KGF 2 ಚಿತ್ರದ ಸ್ಯಾಟಲೈಟ್ ಹಕ್ಕು ಮಾರಾಟ; ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆಯಾ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

Aug 20, 2021

ಭಾರತದಾದ್ಯಂತ ಭರವಸೆ ಮೂಡಿಸಿರುವ, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಕನ್ನಡದ ಕೆಜಿಎಫ್ 2 ಚಿತ್ರದ ಕುರಿತು ಮತ್ತೊಂದು ಮಹತ್ವದ ಸುದ್ದಿ ನೀಡಿದೆ ಚಿತ್ರತಂಡ. ವರಮಹಾಲಕ್ಷ್ಮಿ ಹಬ್ಬದ ದಿನದಂದು ಶುಭ ಸುದ್ದಿ ನೀಡಿರುವ ಕೆಜಿಎಫ್ 2 ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಚಿತ್ರದ ಸ್ಯಾಟಲೈಟ್ ಪ್ರಸಾರದ ಜೊತೆಗಾರರನ್ನು ಘೋಷಿಸಿದೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಕೆಜಿಎಫ್ 2 ಬಿಡುಗಡೆಯಾಗಲಿದ್ದು, ಅವುಗಳ ಸ್ಯಾಟಲೈಟ್ ಪ್ರಸಾರದ ಹಕ್ಕನ್ನು ‘ಜೀ’ ಪಡೆದುಕೊಂಡಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಕೆಜಿಎಫ್ 2 ಬಿಡುಗಡೆಯಾಗಲಿದ್ದು, ಇವುಗಳಿಗೆ ಆಯಾ ಭಾಷೆಯ ಜೀ ಚಾನಲ್​ಗಳು ಪ್ರಸಾರದ ಹಕ್ಕನ್ನು ಪಡೆದುಕೊಂಡಿವೆ. ಈ ಕುರಿತು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿ ಮಾಹಿತಿಯನ್ನು ನೀಡಿದೆ.

ಕೆಜಿಎಫ್ 2 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಿಲ್ಲವೇ? ಇಲ್ಲಿದೆ ಉತ್ತರ:

ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ‘ಕೆಜಿಎಫ್ 2’ ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಇನ್ನೂ ಘೋಷಿಸಿಲ್ಲ. ಆದರೆ ಹೊಂಬಾಳೆ ಫಿಲ್ಮ್ಸ್ ಸತತವಾಗಿ ಚಿತ್ರದ ಕುರಿತು ಅಪ್ಡೇಟ್ ನೀಡುತ್ತಿದ್ದು, ಚಿತ್ರತಂಡ ಬಿಡುಗಡೆಯ ಕುರಿತು ಪ್ರಯತ್ನ ಮುಂದುವರೆಸಿರುವುದಂತೂ ನಿಜ. ಚಿತ್ರದ ಸ್ಯಾಟಲೈಟ್ ಹಕ್ಕು ಬಿಡುಗಡೆಯ ಘೋಷಣೆಯಾದ ತಕ್ಷಣ ಅಭಿಮಾನಿಗಳಿಗೆ ಗೊಂದಲವಾಗಿದ್ದು, ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆಯೇ ಎಂಬ ಪ್ರಶ್ನೆ ಎತ್ತಿದ್ದಾರೆ. ಆದರೆ ವಾಸ್ತವವಾಗಿ ಸ್ಯಾಟಲೈಟ್ ಹಕ್ಕು ಎನ್ನುವುದು ಚಿತ್ರವನ್ನು ಟಿವಿಯಲ್ಲಿ ಪ್ರಸಾರ ಮಾಡಲು ಪಡೆದುಕೊಳ್ಳುವ ಹಕ್ಕು. ಆ ಹಕ್ಕನ್ನು ಜೀ ಪಡೆದುಕೊಂಡಿದೆ. ಚಿತ್ರದ ಒಟಿಟಿ ಹಕ್ಕನ್ನು ನಿರ್ಮಾಣ ಸಂಸ್ಥೆ ಇನ್ನೂ ಯಾರಿಗೂ ನೀಡಿಲ್ಲ ಮತ್ತು ಈ ಕುರಿತು ಯಾವುದೇ ಘೋಷಣೆಯನ್ನೂ ಹೊರಡಿಸಿಲ್ಲ. ಬಲ್ಲ ಮೂಲಗಳ ಪ್ರಕಾರ ಎಲ್ಲವೂ ಅಂದುಕೊಂಡಂತೆ ನಡೆದರೆ ‘ಕೆಜಿಎಫ್ 2 ’ ಚಿತ್ರಮಂದಿರಗಳಲ್ಲಿಯೇ ಬಿಡುಗಡೆಯಾಗಲಿದೆ.

ಕೆಜಿಎಫ್ 2 ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್, ರವೀನಾ ಟಂಡನ್ ಮೊದಲಾದವರು ಅಭಿನಯಿಸಿದ್ದಾರೆ. ಪ್ಯಾನ್ ಇಂಡಿಯಾ ಮಾದರಿಯ ಈ ಚಿತ್ರಕ್ಕೆ ಈಗಾಗಲೇ ದೇಶದಾದ್ಯಂತ ಅಭಿಮಾನಿಗಳು ಕಾಯುತ್ತಿದ್ದಾರೆ.

Source: tv9 Kannada