Bell Bottom: ಬಾಕ್ಸಾಫೀಸ್ನಲ್ಲಿ ಹಿಂದೆ ಬಿತ್ತು ಬಹು ನಿರೀಕ್ಷಿತ ‘ಬೆಲ್ಬಾಟಂ’; ಅಕ್ಷಯ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು?
ಅಕ್ಷಯ್ ಕುಮಾರ್, ವಾಣಿ ಕಪೂರ್ ಸೇರಿದಂತೆ ಬೃಹತ್ ತಾರಾಗಣದ ಬಹುನಿರೀಕ್ಷಿತ ‘ಬೆಲ್ಬಾಟಂ’ ಚಿತ್ರದ ಮೊದಲ ದಿನದ ಗಳಿಕೆ ನಿರೀಕ್ಷಿತ ಮಟ್ಟವನ್ನು ಮುಟ್ಟಿಲ್ಲ. ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ಮುಚ್ಚಿದ್ದು, ‘ಬೆಲ್ಬಾಟಂ’ಗೆ ಬಹುದೊಡ್ಡ ಹೊಡೆತವನ್ನು ನೀಡಿದೆ. ಈ ಪರಿಸ್ಥಿತಿಯಲ್ಲಿ ಹಿಂದಿ ಚಿತ್ರರಂಗಕ್ಕೆ ದೊಡ್ಡ ಮಾರುಕಟ್ಟೆಯೆಂದರೆ ಅದು ದೆಹಲಿ. ಪ್ರಸ್ತುತ ಚಿತ್ರಗಳ ಗಳಿಕೆಯಲ್ಲಿ 20 ಪ್ರತಿಶತ ಪಾಲು ದೆಹಲಿಯದ್ದು. ‘ಬೆಲ್ಬಾಟಂ’ ಚಿತ್ರತಂಡ ಒಟಿಟಿಯಲ್ಲಿ ಬಿಡುಗಡೆ ಮಾಡದೇ, ಬಹುದೊಡ್ಡ ರಿಸ್ಕ್ ತೆಗೆದುಕೊಂಡು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆಗೊಳಿಸಿತ್ತು. ಆದರೆ ಅದಕ್ಕೆ ನಿರೀಕ್ಷಿತ ಪ್ರತಿಫಲ ಸಿಕ್ಕಿಲ್ಲ.
‘ಬೆಲ್ಬಾಟಂ’ ಮೊದಲ ದಿನದ ಗಳಿಕೆ ಎಷ್ಟು?
ಈ ಮೊದಲಿನ ಲೆಕ್ಕಾಚಾರದ ಪ್ರಕಾರ, ಚಿತ್ರಮಂದಿರಗಳ ಲಭ್ಯತೆ, ಪ್ರದರ್ಶನದ ಆಧಾರದಲ್ಲಿ ಅಕ್ಕಿ ನಟನೆಯ ‘ಬೆಲ್ಬಾಟಂ’ ಮೊದಲ ದಿನ ಸುಮಾರು 3 ಕೋಟಿ ಗಳಿಸಬಹುದೆಂದು ಅಂದಾಜಿಸಲಾಗಿತ್ತು. ಆದರೆ ಅಷ್ಟನ್ನು ಗಳಿಸುವಲ್ಲಿ ಚಿತ್ರ ವಿಫಲವಾಗಿದೆ. ಸುಮಾರು 2.50 ಕೋಟಿಯಿಂದ 2.75 ಕೋಟಿಯಷ್ಟನ್ನು ಮಾತ್ರ ಚಿತ್ರತಂಡ ಮೊದಲ ದಿನ ಗಳಿಸಿದೆ. ಚಿತ್ರಮಂದಿರಗಳ ಲಭ್ಯತೆ ಚಿತ್ರಕ್ಕೆ ಬಹುದೊಡ್ಡ ಹಿನ್ನೆಡೆಯಾಗಿದ್ದು, ಸುಮಾರು 1000 ಚಿತ್ರಮಂದಿರಗಳಲ್ಲಷ್ಟೇ ಬಿಡುಗಡೆಯಾಗಿದೆ. ಅದರಲ್ಲೂ ಚಿತ್ರಮಂದಿರಗಳು 50 ಪ್ರತಿಶತ ಭರ್ತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದು ಚಿತ್ರಕ್ಕೆ ಬಹುದೊಡ್ಡ ಹೊಡೆತ ನೀಡಿದೆ.
ಕೊರೊನಾ ಮೊದಲ ಅಲೆಯ ನಂತರ ಬಿಡುಗಡೆಯಾದ ಬಾಲಿವುಡ್ ಚಿತ್ರಗಳಾದ ‘ರೂಹಿ’ ಹಾಗೂ ‘ಮುಂಬೈ ಸಾಗಾ’ ಚಿತ್ರಗಳು ಮೊದಲ ದಿನವೇ ಮೂರು ಕೋಟಿಯಷ್ಟು ಗಳಿಸಿತ್ತು. ಆದರೆ ಅಕ್ಕಿ ನಟನೆಯ ಬೆಲ್ಬಾಟಂ ಚಿತ್ರ ಅವುಗಳ ದಾಖಲೆಯನ್ನು ಮೀರಲೂ ವಿಫಲವಾಗಿದೆ. ಗಳಿಕೆಯ ವಿಚಾರದಲ್ಲಿ ಬೆಲ್ಬಾಟಂ ತುಸು ಹಿಂದೆ ಬಿದ್ದಿದ್ದರೂ, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ವಾರಾಂತ್ಯದಲ್ಲಿ ಚೇತರಿಸಿಕೊಳ್ಳಬಹುದೆಂದು ನಿರೀಕ್ಷಿಸಲಾಗಿದೆ.
ಬೆಲ್ಬಾಟಂ ಬಾಕ್ಸ್ಆಫೀಸ್ ಕುರಿತಂತೆ ಅಕ್ಷಯ್ ಲೆಕ್ಕಾಚಾರವೇನು?
ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿರುವ ಪ್ರಕಾರ, ಇತ್ತೀಚೆಗೆ ಮಾತನಾಡಿರುವ ಅಕ್ಷಯ್ ಬೆಲ್ಬಾಟಂ ಸಂಕಷ್ಟದ ನಡುವೆಯೂ ಎಂತಹ ದೊಡ್ಡ ರಿಸ್ಕ್ ತೆಗೆದುಕೊಂಡಿದೆ ಎಂಬುದನ್ನು ವಿವರಿಸಿದ್ದಾರೆ. ‘‘ಬಾಲಿವುಡ್ನ ಮಾರುಕಟ್ಟೆಯಲ್ಲಿ 30 ಪ್ರತಿಶತ ಕೊಡುಗೆಯನ್ನು ಮಹಾರಾಷ್ಟ್ರ ನೀಡುತ್ತದೆ. ಪ್ರಸ್ತುತ ಅದು ನಮಗೆ ಲಭ್ಯವಿಲ್ಲ. ಉಳಿದ 70 ಪ್ರತಿಶತ ಮಾರುಕಟ್ಟೆ ಇಡೀ ದೇಶದ್ದು. ಆದರೆ ಅದರಲ್ಲೂ ಚಿತ್ರಮಂದಿರ ಅರ್ಧ ಮಾತ್ರ ಭರ್ತಿಯಾಗಲು ಅವಕಾಶವಿದೆ. ಹಾಗಾಗಿ ಗಳಿಕೆಯ ಸಾಧ್ಯತೆ ಇರುವುದು 70ರ ಅರ್ಧದಷ್ಟು ಮಾತ್ರ. ಅದಾಗ್ಯೂ ಯಾರಾದರೊಬ್ಬರು ಮುಂದೆ ಬಂದು ಸವಾಲನ್ನು ತೆಗೆದುಕೊಳ್ಳಲೇ ಬೇಕು. ನಾವು ತೆಗೆದುಕೊಂಡಿದ್ದೇವೆ’’ ಎಂದಿದ್ದಾರೆ ಅಕ್ಷಯ್.
ಈಗಿನ ಸಂದರ್ಭದಲ್ಲಿ ಬಾಕ್ಸ್ಆಫೀಸ್ ಗಳಿಕೆಯನ್ನು ಹೇಗೆ ಸ್ವೀಕರಿಸಬೇಕು ಎಂದೂ ತಿಳಿಸಿರುವ ಅಕ್ಷಯ್, ಚಿತ್ರವು 30 ಕೋಟಿ ಗಳಿಕೆ ಮಾಡಿದರೆ ಅದು 100 ಕೋಟಿ ಗಳಿಕೆ ಮಾಡಿದ್ದಕ್ಕೆ ಸಮ. ಒಂದು ವೇಳೆ 50 ಕೋಟಿ ರೂ ಗಳಿಕೆ ಮಾಡಿದರೆ ಅದು 150 ಕೋಟಿ ರೂ ಗಳಿಕೆ ಮಾಡಿದಂತೆ ಎಂದಿದ್ಧಾರೆ. ಈ ಮೂಲಕ ‘ಬೆಲ್ಬಾಟಂ’ ಚಿತ್ರದ ಗಳಿಕೆಯ ಕುರಿತಂತೆ ಅಕ್ಷಯ್ ವಾಸ್ತವವನ್ನು ಅರ್ಥ ಮಾಡಿಕೊಂಡಿದ್ದು, ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದಾರೆ.
Source: tv9 Kannada