ಡೀವ್ಸ್​ನಲ್ಲಿ ಎಂಜಾಯ್ ಮಾಡಿದ ಯಡಿಯೂರಪ್ಪ ಸೋಮವಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಾಪಾಸಾಗಿದ್ದಾರೆ. ಈ ವೇಳೆ ಅವರನ್ನು ಬರಮಾಡಿಕೊಳ್ಳಲು ಹೊಸ ಟೊಯೊಟಾ ವೆಲ್​ಫೈರ್ ಕಾರನ್ನು ತರಲಾಗಿತ್ತು. ಅಂದಾಜು 1 ಕೋಟಿ ರೂ. ಬೆಲೆಯ ಬಿಳಿ ಬಣ್ಣದ KA -05- ND – 4545 ನೋಂದಣಿ ಸಂಖ್ಯೆಯ ಟೊಯೊಟಾ ವೆಲ್‌ಫೈರ್ ಕಾರನ್ನು ಯಡಿಯೂರಪ್ಪ ತಮ್ಮ ರಾಜ್ಯ ಪ್ರವಾಸಕ್ಕಾಗಿ ಖರೀದಿ ಮಾಡಿದ್ದಾರೆ.

ಈಗಿನಿಂದಲೇ 2023ರ ಚುನಾವಣಾ ತಯಾರಿಯನ್ನು ಶುರು ಮಾಡಿರುವ ಬಿಎಸ್ ಯಡಿಯೂರಪ್ಪ ತಮ್ಮ ಹೊಸ ಕಾರಿನಲ್ಲೇ ರಾಜ್ಯ ಪ್ರವಾಸ ಮಾಡಿ, ಅಲ್ಲಿನ ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಕಾರನ್ನು ಬಳಕೆ ಮಾಡುತ್ತಿದ್ದ ಯಡಿಯೂರಪ್ಪ ಅದಕ್ಕೂ ಮೊದಲು ತಮ್ಮ ಮಗನ ಕಾರನ್ನು ಬಳಸುತ್ತಿದ್ದರು. ಇದೀಗ ತಾವೇ ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. 2018ರ ವಿಧಾನಸಭಾ ಚುನಾವಣೆ ವೇಳೆ ಬಿಎಸ್ ಯಡಿಯೂರಪ್ಪ ಸಲ್ಲಿಸಿದ್ದ ಅಫಿಡವಿಟ್​ನಲ್ಲೂ ತಮ್ಮ ಬಳಿ ಯಾವುದೇ ಸ್ವಂತ ಕಾರುಗಳಿಲ್ಲ ಎಂದು ಉಲ್ಲೇಖಿಸಿದ್ದರು.

ಅಂದಹಾಗೆ, ಯಡಿಯೂರಪ್ಪ ಹೊಸದಾಗಿ ಖರೀದಿಸಿರುವ ಟೊಯೊಟಾ ವೆಲ್​ಫೈರ್ ಕಾರಿನ ಬೆಲೆ 87 ಲಕ್ಷ ರೂ. ಆದರೆ ತೆರಿಗೆ ಸೇರಿ ಒಟ್ಟಾರೆ ಕಾರಿನ ಬೆಲೆ 1 ಕೋಟಿ ರೂ. ಆಗಿದೆ. ಯಡಿಯೂರಪ್ಪ ತಮಗೆಂದು ಖರೀದಿ ಮಾಡಿರುವ ಮೊದಲ ಕಾರು ಇದಾಗಿದೆ.

Source:tv9 Kannada